ಮೈಸೂರು: ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿ ತೆರೆಮರೆಯಲ್ಲಿ ಅಪರೇಷನ್ ಕಮಲಕ್ಕೆ ಯತ್ನಿಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ, ಬಿಜೆಪಿಯ 10 ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಹೊಸ ಬಾಂಬ್ ಸಿಡಿಸುವ ಮೂಲಕ ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಕಮಲ ಪಾಳಯ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ.ಮಹೇಶ್ 'ಹಲವು ವರ್ಷಗಳು ನಾನೂ ಬಿಜೆಪಿಯಲ್ಲಿ ಇದ್ದವನು. ಬಿಜೆಪಿಯ ಕೆಲ ನಾಯಕರಿಗೆ ಈಗ ಅಧಿಕಾರದ ಆಸೆ ಹಿಡಿದಿದೆ. ಇದಕ್ಕಾಗಿ ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ'. ಹೀಗಾಗಿ ಇಲ್ಲ ಸಲ್ಲದ ಆಸೆ ತೋರಿಸಿ ಸರ್ಕಾರವನ್ನ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ನಮ್ಮ ಶಾಸಕರಲ್ಲಿ ಒಬ್ಬರನ್ನ ಸೆಳೆಯಲು ಯತ್ನಿಸಿದ್ರೆ, ಜೆಡಿಎಸ್ ನಾಯಕರು ಮತ್ತು ಮುಖಂಡರ ಶಕ್ತಿ ಏನು ಅಂತಾ ಗೊತ್ತಾಗುತ್ತೆ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ರವಾನಿಸಿದರು.
ನಮಗೂ ಶಕ್ತಿ ಇದೆ, ಬಿಜೆಪಿಯ ತಂತ್ರಗಳನ್ನು ಎದುರಿಸುವ ಶಕ್ತಿ ನಮಗಿದೆ. ನಮ್ಮ ನಾಯಕರ ಸಾಮರ್ಥ್ಯವನ್ನು ತೋರಿಸಬೇಕಾಗುತ್ತದೆ ಎಂದ ಸಾ.ರಾ. ಮಹೇಶ್, ನಮ್ಮ ಪಕ್ಷದ ಶಾಸಕರ್ಯಾರೂ ಅಪರೇಷನ್ ಕಮಲಕ್ಕೆ ಬಲಿಯಾಗುವುದಿಲ್ಲ. ಅಂದಹಾಗೆ ಬಿಜೆಪಿಯ 10 ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಸಚಿವ ಸಾ.ರಾ ಮಹೇಶ್ ಹೇಳಿದರು.