ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ : ಮಸೀದಿ ಸ್ಥಳಾಂತಕ್ಕೆ ಇಸ್ಲಾಂ'ನಲ್ಲಿ ಅವಕಾಶ ಇದೆ ಎಂದ ಮೌಲಾನಾ ನದ್ವಿ

ಮಸೀದಿಯನ್ನು ಬೇರೆಡೆಗೆ ಸ್ಥಳಾಂತರಿಸುವುದಕ್ಕೆ ಇಸ್ಲಾಮ್‌ ನಲ್ಲಿ ಅವಕಾಶ ಇದೆ ಎಂದು ಅಖಿಲ ಭಾರತದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮೌಲಾನಾ ಸಯ್ಯದ್‌ ಸಲ್ಮಾನ್‌ ಹುಸೇನಿ ನದ್ವಿ ಹೇಳಿದ್ದಾರೆ.

Last Updated : Feb 9, 2018, 05:01 PM IST
ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ : ಮಸೀದಿ ಸ್ಥಳಾಂತಕ್ಕೆ ಇಸ್ಲಾಂ'ನಲ್ಲಿ ಅವಕಾಶ ಇದೆ ಎಂದ   ಮೌಲಾನಾ ನದ್ವಿ  title=

ಬೆಂಗಳೂರು : ಮಸೀದಿಯನ್ನು ಬೇರೆಡೆಗೆ ಸ್ಥಳಾಂತರಿಸುವುದಕ್ಕೆ ಇಸ್ಲಾಮ್‌ ನಲ್ಲಿ ಅವಕಾಶ ಇದೆ ಎಂದು ಅಖಿಲ ಭಾರತದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮೌಲಾನಾ ಸಯ್ಯದ್‌ ಸಲ್ಮಾನ್‌ ಹುಸೇನಿ ನದ್ವಿ ಹೇಳಿದ್ದಾರೆ. ಆರ್ಟ್‌ ಆಫ್ ಲಿವಿಂಗ್‌ ಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ಅವರೊಂದಿಗೆ ನಡೆದ ಸಭೆಯಲ್ಲಿ ಈ ಕುರಿತು ಮೌಲಾನಾ ನದ್ವಿ ಮಾತನಾಡಿದರು.  

ಬಾಬರಿ ಮಸೀದಿ - ರಾಮ ಜನ್ಮಭೂಮಿ ವಿವಾದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಬೆಂಗಳೂರಿನ ಆರು ಸದಸ್ಯರ ಮುಸ್ಲಿಂ ನಿಯೋಗವನ್ನು ಶ್ರೀ ರವಿಶಂಕರ್ ಗುರುಜಿ ಅವರು ಭೇಟಿ ಮಾಡಿದ್ದರು. ಈ ಸಭೆ ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆಯಿತು.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯಕಾರಿಣಿ ಸದಸ್ಯ ಮೌಲಾನಾ ಸಯ್ಯದ್‌ ಸಲ್ಮಾನ್‌ ಹುಸೇನಿ ನದ್ವಿ, ಉತ್ತರಪ್ರದೇಶ ಸುನ್ನಿ ಸೆಂಟ್ರಲ್‌ ವಕ್ಫ್ ಬೋರ್ಡ್‌ ಅಧ್ಯಕ್ಷೆ ಝುಫ‌ರ್‌ ಫ‌ರೂಕೀ, ಮಾಜಿ ಐಎಎಸ್‌ ಅಧಿಕಾರಿ ಅನೀಸ್‌ ಅನ್ಸಾರಿ, ವಕೀಲ ಇಮ್ರಾನ್‌ ಅಹ್ಮದ್‌, ತೀಲಿ ವಲೀ ಮಸೀದಿಯ ಮೌಲಾನಾ ವಸೀಫ್ ಹಸನ್‌ ವೈಝೀ, ಮತ್ತು ಆಬ್‌ಜೆಕ್ಟೀವ್‌ ರಿಸರ್ಚ್‌ ಆ್ಯಂಡ್‌ ಡೆವಲೆಪ್‌ಮೆಂಟ್‌ ನಿರ್ದೇಶಕ ಅತಾರ್‌ ಹುಸೇನ್‌ ಈ ನಿಯೋಗದಲ್ಲಿ ಹಾಜರಿದ್ದರು. ಈ ನಿಯೋಗದ ಮುಂದಿನ ಸಭೆ ಮಾರ್ಚ್ ನಲ್ಲಿ ಅಯೋಧ್ಯೆಯಲ್ಲಿ ನಡೆಯಲಿದೆ.

