"ಮಾನ ಮರ್ಯಾದೆ ಇದ್ದರೆ ಬೊಮ್ಮಾಯಿ ರಾಜೀನಾಮೆ ನೀಡಲಿ"

'ರಾಜ್ಯದ ನೆಲ, ಜಲ, ಭಾಷೆ ಕಾಪಾಡಿ ಜನರ ಹಿತ ಕಾಯುವ ಪ್ರತಿಜ್ಞೆ ಮೂಲಕ ಪ್ರಮಾಣ ವಚನ ಸ್ವೀಕರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮಾನ ಮರ್ಯಾದೆ ಇದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

Written by - Zee Kannada News Desk | Last Updated : Apr 7, 2023, 10:20 PM IST
  • 'ನಮ್ಮ ರಾಜ್ಯದ ಗಡಿ ಹಳ್ಳಿಗಳಲ್ಲಿ ಮಹಾರಾಷ್ಟ್ರದ ಬಿಜೆಪಿ ಹಾಗೂ ಶಿವಸೇನೆ ಸರ್ಕಾರ ತಮ್ಮ ಯೋಜನೆ ಜಾರಿ ಮಾಡಲು ಹಣ ನೀಡಿದ್ದಾರೆ.
  • ಇದು ಸರಿಯೇ? ಕಲಾವಿದರು, ಸಾಹಿತಿಗಳು, ಕನ್ನಡಪರ ಹೋರಾಟಗಾರರು ಏನು ಮಾಡುತ್ತಿದ್ದಾರೆ?
 "ಮಾನ ಮರ್ಯಾದೆ ಇದ್ದರೆ ಬೊಮ್ಮಾಯಿ ರಾಜೀನಾಮೆ ನೀಡಲಿ" title=
file photo

ಬೆಂಗಳೂರು: 'ರಾಜ್ಯದ ನೆಲ, ಜಲ, ಭಾಷೆ ಕಾಪಾಡಿ ಜನರ ಹಿತ ಕಾಯುವ ಪ್ರತಿಜ್ಞೆ ಮೂಲಕ ಪ್ರಮಾಣ ವಚನ ಸ್ವೀಕರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮಾನ ಮರ್ಯಾದೆ ಇದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಉತ್ತರಿಸಿದ ಅವರು ಹೇಳಿದ್ದಿಷ್ಟು;

'ನಮ್ಮ ರಾಜ್ಯದ ಗಡಿ ಹಳ್ಳಿಗಳಲ್ಲಿ ಮಹಾರಾಷ್ಟ್ರದ ಬಿಜೆಪಿ ಹಾಗೂ ಶಿವಸೇನೆ ಸರ್ಕಾರ ತಮ್ಮ ಯೋಜನೆ ಜಾರಿ ಮಾಡಲು ಹಣ ನೀಡಿದ್ದಾರೆ. ಇದು ಸರಿಯೇ? ಕಲಾವಿದರು, ಸಾಹಿತಿಗಳು, ಕನ್ನಡಪರ ಹೋರಾಟಗಾರರು ಏನು ಮಾಡುತ್ತಿದ್ದಾರೆ? 

ಕನ್ನಡ ನೆಲ, ಜಲ, ಭಾಷೆ ಉಳಿಸಬೇಕಾದವರು ಈ ಬಗ್ಗೆ ಉಸಿರು ಎತ್ತುತ್ತಿಲ್ಲ. ಮಹಾರಾಷ್ಟ್ರ ಸರ್ಕಾರ ನಮ್ಮ ರಾಜ್ಯದಲ್ಲಿ ಹೇಗೆ ಯೋಜನೆ ಜಾರಿ ತರಲು ಮುಂದಾಗಿದೆ? ರಾಜ್ಯದ ಹಿತ ರಕ್ಷಣೆ ಮಾಡುವುದಾಗಿ ಹೇಳಿ ಪ್ರಮಾಣ ವಚನ ಸ್ವೀಕರಿಸಿರುವ ಮುಖ್ಯಮಂತ್ರಿಗಳಿಗೆ ಮಾನ ಮರ್ಯಾದೆ ಇದ್ದರೆ ತಕ್ಷಣ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯಪಾಲರೇ ಅವರನ್ನು ವಜಾಗೊಳಿಸಬೇಕು. 

ಇದನ್ನೂ ಓದಿ: "ಈ ಬಾರಿ ಪರಮೇಶ್ವರ ಅವರನ್ನು ಸೋಲಿಸುತ್ತೇವೆ"

ನಮ್ಮ ಜನರಿಗೆ ಮಹಾರಾಷ್ಟ್ರ ಯೋಜನೆ ನೀಡಲು ಅವರು ಯಾರು? ನಮ್ಮಲ್ಲಿ ಸರ್ಕಾರ ಇಲ್ಲವೇ?' ಎಂದು ಪ್ರಶ್ನಿಸಿದರು.

ಚಿತ್ರ ನಟರು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಕೇಳಿದಾಗ, 'ಯಾರು ಯಾರಿಗೆ ಬೇಕಾದರೂ ಪ್ರಚಾರ ಮಾಡಲಿ, ಸರ್ಕಾರ ಇದ್ದಾಗ ಇದು ಸಾಮಾನ್ಯ' ಎಂದು ತಿಳಿಸಿದರು.

