ಇದು ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್: ಸಿದ್ದರಾಮಯ್ಯ

ಬಡ್ಡಿ ರೂಪದಲ್ಲಿ ಹೆಚ್ಚು ಪಾವತಿ ಮಾಡಬೇಕಾಗಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವೂ ಕಡಿಮೆಯಾಗುತ್ತದೆ. ಮುಂದಿನ ವರ್ಷಕ್ಕೆ 77,750 ಕೋಟಿ ರೂ. ಸಾಲ ಮಾಡುವುದಾಗಿ ಸರ್ಕಾರ ಹೇಳಿದೆ. ಸಾಲದ ಪ್ರಮಾಣ ಶೇ.95ರಷ್ಟು ಹೆಚ್ಚಾಗಿದೆ. ಹೀಗಾದಾಗ ಬಜೆಟ್‌ ಅಭಿವೃದ್ಧಿಪರವಾಗಿರಲು ಹೇಗೆ ಸಾಧ್ಯ?ವೆಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Written by - Prashobh Devanahalli | Edited by - Puttaraj K Alur | Last Updated : Feb 17, 2023, 03:32 PM IST
  • 2 ತಿಂಗಳಲ್ಲಿ ಚುನಾವಣೆ ಇರುವುದರಿಂದ ಇದನ್ನು ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್‌ ಎನ್ನಬಹುದು
  • ಕಳೆದ ಬಜೆಟ್‍ನಲ್ಲಿ ಘೋಷಿಸಿದ್ದ 56 ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿಲ್ಲ
  • ಇದು ಬಿಜೆಪಿ ಸರ್ಕಾರದ ಚುನಾವಣಾ ಬಜೆಟ್‌ ಎಂದು ಟೀಕಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ
 ಇದು ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್: ಸಿದ್ದರಾಮಯ್ಯ title=
ಬಜೆಟ್ ವಿರುದ್ಧ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಇದು ಬಿಜೆಪಿ ಸರ್ಕಾರದ ಚುನಾವಣಾ ಬಜೆಟ್‌. ಇನ್ನು 2 ತಿಂಗಳಲ್ಲಿ ಚುನಾವಣೆ ಇರುವುದರಿಂದ ಇದನ್ನು ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್‌ ಎನ್ನಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ ಕರ್ನಾಟಕ ಬಜೆಟ್‍ಗೆ ಅವರು ಟೀಕೆ ವ್ಯಕ್ತಪಡಿಸಿದ್ದಾರೆ.

ಬಜೆಟ್‌ ಗಾತ್ರ 3,09,182 ಕೋಟಿ ರೂ. ಇದೆ. ಕಳೆದ ಬಜೆಟ್‍ನಲ್ಲಿ ಘೋಷಿಸಿದ್ದ 56 ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿಲ್ಲ. 2018ರಲ್ಲಿ ಬಿಜೆಪಿ ರಾಜ್ಯದ ಜನರಿಗೆ ಪ್ರಣಾಳಿಕೆ ಮೂಲಕ 600 ಭರವಸೆಗಳನ್ನು ನೀಡಿತ್ತು. ಈ ಪೈಕಿ ಶೇ.90ರಷ್ಟು ಭರವಸೆಗಳನ್ನು ಈಡೇರಿಸಿಲ್ಲ. ನಮ್ಮ ಸರ್ಕಾರದ ಕೊನೆಯ ಬಜೆಟ್‍ನ 5 ವರ್ಷದಲ್ಲಿ ಸರ್ಕಾರದ ಸಾಧನೆಗಳು ಏನು? ಮತ್ತು ಮುಂದೆ ಅಧಿಕಾರಕ್ಕೆ ಬಂದಾಗ ಏನೇನು ಮಾಡುತ್ತೇವೆಂದು ಸ್ಪಷ್ಟವಾಗಿ ಹೇಳಿದ್ದೆವು. ಆದರೆ ಈ ಬಜೆಟ್‌ ಪುಸ್ತಕದಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳ ಮಾಹಿತಿಯೇ ಇಲ್ಲವೆಂದು ಹೇಳಿದ್ದಾರೆ.

ಇದನ್ನೂ ಓದಿ: ರೈತರ ಕಿವಿ ಮೇಲೆ ಸಾಲಮನ್ನಾ ಮಾಡುವ ಹೂ: ಸಾಲಮನ್ನಾ ಇಲ್ಲ, ಬೆಂಬಲ ಬೆಲೆಯೂ ಇಲ್ಲ-ಕಾಂಗ್ರೆಸ್

ಕಳೆದ ಬಜೆಟ್‍ನಲ್ಲಿ 206 ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದರು. ಇದರಲ್ಲಿ 56 ಕಾರ್ಯಕ್ರಮಗಳನ್ನು ಜಾರಿ ಮಾಡಿಲ್ಲ. ಇದಕ್ಕೆ ಸರ್ವಜ್ಞನ ವಚನ ‘ಆಡದಲೆ ಮಾಡುವವನು ರೂಢಿಯೊಳಗುತ್ತಮನು, ಆಡಿ ಮಾಡುವವನು ಮಧ್ಯಮನು, ತಾನಾಡಿಯೂ ಮಾಡದವನು ಅಧಮನು’ ಎಂಬ ವಚನ ಬಿಜೆಪಿ ಸರ್ಕಾರಕ್ಕೆ ಹೆಚ್ಚು ಹೊಂದಾಣಿಕೆಯಾಗುತ್ತದೆ’ ಎಂದು ಕುಟುಕಿದ್ದಾರೆ.

