ಬಳ್ಳಾರಿ: ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಲು ಜನಾರ್ಧನ್ ರೆಡ್ಡಿ ಅವರನ್ನು ಪಕ್ಷದಿಂದ ಹೊರಗಿಟ್ಟಿದ್ದೇ ಕಾರಣ ಎಂದು ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸೋಮಶೇಖರ ರೆಡ್ಡಿ, ಜನಾರ್ಧನ ರೆಡ್ಡಿ ಅವರನ್ನು ವಿನಾಕಾರಣ ಚುನಾವಣಾ ಪ್ರಚಾರದಿಂದ ದೂರ ಇಟ್ಟರು. ಮೊಳಕಾಲ್ಮೂರು ಕ್ಷೇತ್ರದಲ್ಲಿ ಜನಾರ್ಧನ ರೆಡ್ಡಿ ಪ್ರಚಾರ ಮಾಡಿದ್ದರಿಂದ ಬಿ.ಶ್ರೀರಾಮುಲು ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಹಾಗೆಯೇ ಇತರ ಕ್ಷೇತ್ರಗಳಲ್ಲೂ ಪ್ರಚಾರ ನಡೆಸಿದ್ದರೆ ಬಿಜೆಪಿ ಮತ್ತಷ್ಟು ಸ್ಥಾನಗಳನ್ನು ಗೆಲ್ಲುತ್ತಿತ್ತು. ಇದು ನನ್ನ ವೈಯಕ್ತಿಕ ಅಭಿಪ್ರಾಯವಲ್ಲ. ಬಿಜೆಪಿ ಪಕ್ಷದ ಹಲವು ಹಿರಿಯ ನಾಯಕರ ಅಭಿಪ್ರಾಯ ಕೂಡ ಹೌದು ಎಂದು ಹೇಳಿದರು.
ಅಕ್ರಮ ಗಣಿಕಾರಿಕೆ ಆರೋಪದ ಮೇಲೆ ಜಾಮೀನಿನ ಮೇಲೆ ಹೊರಗಿರುವ ಗಾಲಿ ಜನಾರ್ಧನ ರೆಡ್ಡಿ, ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿ.ಶ್ರೀರಾಮುಲು ವಿರುದ್ಧ ಪ್ರಚಾರ ನಡೆಸಿದ್ದರು. ಆದರೆ, ಭ್ರಷ್ಟಾಚಾರ ಪ್ರಕರಣದ ಆರೋಪಿಯಾಗಿರುವ ಜನಾರ್ಧನ ರೆಡ್ಡಿ ಅವರನ್ನು ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿರುವ ಬಗ್ಗೆ ಬಿಜೆಪಿಯನ್ನು ಹಲವು ತೀವ್ರ ಟೀಕೆ ಮಾಡಿದ್ದರು. ಇದೇ ವೇಳೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಕೂಡ, ಬಿಜೆಪಿಗೂ ಜನಾರ್ಧನ ರೆಡ್ಡಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೆ ನೀಡಿದ್ದರು.