ಬೆಂಗಳೂರು : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಚುನಾವಣೆಯ ದಿನಾಂಕ ನಿಗದಿಯಾದ ಮೇಲೆ ಎಲ್ಲಾ ಪಕ್ಷಗಳಿಂದಲೂ ಅಬ್ಬರದ ಪ್ರಚಾರ ನಡೆಯುತ್ತಿದೆ. ಟಿಕೆಟ್ ಪಕ್ಕಾ ಆಗಿರುವ ಅಭ್ಯರ್ಥಿಗಳು ಮತದಾರರ ಓಲೈಕೆಯಲ್ಲಿ ತೊಡಗಿದ್ದರೆ, ಟಿಕೆಟ್ ಘೋಷಣೆಯಾಗದ ಕ್ಷೇತ್ರದ ಆಕಾಂಕ್ಷಿಗಳು ಪಕ್ಷದ ನಾಯಕರ ಮೊರೆ ಹೋಗುತ್ತಿದ್ದಾರೆ.
ಎಐಸಿಸಿ ಚುನಾವಣಾ ಸಮಿತಿ ಸಭೆ ಮುಂದೂಡಿಕೆ :
ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಆದರೆ ಎರಡನೇ ಪಟ್ಟಿ ಬಿಡುಗಡೆ ವಿಳಂಬವಾಗುತ್ತಿದೆ. ಎರಡನೇ ಪಟ್ಟಿ ಬಿಡುಗಡೆ ಸಂಬಂಧ ನಡೆಯಬೇಕಿದ್ದ ಸಭೆಯನ್ನು ನಾಳೆಗೆ ಮುಂದೂಡಲಾಗಿದೆ. ಹೀಗಾಗಿ ಚುನಾವಣಾ ಸಮಿತಿ ಸಭೆ ನಾಳೆ ನಡೆಯಲಿದ್ದು, ಸಭೆಯಲ್ಲಿ ಎರಡನೇ ಪಟ್ಟಿ ಬಗ್ಗೆ ಪರಿಶೀಲನೆ ನಡೆಯಲಿದೆ.
ಇದನ್ನೂ ಓದಿ : "ಆರಗ ಜ್ಞಾನೇಂದ್ರ ಅವರ ಅದಕ್ಷತೆಯಿಂದಾಗಿ ರಾಜ್ಯದ ಪೊಲೀಸ್ ಇಲಾಖೆ ಸಂಪೂರ್ಣವಾಗಿ ಹಾದಿ ತಪ್ಪಿದೆ"
ಸಭೆಯ ನಂತರ ಎರಡನೇ ಪಟ್ಟಿ :
ಸಭೆಯಲ್ಲಿ ಹೆಸರು ಪರಿಶೀಲನೆ ನಂತರ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ೫೦ ಕ್ಕೂ ಹೆಚ್ಚು ಹೆಸರುಗಳ ಘೋಷಣೆಯಾಗುವ ನಿರೀಕ್ಷೆಯಿದೆ. ಈಗಾಗಲೇ ಎರಡನೇ ಪಟ್ಟಿಯನ್ನು ಕೆಪಿಸಿಸಿ ಕೇಂದ್ರ ನಾಯಕರಿಗೆ ಕಳುಹಿಸಿದೆ. ಎರಡು ಬಾರಿ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಸಿ ನಂತರ ಅಂತಿಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಟಿಕೆಟ್ ಪಡೆಯಲು ಆಕಾಂಕ್ಷಿಗಳ ಶತ ಪ್ರಯತ್ನ :
ಈ ನಡುವೆ, 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಆಕಾಂಕ್ಷಿಗಳು ಕಾತುರರಾಗಿದ್ದಾರೆ. ಎರಡನೇ ಪಟ್ಟಿ ಮೇಲೆ ಹಲವು ಟಿಕೆಟ್ ಆಕಾಂಕ್ಷಿಗಳ ದೃಷ್ಟಿ ನೆಟ್ಟಿದೆ. ಶತಯಗತಾಯ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯಲೇ ಬೇಕು ಎಂಬ ಲೆಕ್ಕಾಚಾರ ಹಲವು ಆಕಾಂಕ್ಷಿಗಳದ್ದು. ಇದಕ್ಕಾಗಿ ಸಿದ್ದರಾಮಯ್ಯ ಭೇಟಿಯಾಗಿ, ಟಿಕೆಟ್ ನೀಡುವಂತೆ ಮನವಿ ಕೂಡಾ ಮಾಡುತ್ತಿದ್ದಾರೆ. ಸರ್ವೆ ರಿಪೋರ್ಟ್ ನಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಟಿಕೆಟ್ ಪಡೆಯಲು ಆಕಾಂಕ್ಷಿಗಳು ಹಾತೊರೆಯುತ್ತಿದ್ದಾರೆ.
ಇದನ್ನೂ ಓದಿ : "ಈ ಸರ್ಕಾರದ ಉದ್ದೇಶವೇನು? ಇವರು ಏನೇ ಮಾಡಿದರೂ ಜನರು ಕೇಳಬೇಕಾ?"
ಟಿಕೆಟ್ ಆಕಾಂಕ್ಷಿಗಳಿಗೆ ಸಿದ್ದರಾಮಯ್ಯ ಹೇಳಿದ್ದೇನು? :
ಈ ಮಧ್ಯೆ ಟಿಕೆಟ್ ಗಾಗಿ ತಮ್ಮನ್ನು ಭೇಟಿಯಾಗುತ್ತಿರುವವರಿಗೆ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ. ಗೆಲ್ಲುವ ಅಭ್ಯರ್ಥಿ ಗಳಿಗೆ ಖಂಡಿತಾ ಟಿಕೆಟ್ ಸಿಗಲಿದೆ ಎನ್ನುವ ಅಭಯ ನೀಡಿದ್ದಾರೆ. ಟಿಕೆಟ್ ವಿಚಾರದಲ್ಲಿ ಗೆಲುವೊಂದೇ ಮಾನದಂಡ ಎಂದಿದ್ದಾರೆ. ಸರ್ವೆ ರಿಪೋರ್ಟ್ ಆಧರಿಸಿ ಟಿಕೆಟ್ ನೀಡಲಾಗುತ್ತದೆ. ಟಿಕೆಟ್ ಸಿಗದವರು ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಖಂಡಿತ ಸೂಕ್ತ ಸ್ಥಾನ ಮಾನ ನೀಡಲಾಗುವುದು ಎಂದಿದ್ದಾರೆ. ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಪಕ್ಷ ವಿರೋಧಿ ಇಲ್ಲವೇ ಪಕ್ಷಕ್ಕೆ ಹಾನಿಯಾಗುವಂತ ಚಟುವಟಿಕೆಗಳನ್ನು ಮಾಡಬಾರದು ಎಂದು ತಾಕೀತು ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.