ಅಯೋಧ್ಯಾ ವಿವಾದದಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ವಿಚಾರಣೆ ಆರಂಭಿಸಿದ ಹಿನ್ನೆಲೆಯಲ್ಲಿ ಈ ಸಭೆ ಆಯೋಜಿಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ನ್ಯಾಯಮೂರ್ತಿ ಅಬ್ದುಲ್ ನಝೀರ್ ಅವರು ಅಯೋಧ್ಯೆಯಲ್ಲಿ ವಿವಾದಿತ ಪ್ರದೇಶದ ಸುಮಾರು 13 ಅರ್ಜಿಗಳ ವಿಚಾರಣೆಯನ್ನು ಗುರುವಾರ ಮಧ್ಯಾಹ್ನ 2 ಗಂಟೆಗೆ ನಡೆಸಿದರು. 

ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಉನ್ನತ ನ್ಯಾಯಾಲಯದ ವಿಶೇಷ ಪೀಠವು ಇನ್ನೆರಡು ವಾರಗಳಲ್ಲಿ ಅವರು ನೀಡಿದ ದಾಖಲೆಗಳ ಇಂಗ್ಲಿಷ್ ಅನುವಾದವನ್ನು ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಎರಡೂ ಪಕ್ಷಗಳಿಗೆ ಸೂಚಿಸಿತು.

ಹೈಕೋರ್ಟ್ ದಾಖಲೆಗಳ ಭಾಗವಾಗಿರುವ ವಿಡಿಯೋ ಕ್ಯಾಸೆಟ್ಗಳ ನಕಲುಗಳನ್ನು ನೈಜ ವೆಚ್ಚದಲ್ಲಿ ಸಲ್ಲಿಸುವಂತೆ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತು. ಅಲ್ಲದೆ, ಮುಂದಿನ ವಿಚಾರಣೆಯನ್ನು ಮಾರ್ಚ್ 14, 2018 ರಂದು ನಡೆಸಲಾಗುವುದು ಎಂದು ಹೇಳಿದ ಪೀಠವು, ದಿನನಿತ್ಯದ ಆಧಾರದ ಮೇಲೆ ಅರ್ಜಿಗಳನ್ನು ಆಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. 

ಅಲ್ಲದೆ, ಈ ವಿವಾದವನ್ನು "ಶುದ್ಧ ಭೂಮಿ ವಿವಾದ" ಎಂದು ಪೀಠವು ಪರಿಗಣಿಸಿದೆ. ಹಾಗಾಗಿ, ಸುಪ್ರೀಂ ಕೋರ್ಟ್ನ ವಿಶೇಷ ಪೀಠವು ನಾಲ್ಕು ಸಿವಿಲ್ ಸೂಟ್ಗಳಲ್ಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಿದ ಒಟ್ಟು 14 ಮೇಲ್ಮನವಿಗಳನ್ನು ವಶಪಡಿಸಿಕೊಂಡಿರುವುದಾಗಿ ಕೋರ್ಟ್ ತಿಳಿಸಿದೆ. 

ಈ ಪ್ರಕರಣದ ಕೊನೆಯ ವಿಚಾರಣೆಯನ್ನು ಡಿಸೆಂಬರ್ 5, 2017 ರಂದು ನಡೆಸಲಾಗಿತ್ತು. ಕಪಿಲ್ ಸಿಬಲ್ ಸೇರಿದಂತೆ ಹಿರಿಯ ವಕೀಲರು ವಿಚಾರಣೆಯನ್ನು ಮುಂದೂಡಬೇಕೆಂದು ಮನವಿ ಮಾಡಿದ್ದರು. 2019 ರ ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ವಿಚಾರಣೆ ನಡೆಯಬೇಕೆಂದೂ, ಜುಲೈ 2019 ಕ್ಕೆ ವಿಚಾರಣೆಯನ್ನು ಮುಂದೂಡಬೇಕೆಂದು ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ನ ಪರವಾಗಿ ಸಿಬಲ್ ವಾದ ಮಂಡಿಸಿದ್ದರು. ಅಲ್ಲದೆ, ಈ ಪ್ರಕರಣವನ್ನು ಐದು ನ್ಯಾಯಾಧೀಶರ ಸಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕೆಂದೂ ವಕೀಲರು ಒತ್ತಾಯಿಸಿದ್ದರು.

Trending News