ಮುಂಬೈ:ಯಸ್ ಬ್ಯಾಂಕ್ ಸಂಸ್ಥಾಪಕ ಹಾಗೂ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ರಾಣಾ ಕಪೂರ್ ಅವರನ್ನು ಇದು ಜಾರಿ ನಿರ್ದೇಶನಾಲಯ PMLA ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಪ್ರಕರಣದ ವಿಚಾರಣೆಯನ್ನು ಕೈಗಿತ್ತಿಕೊಂಡ ನ್ಯಾಯಪೀಠ ಅವರನ್ನು ಮಾರ್ಚ್ 11ರವರೆಗೆ ಇಡಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ರಾಣಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಎರಡು ಬಾರಿ ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಮನಿ ಲಾಂಡ್ರಿಂಗ್ ಹಾಗೂ ಸಾಲಕ್ಕೆ ಪ್ರತಿಯಾಗಿ ಲಂಚ ಸ್ವೀಕರಿಸಿದ ಆರೋಪ ರಾಣಾ ಅವರ ಮೇಲಿದೆ.
ಇದಕ್ಕೂ ಮೊದಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸುಮಾರು 31 ಗಂಟೆಗಳ ಕಾಲ ರಾಣಾ ಅವರನ್ನು ವಿಚಾರಣೆಗೆ ಒಳಪಡಿಸಿ ಬಳಿಕ ಬಂಧಿಸಿದ್ದರು. ಬಳಿಕ ಇಂದು ಬೆಳಗ್ಗೆ ಅವರನ್ನು ಪ್ರಿವೆನ್ಶನ್ ಆಫ್ ಮನಿ ಲ್ಯಾಂಡ್ರಿಂಗ್ ಆಕ್ಟ್ ಕೋರ್ಟ್ ಗೆ ಅವರನ್ನು ಹಾಜರುಪಡಿಸಲಾಗಿದೆ. ಶನಿವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ್ದ ಇಡಿ ಅಧಿಕಾರಿಗಳು ಮುಂಬೈ ಹಾಗೂ ನವದೆಹಲಿಗಳಲ್ಲಿನ ರಾಣಾಗೆ ಸಂಬಂಧಿಸಿದ ಠಿಕಾಣಿಗಳ ಮೇಲೆ ದಾಳಿ ನಡೆಸಿದ್ದರು.
ಶನಿವಾರ ಮಧ್ಯಾಹ್ನ ಬಾಲಾರ್ಡ್ ಎಸ್ಟೇಟ್ ನಲ್ಲಿರುವ ಈಡಿ ಕಾರ್ಯಾಲಯಕ್ಕೆ ರಾಣಾ ಅವರನ್ನು ಕರೆತರಲಾಗಿತ್ತು. ರಾಣಾ ಕಪೂರ್ ವಿರುದ್ಧ ಈಗಾಗಲೇ ಲುಕ್ ಔಟ್ ನೋಟಿಸ್ ಕೂಡ ಜಾರಿಯಾಗಿದೆ. ಹೀಗಾಗಿ ಇದೀಗ ರಾಣಾ ದೇಶ ಬಿಟ್ಟು ಪರಾರಿಯಾಗುವಂತಿಲ್ಲ. ರಾಣಾ ಕಪೂರ್ ಅವರ ಬಂಧನದ ಬಳಿಕ, ಬ್ಯಾಂಕ್ ನ ಇತರೆ ಹಿರಿಯ ಅಧಿಕಾರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ.
DHLF ಕಂಪನಿಗೆ ಸಾಲ ನೀಡಿ ಕಪೂರ್ ಅವರ ಪತ್ನಿಯ ಖಾತೆಗೆ ಪರೋಕ್ಷವಾಗಿ ಲಾಭ ತಲುಪಿಸಲಾಗಿರುವ ಆರೋಪ ರಾಣಾ ಮೇಲಿದೆ. ಈ ವೇಳೆ ಆರ್ಥಿಕ ಅವ್ಯವಹಾರ ನಡೆಸಲಾಗಿದೆ ಎನ್ನಲಾಗಿದೆ. 2017ರಲ್ಲಿ ಯಸ್ ಬ್ಯಾಂಕ್ ಸುಮಾರು 6,355 ಕೋಟಿ ರೂ.ಗಳನ್ನು ಬ್ಯಾಡ್ ಲೋನ್ ಕೆಟಗರಿಗೆ ಸೇರಿಸಿತ್ತು.
ಸದ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯಸ್ ಬ್ಯಾಂಕ್ ಗೆ ನೆರವು ನೀಡಲು ಭಾರತೀಯ ಸ್ಟೇಟ್ ಬ್ಯಾಂಕ್ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ಶುಕ್ರವಾರ ಡ್ರಾಫ್ಟ್ ರೀಕನ್ಸ್ಟ್ರಕ್ಷನ್ ಸ್ಚೀಮ್ ಜಾರಿಗೊಳಿಸಿತ್ತು. RBIನ ಈ ಸ್ಕೀಮ್ ಗೆ SBI ನಿರ್ದೆಶಕರ ಮಂಡಳಿ ಒಪ್ಪಿಗೆ ಸೂಚಿಸಿದ್ದು, ಸೋಮವಾರ RBI ಅನ್ನು ಭೇಟಿ ಮಾಡಲು ನಿರ್ಧರಿಸಿದೆ. SBI ನಿರ್ದೇಶಕರ ಮಂಡಳಿ ಯಾವ ರೀತಿಯ ಒಪ್ಪಿಗೆ ನೀಡಲಿದೆ ಎಂಬುದರ ಮೇಲೆ ಇಡೀ ಯೋಜನೆ ಅವಲಂಭಿಸಿದೆ. ಆದರೆ, ಸೈದ್ಧಾಂತಿಕವಾಗಿ ಬ್ಯಾಂಕ್ ಈ ಪ್ಲಾನ್ ಗೆ ಈಗಾಗಲೇ ಒಪ್ಪಿಗೆ ನೀಡಿದಂತಾಗಿರವುದು ಇಲ್ಲಿ ಗಮನಾರ್ಹ.