ಚೆನ್ನೈ: ಸೇಲಂ-ಚೆನ್ನೈ ಎಕ್ಷ್ಪ್ರೆಸ್ ವೇ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಲು ಬಂದ ಸ್ವರಾಜ್ ಇಂಡಿಯಾ ಪಕ್ಷದ ನಾಯಕ ಯೋಗೇಂದ್ರ ಯಾದವ್ ಅವರನ್ನು ನಿನ್ನೆ ತಮಿಳುನಾಡಿನ ಪೊಲೀಸರು ತಿರುವಣ್ಣಾಮಲೈನಲ್ಲಿ ಬಂಧಿಸಿದ್ದರು.
ಪೋಲೀಸರ ನಿಲುವನ್ನು ಖಂಡಿಸಿ ಮಾತನಾಡಿರುವ ನಟ ಮತ್ತು ಮಕ್ಕಳ ನಿಧಿ ಮಯ್ಯಂ ಪಕ್ಷದ ನಾಯಕ ಕಮಲ್ ಹಾಸನ್ "ಬೇರೆ ರಾಜ್ಯದ ರಾಜಕಾರಣಿ ನಮ್ಮ ರಾಜ್ಯದಲ್ಲಿನ ರೈತರ ಅಭಿಪ್ರಾಯವನ್ನು ಆಲಿಸಲು ಬಂದಿರುತ್ತಾರೆ.ಈಗ ಈ ಪೋಲೀಸರ ಕ್ರಮ ಖಂಡಿಸುವಂತದ್ದು ಎಂದು ತಿಳಿಸಿದ್ದಾರೆ.
தமிழக விவசாயிகளிடம் கருத்துக்கேட்கச் சென்ற நண்பர் திரு @_YogendraYadav கைது செய்யப்பட்டது விமர்சனத்துக்குரியது, கடும் கண்டனத்துக்குரியது. pic.twitter.com/JmwJz7HIQo
— Kamal Haasan (@ikamalhaasan) September 8, 2018
ಅಲ್ಲದೆ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದನ್ನು ತಡೆಹಿಡಿಯುವುದು ಒಂದು ರೀತಿಯ ಸರ್ವಾಧಿಕಾರಿ ಧೋರಣೆ ಎಂದು ತಿಳಿಸಿದ್ದಾರೆ. ಜನರಿಗೆ ಯಾವುದೇ ರೀತಿಯ ಭಯವಿಲ್ಲದೆ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು ಎಂದು ಕಮಲ್ ಹಾಸನ್ ತಿಳಿಸಿದರು.
ಶನಿವಾರದಂದು ತಮಿಳುನಾಡು ರೈತರಿಗೆ ಬೆಂಬಲ ವ್ಯಕ್ತಪಡಿಸಲು ಬಂದ ಯೋಗೇಂದ್ರ ಯಾದವ್ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಅವರ ಮೊಬೈಲ್ ಪೋನ್ ಅನ್ನು ಕಸಿದುಕೊಂಡು ಪೋಲೀಸ್ ವಾಹನದಲ್ಲಿ ತಳ್ಳಿದರು ಎಂದು ಯಾದವ್ ನಿನ್ನೆ ಟ್ವೀಟ್ ಮೂಲಕ ತಿಳಿಸಿದ್ದರು.
ಸುಮಾರು 10ಸಾವಿರ ಕೋಟಿ ರೂ ವೆಚ್ಚದ ಈ ಸೇಲಂ-ಚೆನ್ನೈ ಎಕ್ಸ್ಪ್ರೆಸ್ ವೇ ಈ ಭಾಗದ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಿದೆ ಮತ್ತು ಸಾಕಷ್ಟು ಪ್ರಮಾಣದ ಮರಗಳನ್ನು ಈ ಯೋಜನೆಗಾಗಿ ಕಡಿಯಬೇಕಾಗುತ್ತದೆ ಎಂದು ಪರಿಸರ ತಜ್ಞರು ಮತ್ತು ರೈತರು ಕಳವಳ ವ್ಯಕ್ತಪಡಿಸಿದ್ದಾರೆ.