ಬೆಂಗಳೂರು: ಡ್ರಗ್ಸ್ ಮಾಫಿಯಾ ಬಗ್ಗೆ ಮೊದಲು ಧ್ವನಿ ಎತ್ತಿದ್ದೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ
ಈಗ ಈ ಜಾಲದಲ್ಲಿ ಸಿಕ್ಕಿ ಬೀಳುತ್ತಿರುವವರು ಬಿಜೆಪಿಯ ಜೊತೆಗೆ ಅಂತರಂಗ ಮತ್ತು ಬಹಿರಂಗದ ಸಖ್ಯ ಉಳ್ಳವರೇ ಆಗಿರುವುದರಿಂದ ಕನಲಿ ಹೋಗಿರುವ ಕೃಷಿ ಸಚಿವ ಬಿ. ಸಿ. ಪಾಟೀಲ್ ಬಾಲ ಸುಟ್ಟ ಬೆಕ್ಕಿನಂತೆ ಆಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರ ಆಪ್ತ ಮತ್ತು ಮಾಜಿ ಸಚಿವ ಸಾ.ರಾ. ಮಹೇಶ್ (Sa Ra Mahesh) ಕಿಡಿಕಾರಿದ್ದಾರೆ.
ಡ್ರಗ್ಸ್ ಮಾಫಿಯಾ ಬಗ್ಗೆ ಮೊದಲು ಧ್ವನಿ ಎತ್ತಿದ್ದೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. ಈ ಜಾಲದಲ್ಲಿ ಸಿಕ್ಕಿ ಬೀಳುತ್ತಿರುವವರು ಬಿಜೆಪಿಯ ಜೊತೆಗೆ ಅಂತರಂಗ-ಬಹಿರಂಗ ಸಖ್ಯ ಉಳ್ಳವರೇ ಆಗಿರುವುದರಿಂದ ಕನಲಿ ಹೋಗಿರುವ ಕೃಷಿ ಸಚಿವ ಬಿ ಸಿ ಪಾಟೀಲರು ಬಾಲ ಸುಟ್ಟ ಬೆಕ್ಕಿನಂತೆ ಆಡುತ್ತಿದ್ದಾರೆ.
1/6— Sa Ra Mahesh (@SaRa_Mahesh_JDS) September 8, 2020
ಡ್ರಗ್ಸ್ ಮಾಫಿಯಾ ಹಣದಿಂದಲೇ ಮೈತ್ರಿ ಸರ್ಕಾರ ಪತನವಾಯಿತೆಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್, 'ಕುಮಾರಸ್ವಾಮಿ ಒಂದು ವರ್ಷ ಸುಮ್ಮನಿದ್ದಿದ್ದು ಏಕೆ? ಡ್ರಗ್ಸ್ (Drugs) ವಿಚಾರ ಸುದ್ದಿಯಲ್ಲಿರುವ ಸಂದರ್ಭದಲ್ಲಿ ಆರೋಪಿಸುತ್ತಿರುವುದೇಕೆ? ಮೈತ್ರಿ ಸರ್ಕಾರದ ನಿಶೆಯಿಂದ ಹೊರಬರಲು ಕುಮಾರಸ್ವಾಮಿಗೆ ಒಂದು ವರ್ಷ ಬೇಕಾಯಿತೇ? ಮೈತ್ರಿ ಸರ್ಕಾರ ಅಸ್ಥಿರಗೊಂಡಾಗ ಏಕೆ ಕುಮಾರಸ್ವಾಮಿ ಹೇಳಲಿಲ್ಲ. ಕುಮಾರಸ್ವಾಮಿ ಆಗಾಗ ಊಸರವಳ್ಳಿಯಂತೆ ಬಣ್ಣಬದಲಾಯಿಸುತ್ತಿರುತ್ತಾರೆ' ಎಂದು ಹೇಳಿದ್ದರು.
ಹೆಚ್.ಡಿ.ಕುಮಾರಸ್ವಾಮಿ ಊಸರವಳ್ಳಿಯಂತೆ ಆಗಾಗ ಬಣ್ಣಬದಲಾಯಿಸುತ್ತಾರೆ: ಬಿ.ಸಿ. ಪಾಟೀಲ್
ಇದಕ್ಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಅವರ ಆಪ್ತ ಮತ್ತು ಮಾಜಿ ಸಚಿವ ಸಾ.ರಾ. ಮಹೇಶ್ ಸರಣಿ ಟ್ವೀಟ್ ಮಾಡಿ ಬಿ.ಸಿ. ಪಾಟೀಲ್ ಅವರಿಗೆ ತಿರುಗೇಟು ನೀಡಿದ್ದಾರೆ. 'ಕ್ರಿಕೆಟ್ ಬೆಟ್ಟಿಂಗ್, ಡ್ರಗ್ ಮಾಫಿಯಾ ಮಟ್ಟಹಾಕಲು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಬಿಸಿ ಮುಟ್ಟಿಸಿದ್ದರಿಂದಲೇ ದೇಶಾಂತರ ಓಡಿಹೋಗಿ ತಲೆಮರೆಸಿಕೊಂಡಿದ್ದವರು ಜಾಮೀನು ಪಡೆದು ಬಂದಿದ್ದು, ಇದಕ್ಕೆ ತೆರೆಮರೆಯಲ್ಲಿ ನಿಂತು ವ್ಯವಸ್ಥೆ ಮಾಡಿದವರು ಯಾರು ಎಂಬುದು ಗುಟ್ಟಾಗಿ ಉಳಿದಿಲ್ಲ' ಎಂದು ಹೇಳಿದ್ದಾರೆ.