ರಾಜ್ಯಕ್ಕೆ ಅಮೂಲ್ ಹಾಲು ಪ್ರವೇಶ ಮಾಡಿರುವ ಬಗ್ಗೆ ಕೇಳಿದಾಗ, ' ನಂದಿನಿ ಮುಗಿಸಿ ಅಮೂಲ್ ಬೆಳೆಸಲು ಬಿಜೆಪಿ ತೀರ್ಮಾನಿಸಿದೆ. ಆ ಮೂಲಕ ರಾಜ್ಯದ ಹಾಲು ಉತ್ಪಾದಕ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ' ಎಂದು ತಿಳಿಸಿದರು.

ರಘು ಆಚಾರ್ ಸೇರಿದಂತೆ ಕೆಲವರು ಕಾಂಗ್ರೆಸ್ ತೊರೆಯುವ ಬಗ್ಗೆ ಕೇಳಿದ ಪ್ರಶ್ನೆಗೆ, 'ಅವರು ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದಾರೆ. ಟಿಕೆಟ್ ಸಿಗದೇ ಇರುವುದಕ್ಕೆ ಬೇಸರ ಸಹಜ. ನಾವು ನಮ್ಮದೇ ಲೆಕ್ಕಾಚಾರದಿಂದ ಟಿಕೆಟ್ ನೀಡಿದ್ದೇವೆ' ಎಂದು ತಿಳಿಸಿದರು.

ಕೆಲವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಕೇಳಿದಾಗ, ' ಮೊದಲು ಬಿಜೆಪಿ ಪಟ್ಟಿ ಬಿಡುಗಡೆ ಆಗಲಿ. ಆನಂತರ ನಾವು ಚರ್ಚೆ ಮಾಡುತ್ತೇವೆ' ಎಂದರು.

ಬಿಜೆಪಿಯಿಂದ ಕಾಂಗ್ರೆಸ್ ಸೇರುವವರು ಬಾಕಿ ಇದ್ದಾರಾ ಎಂದು ಕೇಳಿದಾಗ, 'ಈಗ ಆ ಬಗ್ಗೆ ಚರ್ಚೆ ಮಾಡುವುದಿಲ್ಲ' ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರ್ಯಾಗರ್ ಹಿಡಿದು ರಸ್ತೆಯಲ್ಲೇ ಬೆದರಿಕೆ ಒಡ್ಡಿದ ಟಾಟಾ ಏಸ್ ಚಾಲಕ

ಉಳಿದ ಕ್ಷೇತ್ರಗಳ ಪಟ್ಟಿ ಯಾವಾಗ ಎಂದು ಕೇಳಿದ ಪ್ರಶ್ನೆಗೆ, 'ರಾಜಕಾರಣ ಎಂದರೆ ಚದುರಂಗ ಆಟ. ಬಿಜೆಪಿಯವರು ಆಡುತ್ತಿದ್ದಾರೆ. ಜೆಡಿಎಸ್ ನವರು ಹಾಗೂ ಬಿಜೆಪಿ 224 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ್ದಾರಾ? ನಾವು ಉಳಿದ ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂದು ಚರ್ಚೆ ಮಾಡಿದ್ದೇವೆ. ಬಹುತೇಕ ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ್ ನೀಡಿದ್ದೇವೆ. ಅಸಮಾಧಾನ ಇರುವವರನ್ನು ಕರೆದು ಮಾತನಾಡುತ್ತಿದ್ದೇವೆ. ಒಂದು ಕುಟುಂಬ, ಸಂಸಾರದಲ್ಲಿ ಎಲ್ಲರ ಅಭಿಪ್ರಾಯ ಕೇಳಿ, ಸಮಾಧಾನ ಮಾಡಬೇಕು' ಎಂದು ತಿಳಿಸಿದರು.

ವೈಎಸ್ ವಿ ದತ್ತಾ ಅವರು ಸ್ವಾಭಿಮಾನದ ಸಭೆ ಮಾಡುವುದಾಗಿ ಹೇಳಿರುವ ಬಗ್ಗೆ ಕೇಳಿದಾಗ, 'ಕಾಂಗ್ರೆಸ್ ಪಕ್ಷಕ್ಕೆ ಯಾರನ್ನೇ ಸೇರಿಸಿಕೊಳ್ಳಬೇಕಾದರೂ ಯಾರಿಗೂ ಟಿಕೆಟ್ ಭರವಸೆ ನೀಡುವುದಿಲ್ಲ. ಬೇಷರತ್ತಿನಿಂದ ಸೇರಿಸಿಕೊಳ್ಳುತ್ತೇವೆ. ಹಾಲಿ ಶಾಸಕರು ಬಂದರೂ ಅವರು ಕಾರ್ಯಕರ್ತರಾಗಿ ದುಡಿಯಲು ಬಯಸುತ್ತೇವೆ, ನಮ್ಮನ್ನು ಬಳಸಿಕೊಳ್ಳಿ ಎಂದು ಹೇಳಿದ್ದಾರೆ. ಕೆಲವರಿಗೆ ಆಕ್ರೋಶ ಇರುತ್ತದೆ. ನಾವು ಅದನ್ನು ಸರಿ ಮಾಡುತ್ತೇವೆ' ಎಂದು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News