ನಮ್ಮ ಸರ್ಕಾರದ ಅವಧಿಯಲ್ಲಿ 2.2 ಲಕ್ಷ ಕೋಟಿ ರೂ. ಬಜೆಟ್‌ ಗಾತ್ರವಿತ್ತು. SCP/STP ಯೋಜನೆಗೆ ನಾವು 30 ಸಾವಿರ ಕೋಟಿ ರೂ. ಹಣ ನೀಡಿದ್ದೆವು. ಆದರೆ ಈಗಿನ ಬಜೆಟ್‌ ಗಾತ್ರ 3.9 ಲಕ್ಷ ಕೋಟಿ ಇದ್ದರೂ ಈ ಯೋಜನೆಗೆ ನೀಡಿರುವ ಅನುದಾನ 30 ಸಾವಿರ ಕೋಟಿಯೇ ಇದೆ. ಹಿಂದಿನ ವರ್ಷ ಖರ್ಚಾಗಿರುವ ಹಣವನ್ನೂ ಹೇಳಿಲ್ಲ, ನನ್ನ ಪ್ರಕಾರ ಈ ಯೋಜನೆಗೆ ನೀಡುವ ಅನುದಾನ ಕನಿಷ್ಠ 50 ಸಾವಿರ ಕೋಟಿ ರೂ. ಆಗಬೇಕಿತ್ತು. ಇದು ದಲಿತರಿಗೆ, ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಮಾಡಿರುವ ದೊಡ್ಡ ದ್ರೋಹ’ವೆಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: Karnataka Budget 2023: ಹಿಂದುಳಿದ ವರ್ಗಗಳು-ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬೊಮ್ಮಾಯಿ ಕೊಡುಗೆ ಏನು?

ಈ ವರ್ಷದ ಅಂತ್ಯಕ್ಕೆ 5,64,896 ಕೋಟಿ ರೂ. ಸಾಲ ಆಗುತ್ತದೆ ಎಂದು ಹೇಳಿದ್ದಾರೆ. ನಾವು ಅಧಿಕಾರದಿಂದ ಇಳಿದಾಗ ರಾಜ್ಯದ ಮೇಲೆ 2 ಲಕ್ಷದ 42 ಸಾವಿರ ಕೋಟಿ ರೂ. ಇತ್ತು, ಅಂದರೆ ಈಗ 3 ಲಕ್ಷದ 22 ಸಾವಿರ ಕೋಟಿ ಸಾಲ ಹೆಚ್ಚಾಗಿದೆ. 2018-19ರಲ್ಲಿ ಸಮ್ಮಿಶ್ರ ಸರ್ಕಾರ ಮಾಡಿದ್ದ ಸಾಲ 41,914 ಕೋಟಿ ರೂ. ಇದೆ. ಇದನ್ನು ಬಿಟ್ಟರೆ ಉಳಿದ 4 ವರ್ಷದಲ್ಲಿ ಬಿಜೆಪಿ ಸರ್ಕಾರ 2,54,760 ಕೋಟಿ ರೂ. ಸಾಲ ಮಾಡಿದೆ. ಸ್ವಾತಂತ್ರ್ಯ ಬಂದ ನಂತರದಿಂದ ನಮ್ಮ ಸರ್ಕಾರದ ಕೊನೆಯವರೆಗೆ ಇದ್ದ ಸಾಲ 2 ಲಕ್ಷದ 42 ಸಾವಿರ ಕೋಟಿ ರೂ., ನಮ್ಮ 5 ವರ್ಷಗಳ ಆಡಳಿತದಲ್ಲಿ ಮಾಡಿದ್ದ ಒಟ್ಟು ಸಾಲ 1,16,512 ಕೋಟಿ ರೂ. ಇದೆ. ಸಾಲ ಎಲ್ಲಾ ಕಾಲದಲ್ಲೂ ಎಲ್ಲಾ ಸರ್ಕಾರಗಳು ಮಾಡುತ್ತವೆ, ಆದರೆ ಬರೀ 4 ವರ್ಷದಲ್ಲಿ 3,22,000 ಕೋಟಿ ರೂ. ಸಾಲ ಮಾಡಿದ್ದಾರೆ. ಸಾಲ ಹೆಚ್ಚಾಗಿರುವುದರಿಂದ ಕೇವಲ ಬಡ್ಡಿ ರೂಪದಲ್ಲಿ ನಾವು 34,000 ಕೋಟಿ ರೂ. ಹಣ ಪಾವತಿಸಬೇಕಾಗುತ್ತದೆ. ಈ ಸರ್ಕಾರ ರಾಜ್ಯದ ಜನರನ್ನು ಸಾಲಗಾರರನ್ನಾಗಿ ಮಾಡಿದೆ, ಕೊಟ್ಟ ಭರವಸೆಗಳನ್ನು ಕೂಡ ಈಡೇರಿಸಿಲ್ಲ. ಬಡ್ಡಿ ರೂಪದಲ್ಲಿ ಹೆಚ್ಚು ಪಾವತಿ ಮಾಡಬೇಕಾಗಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವೂ ಕಡಿಮೆಯಾಗುತ್ತದೆ. ಮುಂದಿನ ವರ್ಷಕ್ಕೆ 77,750 ಕೋಟಿ ರೂ. ಸಾಲ ಮಾಡುವುದಾಗಿ ಸರ್ಕಾರ ಹೇಳಿದೆ. ಸಾಲದ ಪ್ರಮಾಣ ಶೇ.95ರಷ್ಟು ಹೆಚ್ಚಾಗಿದೆ. ಹೀಗಾದಾಗ ಬಜೆಟ್‌ ಅಭಿವೃದ್ಧಿಪರವಾಗಿರಲು ಹೇಗೆ ಸಾಧ್ಯ?’ವೆಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News