ನಾನು ಚುನಾವಣೆಗೆ ಸ್ಪರ್ಧಿಸಲ್ಲ: ವದಂತಿಗಳಿಗೆ ಕಿವಿಗೊಡಬೇಡಿ- ಅನಿತಾ ಕುಮಾರಸ್ವಾಮಿ ಮನವಿ

Karnataka Assembly Election: ಚುನಾವಣೆಯ ಕಣದಿಂದ ಹಿಂದೆ ಸರಿದು ಪಕ್ಷದ ಶ್ರಯೋಭಿವೃದ್ಧಿ ಹಾಗೂ ನನ್ನ ಕ್ಷೇತ್ರದ ಜನರ ಒಳಿತಿಗಾಗಿಯಷ್ಟೇ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಯಾರೂ ಇಂಥ ವದಂತಿಗಳನ್ನು ಹಬ್ಬಿಸಬಾರದು ಮತ್ತು ನಂಬಬಾರದು ಎನ್ನುವುದು ನನ್ನ ಕಳಕಳಿಯ ವಿನಂತಿ ಎಂದು ಅವರು ಮನವಿ ಮಾಡಿದ್ದಾರೆ.

Written by - Yashaswini V | Last Updated : Apr 4, 2023, 02:23 PM IST
  • 2008ರಲ್ಲಿ ಆಪರೇಷನ್‌ ಕಮಲದ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ, ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರ ಆದೇಶ ಗೌರವಿಸಿ ಸ್ಪರ್ಧಿಸಿದ್ದೆ.
  • ಆ ನಂತರದ ಚುನಾವಣೆಯಲ್ಲಿ ವೀರಭದ್ರಯ್ಯ ಅವರಿಗೆ ಮಧುಗಿರಿ ಕ್ಷೇತ್ರವನ್ನು ಸಂತೋಷದಿಂದ ಬಿಟ್ಟುಕೊಟ್ಟು ಪಕ್ಷದ ಕೆಲಸ, ಮನೆಗಷ್ಟೇ ಸೀಮಿತವಾದೆ.
  • 2013ರಲ್ಲಿ ಕೂಡ ಕಾರ್ಯಕರ್ತರ ಒತ್ತಡಕ್ಕೆ ತಲೆಕೊಟ್ಟು ಚನ್ನಪಟ್ಟಣದಲ್ಲಿ ಸ್ಪರ್ಧಿಸಬೇಕಾಯಿತು.
ನಾನು ಚುನಾವಣೆಗೆ ಸ್ಪರ್ಧಿಸಲ್ಲ: ವದಂತಿಗಳಿಗೆ ಕಿವಿಗೊಡಬೇಡಿ- ಅನಿತಾ ಕುಮಾರಸ್ವಾಮಿ  ಮನವಿ   title=

Karnataka Assembly Election 2023: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ರಾಮನಗರ ಶಾಸಕರಾದ ಅನಿತಾ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.

ಅನಿತಾ ಕುಮಾರಸ್ವಾಮಿ ಅವರು ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನುವ ರೀತಿಯಲ್ಲಿ ಹಬ್ಬಿಸಲಾಗುತ್ತಿರುವ ವದಂತಿಗಳ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ರಾಮನಗರ ಶಾಸಕರಾದ ಅನಿತಾ ಕುಮಾರಸ್ವಾಮಿ, ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆಂಬ ವದಂತಿಗಳನ್ನು ಕೆಲವರು ವ್ಯವಸ್ಥಿತವಾಗಿ ಹಬ್ಬಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದು ಶುದ್ಧಸುಳ್ಳು ಮತ್ತು ಅಪಪ್ರಚಾರದ ಭಾಗವಷ್ಟೇ. ಮತ್ತೊಮ್ಮೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ಈ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ- Karnataka Election 2023: ಬಿಜೆಪಿಯ ಈ ಹಿರಿಯ ನಾಯಕನಿಗೆ ಇಲ್ಲವಂತೆ ಈ ಬಾರಿ ಟಿಕೆಟ್! ಹೊಸ ಮುಖದ ಹುಡುಕಾಟದಲ್ಲಿ ಹೈಕಮಾಂಡ್

