"ಪ್ರತಿನಿತ್ಯ ಪತ್ರಿಕೆ ತೆಗೆದರೆ ಸಾಕು ಈ ಸರ್ಕಾರದ ಒಂದೊಂದು ಹೊಸ ಹಗರಣಗಳು ಹೊರಬರುತ್ತಿವೆ"

ಪ್ರತಿನಿತ್ಯ ಪತ್ರಿಕೆ ತೆಗೆದರೆ ಸಾಕು ಈ ಸರ್ಕಾರದ ಒಂದೊಂದು ಹೊಸ ಹಗರಣಗಳು ಹೊರಬರುತ್ತಿವೆ ಎಂದು ರಾಷ್ಟ್ರೀಯ ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಬ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Written by - Zee Kannada News Desk | Last Updated : Apr 20, 2023, 05:37 PM IST
  • ನಮ್ಮ ಪರಂಪರೆ, ಸಂಸ್ಕೃತಿಯಲ್ಲಿ ನಮಗೆ ದೇವರು, ತಂದೆ ತಾಯಿ, ಹಿರಿಯರ ಆಶೀರ್ವಾದ ಬೇಕು ಎಂದು ನಾವು ಕಲಿತಿದ್ದೇವೆ.
  • ಆದರೆ ಇವರು ಮೋದಿ ಅವರ ಆಶೀರ್ವಾದ ಬೇಕು ಎನ್ನುತ್ತಿದ್ದಾರೆ.
  • ಮೋದಿ ಅವರ ಆಸೀರ್ವಾದ ಯಾಕೆ ಬೇಕು? 40% ಕಮಿಷನ್ ಭ್ರಷ್ಟಾಚಾರ ಮಾಡುವುದಕ್ಕೇ?
"ಪ್ರತಿನಿತ್ಯ ಪತ್ರಿಕೆ ತೆಗೆದರೆ ಸಾಕು ಈ ಸರ್ಕಾರದ ಒಂದೊಂದು ಹೊಸ ಹಗರಣಗಳು ಹೊರಬರುತ್ತಿವೆ" title=
file photo

ಬೆಂಗಳೂರು: ಪ್ರತಿನಿತ್ಯ ಪತ್ರಿಕೆ ತೆಗೆದರೆ ಸಾಕು ಈ ಸರ್ಕಾರದ ಒಂದೊಂದು ಹೊಸ ಹಗರಣಗಳು ಹೊರಬರುತ್ತಿವೆ ಎಂದು ರಾಷ್ಟ್ರೀಯ ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಬ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಿಷ್ಟು..

ಮೊಟ್ಟೆ ಹಗರಣ, ಕೋವಿಡ್ ಹಗರಣ, ಟೆಂಡರ್ ಹಗರಣ, ರಾಘವೇಂದ್ರ ಬ್ಯಾಂಕ್ ಹಗರಣ, ಬಿಡಿಎ ಹಗರಣ ನಡೆದಿದ್ದು, ಈಗ ಹೊಸ ಹಗರಣ ಮಾಡಲಾಗಿದೆ. ಅದೇನೆಂದರೆ ಬೆಂಗಳೂರು ಗಾಲ್ಫ್ ಕ್ಲಬ್ ನಲ್ಲಿ ಭೂಮಿ ಪಡೆದು ಸದಸ್ಯತ್ವ ನೀಡುವ ಹಗರಣ ನಡೆದಿದೆ. 