'ಅಧಿಕಾರದ ಆಸೆಗಾಗಿ ಬಣ್ಣ, ವೇಷ ಬದಲಿಸುವ ಜಾಯಮಾನ ಕೃಷಿ ಸಚಿವರಿಗೆ ಕರಗತವಾಗಿದೆ. ಉಸರವಳ್ಳಿಯನ್ನು ನಾಚಿಸುವಂತೆ ನಾಲಗೆಯ ಬಣ್ಣವನ್ನೂ ಬದಲಿಸುವ ಇಂತಹ ಬೃಹಸ್ಪತಿಗಳು ಕುಮಾರಸ್ವಾಮಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಲಿ' ಎಂದು ಒತ್ತಾಯಿಸಿದ್ದಾರೆ.
ಅಧಿಕಾರದ ಆಸೆಗಾಗಿ ಬಣ್ಣ, ವೇಷ ಬದಲಿಸುವ ಜಾಯಮಾನ ಕೃಷಿ ಸಚಿವರಿಗೆ ಕರಗತವಾಗಿದೆ. ಉಸರವಳ್ಳಿಯನ್ನು ನಾಚಿಸುವಂತೆ ನಾಲಗೆಯ ಬಣ್ಣವನ್ನೂ ಬದಲಿಸುವ ಇಂತಹ ಬೃಹಸ್ಪತಿಗಳು ಕುಮಾರಸ್ವಾಮಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಲಿ.
3/6— Sa Ra Mahesh (@SaRa_Mahesh_JDS) September 8, 2020
'ಪೂರ್ವಾಶ್ರಮದಲ್ಲಿ ಪೊಲೀಸ್ ಇಲಾಖೆಯಲ್ಲಿ ಇದ್ದ ಪಾಟೀಲರಿಗೆ ಇಂತಹ ಮಾಫಿಯಾಗಳ ಬಗ್ಗೆ ಅರಿವಿಲ್ಲ ಎಂದರೆ ಅವರು ಪಾಲಿಸಿದ ವೃತ್ತಿನಿಷ್ಠೆ ಏನೆಂಬುದು ನಗೆಪಾಟಲಿನ ಸಂಗತಿ ಅಷ್ಟೇ ಅಲ್ಲ, ಎಂತೆಂತಹ ಊಸರವಳ್ಳಿಗಳು ಪೊಲೀಸ್ ಇಲಾಖೆಯಲ್ಲಿ ಇದ್ದರು ಎಂಬ ಬಗ್ಗೆ ಮರುಕವಿದೆ' ಎಂದು ಸಾ.ರಾ. ಮಹೇಶ್, ಬಿ.ಸಿ. ಪಾಟೀಲ್ ಕಾಲೆಳೆದಿದ್ದಾರೆ.
'ಖಾವಿ ತೊಟ್ಟ ಮಾರ್ಜಾಲ ಸಂನ್ಯಾಸಿಯಂತೆ ಖಾಕಿ ಕಳಚಿ ಖಾದಿ ಧರಿಸಿದ ನಂತರ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸಬೇಕಾಗಿಲ್ಲ ಎಂಬ ಉಡಾಫೆಯ ಪ್ರತಿಕ್ರಿಯೆ ನೀಡುತ್ತಿರುವ ಪಾಟೀಲರು ನಿಜವಾದ ಊಸರವಳ್ಳಿ' ಎಂದು ಕುಟುಕಿದ್ದಾರೆ.
'ರಾಜ್ಯದ ಕೃಷಿಕರು ಯೂರಿಯಾ ಸೇರಿದಂತೆ ರಸಗೊಬ್ಬರ ಕೊರತೆ ಎದುರಿಸುತ್ತಿರುವುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎಂಬುದನ್ನು ತಮ್ಮ ಹೇಳಿಕೆಯಲ್ಲಿ ಒಪ್ಪಿಕೊಂಡಿರುವ ಪಾಟೀಲರು ಎಷ್ಟು ಮಂದಿ ವಿರುದ್ಧ ಕೇಸು ಜಡಿದಿದ್ದಾರೆ? ಎಂಬ ವಿವರವನ್ನು ಜನತೆಯ ಮುಂದಿಡಲಿ' ಎಂದು ಒತ್ತಾಯಿಸಿದ್ದಾರೆ.