ರಾಮನಗರ ಕ್ಷೇತ್ರವನ್ನು ನನ್ನ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟಿದ್ದೇನೆ. ಹೀಗಿರುವಾಗ ಮತ್ತೆ ಸ್ಪರ್ಧಿಸುವ ಮಾತೆಲ್ಲಿ? 2008ರಲ್ಲಿ ಆಪರೇಷನ್‌ ಕಮಲದ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ, ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರ ಆದೇಶ ಗೌರವಿಸಿ ಸ್ಪರ್ಧಿಸಿದ್ದೆ. ಆ ನಂತರದ ಚುನಾವಣೆಯಲ್ಲಿ ವೀರಭದ್ರಯ್ಯ ಅವರಿಗೆ ಮಧುಗಿರಿ ಕ್ಷೇತ್ರವನ್ನು ಸಂತೋಷದಿಂದ ಬಿಟ್ಟುಕೊಟ್ಟು ಪಕ್ಷದ ಕೆಲಸ, ಮನೆಗಷ್ಟೇ ಸೀಮಿತವಾದೆ. 2013ರಲ್ಲಿ ಕೂಡ ಕಾರ್ಯಕರ್ತರ ಒತ್ತಡಕ್ಕೆ ತಲೆಕೊಟ್ಟು ಚನ್ನಪಟ್ಟಣದಲ್ಲಿ ಸ್ಪರ್ಧಿಸಬೇಕಾಯಿತು. ಆಗಲೂ ನಾನು ಪಕ್ಷ ಹಾಗೂ ವರಿಷ್ಠರ ಆದೇಶವನ್ನಷ್ಟೇ ಪಾಲಿಸಿದೆ ಎಂದು ಅನಿತಾ ಕುಮಾರಸ್ವಾಮಿ ಅವರು ಹೇಳಿದ್ದಾರೆ.

2018ರ ಉಪ ಚುನಾವಣೆ ವೇಳೆ ರಾಮನಗರ ಕ್ಷೇತ್ರದಲ್ಲಿ ಕೆಲವರು ನಮ್ಮ ಪಕ್ಷದ ಬೆನ್ನಿಗೆ ಇರಿಯುವ ಕೃತ್ಯವೆಸಗಿದಾಗ ಮತ್ತೆ ಜೆಡಿಎಸ್ ಪಕ್ಷ, ದೇವೇಗೌಡ ಅವರು, ಕುಮಾರಸ್ವಾಮಿ  ಅವರ ಆದೇಶದ ಮೇರೆಗೆ ರಾಮನಗರ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದೆ ಎಂದಿರುವ ಅವರು; ಹೀಗೆ ಪಕ್ಷ ಹಾಗೂ ವರಿಷ್ಠರ ಆದೇಶವನ್ನು ಶಿರಸಾ ಪಾಲಿಸಿದ್ದೇನೆ. ಅಂಥ ಕ್ಲಿಷ್ಟ ಪರಿಸ್ಥಿತಿಯಲ್ಲೂ ಮನೆಮಗಳೆಂದು ಭಾವಿಸಿ ನನ್ನನ್ನು ಗೆಲ್ಲಿಸಿದ ಮಧುಗಿರಿ, ರಾಮನಗರ ಕ್ಷೇತ್ರಗಳ ಮಹಾಜನತೆಗೆ ಆಜೀವ ಪರ್ಯಂತ ನಾನು ಆಭಾರಿ. ಚನ್ನಪಟ್ಟಣ ಕ್ಷೇತ್ರದ ಜನತೆಗೂ ಚಿರಋಣಿ. ಸಿಕ್ಕಿದ ಅವಕಾಶ ಬಳಸಿಕೊಂಡು ಈ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಟ್ವೀಟ್ ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ- "ನೈತಿಕ ಪೊಲೀಸ್ ಗಿರಿ ಹತ್ಯೆಗೆ ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರೇ ಹೊಣೆ"

ಚುನಾವಣೆಯ ಕಣದಿಂದ ಹಿಂದೆ ಸರಿದು ಪಕ್ಷದ ಶ್ರಯೋಭಿವೃದ್ಧಿ ಹಾಗೂ ನನ್ನ ಕ್ಷೇತ್ರದ ಜನರ ಒಳಿತಿಗಾಗಿಯಷ್ಟೇ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಯಾರೂ ಇಂಥ ವದಂತಿಗಳನ್ನು ಹಬ್ಬಿಸಬಾರದು ಮತ್ತು ನಂಬಬಾರದು ಎನ್ನುವುದು ನನ್ನ ಕಳಕಳಿಯ ವಿನಂತಿ ಎಂದು ಅವರು ಮನವಿ ಮಾಡಿದ್ದಾರೆ.

ಎಲ್ಲಾ ಚುಣಾವಣೆಗಳಲ್ಲಿ ಪಕ್ಷದ ಆದೇಶವನ್ನಷ್ಟೇ ಪಾಲಿಸಿ ನಡೆದಿದ್ದೇನೆಯೇ ಹೊರತು, ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು ಕಟ್ಟಿದ ಈ ಪಕ್ಷಕ್ಕೆ ಧಕ್ಕೆ ತರುವ ಅಥವಾ ಕುಟುಂಬದ ಗೌರವಕ್ಕೆ ಚ್ಯುತಿಯುಂಟು ಮಾಡುವ ಕೆಲಸ ಮಾಡಿಲ್ಲ, ಮುಂದೆ ಮಾಡುವುದೂ ಇಲ್ಲ. ದಯಮಾಡಿ ನನ್ನ ಭಾವನೆಗಳನ್ನು ಗೌರವಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News