ಈ ಕ್ಲಬ್ ನ ಲೀಸ್ ಅವಧಿ 2021ನೇ ಸಾಲಿನಲ್ಲಿ ಅಂತ್ಯಗೊಂಡಿದ್ದು, ಸರ್ಕಾರ ಈ ಲೀಸ್ ಅವಧಿ ವಿಸ್ತರಣೆ ಮಾಡಲು ಆಸಕ್ತಿ ತೋರಲಿಲ್ಲ. ಆದರೆ ಮಾದರಿ ನೀತಿ ಸಂಹಿತೆ ಜಾರಿಯಾಗುವ ಕೆಲ ದಿನಗಳ ಮುಂಚಿತವಾಗಿ 30 ವರ್ಷಗಳಿಗೆ ಲೀಸ್ ಅನ್ನು ವಿಸ್ತರಣೆ ಮಾಡಿದೆ. ಅದಕ್ಕೆ ಪ್ರತಿಯಾಗಿ ಈ ಭ್ರಷ್ಟ ಸರ್ಕಾರ 12 ಬಿಜೆಪಿ ಶಾಸಕರು ಹಾಗೂ ನಾಯಕರು ಕ್ಲಬ್ ನ ಸದಸ್ಯತ್ವ ಪಡೆದಿದ್ದಾರೆ. ದೇಶದ ಅತ್ಯಂತ ಪ್ರತಿಭಾನ್ವಿತ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್, ಚಿಕ್ಕರಂಗಪ್ಪ ಅವರಿಗೆ ಸಿಗದ ಸದಸ್ಯತ್ವ ಬಿಜೆಪಿ ಶಾಸಕರು ಹಾಗೂ ನಾಯಕರಿಗೆ ಸಿಕ್ಕಿದೆ.

ಇದನ್ನೂ ಓದಿ: ಸಿಂಗ್‌ಪುರ ರೈಲು ನಿಲ್ದಾಣದಲ್ಲಿ ಎರಡು ಗೂಡ್ಸ್ ರೈಲುಗಳು ಮುಖಾಮುಖಿ: ಓರ್ವ ಮೃತ

ಈ ಸದಸ್ಯತ್ವಕ್ಕಾಗಿ ಸರ್ಕಾರ ಭೂಮಿ ನೀಡಿದೆ. ಈ ಸರ್ಕಾರ ಪ್ರತಿ ಹೆಜ್ಜೆಯಲ್ಲೂ 40% ಸರ್ಕಾರದ ಭ್ರಷ್ಟಾಚಾರ ಕಾಣಸಿಗುತ್ತಿದೆ. ಈ ಕ್ಲಬ್ ಸದಸ್ಯತ್ವ ಪಡೆಯಲು ಅನೇಕ ವರ್ಷಗಳಿಂದ ಕಾಯುತ್ತಿದ್ದು, ಅವರ ಸದಸ್ಯತ್ವವನ್ನು ಬಿಜೆಪಿ ನಾಯಕರು ಕಸಿದುಕೊಂಡಿದ್ದಾರೆ.

ಈ ರೀತಿ ಅಕ್ರಮವಾಗಿ ಗಾಲ್ಫ್ ಕ್ಲಬ್ ಸದಸ್ಯತ್ವ ಪಡೆದಿರುವ ಬಿಜೆಪಿ ನಾಯಕರ ಪಟ್ಟಿ ಬೇಕು. ಬೆಂಗಳೂರು ನಗರದ ಜನ, ಕ್ರೀಡಾಸಕ್ತರು ಈ ಸದಸ್ಯತ್ವ ಯಾರು ಪಡೆದಿದ್ದಾರೆ ಎಂದು ತಿಳಿಯಬೇಕಿದೆ. ಈ ಸರ್ಕಾರದ ಹಗರಣಗಳಿಂದ ಜನ ಸಾಕಾಗಿದ್ದಾರೆ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು. ನೈತಿಕತೆಯ ಆಧಾರದ ಮೇಲೆ ಈ ನಾಯಕರು ಏ.23ರ ಒಳಗಾಗಿ ತಮ್ಮ ನಾಮಪತ್ರ ಹಿಂಪಡೆದು ಚುನಾವಣಾ ಕಣದಿಂದ ಹಿಂದೆ ಸರಿಯಬೇಕು.

ಇನ್ನು ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಕರ್ನಾಟಕದ ಅಸ್ಮಿತೆಗೆ ಧಕ್ಕೆ ಮಾಡಿದ್ದಾರೆ. ಅವರು ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡುತ್ತಾ ಕರ್ನಾಟಕ ರಾಜ್ಯದ ಜನರಿಗೆ ಮೋದಿ ಅವರ ಆಶೀರ್ವಾದ ಬೇಕು ಎಂದು ಹೇಳಿದ್ದಾರೆ. ನಮ್ಮ ಪರಂಪರೆ, ಸಂಸ್ಕೃತಿಯಲ್ಲಿ ನಮಗೆ ದೇವರು, ತಂದೆ ತಾಯಿ, ಹಿರಿಯರ ಆಶೀರ್ವಾದ ಬೇಕು ಎಂದು ನಾವು ಕಲಿತಿದ್ದೇವೆ. ಆದರೆ ಇವರು ಮೋದಿ ಅವರ ಆಶೀರ್ವಾದ ಬೇಕು ಎನ್ನುತ್ತಿದ್ದಾರೆ. ಮೋದಿ ಅವರ ಆಸೀರ್ವಾದ ಯಾಕೆ ಬೇಕು? 40% ಕಮಿಷನ್ ಭ್ರಷ್ಟಾಚಾರ ಮಾಡುವುದಕ್ಕೇ? ಕೋವಿಡ್, ಭೂ ಹಗರಣ, ನೇಮಕಾತಿ ಹಗರಣ ಮಾಡಲು ಆಶೀರ್ವಾದ ಬೇಕಾ? ಕನ್ನಡಿಗರಿಗೆ 40% ಸರ್ಕಾರದಿಂದ ಯಾವುದೇ ಆಶೀರ್ವಾದ ಬೇಡ. ಕಾರಣ ಇದು ಆಶೀರ್ವಾದವಲ್ಲ, ಇದೊಂದು ಶಾಪ. ಕನ್ನಡಿಗರಿಗೆ ಮೋದಿ ಆಶೀರ್ವಾದ ಬೇಕು ಎಂದು ಹೇಳುವುದು ಬಿಜೆಪಿಯ ಸಂಸ್ಕೃತಿಯಾದರೆ, ನಮಗೆ ಕನ್ನಡಿಗರ ಆಶೀರ್ವಾದ ಬೇಕು ಎಂದು ಹೇಳುವುದು ಕಾಂಗ್ರೆಸ್ ಸಂಸ್ಕೃತಿ.

ಅತೀಕ್ ಅವರ ವಿಚಾರವಾಗಿ ಶೋಭಾ ಕರಂದ್ಲಾಜೆ ಅವರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಇಂದು  ಶೋಭಾ ಅವರು ನಂದಿನಿ ಬ್ರ್ಯಾಂಡ್ ಮೇಲೆ ದಾಳಿ ಆದಾಗ, ಮಹಾರಾಷ್ಟ್ರ ಸರ್ಕಾರ ರಾಜ್ಯದ ಹಳ್ಳಿಗಳಲ್ಲಿ ತನ್ನ ಜನೆ ಜಾರಿ ಮಾಡಲು ಮುಂದಾದಾಗ, ಸಿಆರ್ ಪಿಎಫ್ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ನೀಡಿದ್ದಾಗ ನೀವು ಮಾತನಾಡುತ್ತೀರಿ ಎಂದು ಭಾವಿಸಿದ್ದೆ. ಆದರೆ ನೀವು ಮಾತನಾಡಲಿಲ್ಲ. 2008ರಲ್ಲಿ ಯುಪಿಎ 1 ಸರ್ಕಾರದ ವಿರುದ್ಧ ಅಶ್ವಾಸ ನಿರ್ಣಯ ಮಂಡನೆಯಾಗಿದ್ದಾಗ, ಇದೇ ಅತೀಖ್ ಅಹ್ಮದ್ ಅವರು ತಮ್ಮ ಪಕ್ಷದ ಪರವಾಗಿ ಮತ ಹಾಕಲಿಲ್ಲ. ಅಅವರು ಬಿಜೆಪಿ ಪರವಾಗಿ ಮತ ಹಾಕಿದ್ದರು. ಶೋಭಾ ಅವರೇ ಈ ಸಂಬಂಧಕ್ಕೆ ಏನೆಂದು ಕರೆಯಬೇಕು? ಅತೀಖ್ ನಿಮ್ಮ ಬಿ ಟೀಂ ಆಗಿದ್ದು ಯಾಕೆ? ಅತೀಖ್ ಹಾಗೂ ಉತ್ತರಪ್ರದೇಶದ ಹಾಲಿ ಕೈಗಾರಿಕಾ ಸಚಿವ ನಂದಗೋಪಾಲ್ ಗುಪ್ತಾ ಅವರ ಜತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ನಗುಮುಖದ ಫೋಟೋ ಹಿಂದಿನ ಸಂಬಂಧವೇನು? ಇದಕ್ಕೆ ಏನು ಹೇಳುತ್ತೀರಿ ಶೋಭಾ ಅವರೇ?’ ಎಂದು ತಿರುಗೇಟು ತಿಳಿಸಿದರು.

ಇದನ್ನೂ ಓದಿ: ರಾಹುಲ್‌ ಗಾಂಧಿ ಶಿಕ್ಷೆ ತಡೆ ಕೋರಿಕೆಯನ್ನು ತಿರಸ್ಕರಿಸಿದ ಸೂರತ್‌ ಕೋರ್ಟ್..!‌

ಸಚಿನ್ ಪೈಲೆಟ್ ಅವರ ಹೆಸರು ತಾರಾ ಪ್ರಚಾರಕರ ಪಟ್ಟಿಯಲ್ಲಿ ಇಲ್ಲದರ ಬಗ್ಗೆ ಕೇಳಿದ ಪ್ರಶ್ನೆಗೆ, ‘ಚುನಾವಣಾ ಪ್ರಚಾರದ ವೇಳೆ ಸಚಿನ್ ಪೈಲೆಟ್ ಅವರನ್ನು ಬಳಸಿಕೊಳ್ಳುತ್ತೇವೆ. ತಾರಾ ಪ್ರಚಾರಕ ವಿಚಾರವಾಗಿ ನಾನು ಬಿಜೆಪಿಗೆ ಪ್ರಶ್ನೆ ಮಾಡಲು ಬಯಸುತ್ತೇನೆ. ಬಿಜೆಪಿಯವರು ತುರ್ತು ಬಾಗಿಲು ತೆಗೆಯುವ ವ್ಯಕ್ತಿ ತೇಜಸ್ವಿ ಸೂರ್ಯ ತಾರಾ ಪ್ರಚಾರಕರ ಪಟ್ಟಿಯಲ್ಲಿ ಇಲ್ಲ ಯಾಕೆ? ಜ್ಯೋತಿರಾಧಿತ್ಯ ಸಿಂಧ್ಯಾ, ಜತಿನ್ ಪ್ರಸಾದ್, ಆರ್ ಪಿಎ ಸಿಂಗ್, ಅಜಾದ್ ಸಾಬ್ ಅವರ ಹೆಸರು ಬಿಜೆಪಿ ತಾರಾ ಪ್ರಚಾರಕರ ಪಟ್ಟಿಯಲ್ಲಿ ಯಾಕೆ ಇಲ್ಲ? ನಮ್ಮಲ್ಲಿ ಹಲವರ ಹೆಸರು ತಾರಾ ಪ್ರಚಾರಕರ ಪಟ್ಟಿಯಲ್ಲಿ ಇಲ್ಲ. ಹಾಗಂತಾ ನಾವು ಪ್ರಚಾರ ಮಾಡುತ್ತಿಲ್ಲವೇ? ನಮ್ಮ ಗುರಿ ಇರುವುದು ಈ 40% ಸರ್ಕಾರವನ್ನು ರಾಜ್ಯದಿಂದ ಕಿತ್ತೊಗೆಯುವುದಾಗಿದೆ’ ಎಂದು ತಿಳಿಸಿದರು.

ಡಿ.ಕೆ. ಸುರೇಶ್ ಅವರು ಕನಕಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಹಿಂದಿರುವ ಕಾರಣವೇನು? ತನಿಖಾ ಸಂಸ್ಥೆಗಳ ಭಯವಿದೆಯೇ ಎಂಬ ಪ್ರಶ್ನೆಗೆ, ‘ಇದು ಪಕ್ಷದ ತಂತ್ರಗಾರಿಕೆ. ಡಿ.ಕೆ.ಶಿವಕುಮಾರ್ ಅವರು ನಾಮಪತ್ರ ಸಲ್ಲಿಕೆ ವೇಳೆ ಸೇರಿದ್ದ ಜನ ನೋಡಿ ಈ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಬಿಜೆಪಿಯವರಿಗೆ ಅರಿವಾಗಿದೆ. ಶಿವಕುಮಾರ್ ಅವರು 1 ಲಕ್ಷಕ್ಕಿಂತ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ’ ಎಂದು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News