ನವದೆಹಲಿ: ಯಮುನಾ ನದಿಯಲ್ಲಿ ನೀರಿನ ಮಟ್ಟ 205.53 ಮೀಟರ್ ತಲುಪಿದ್ದು, ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ರೈಲ್ವೇ ಇಲಾಖೆ ಸುರಕ್ಷತೆಯ ದೃಷ್ಟಿಯಿಂದ ಕಬ್ಬಿಣದ ಸೇತುವೆ ಮೇಲೆ ರೈಲು ಸಂಚಾರವನ್ನು ಸ್ಥಗಿತಗೊಳಿಸಿದೆ. ಈ ಸೇತುವೆಯಲ್ಲಿ ಹಳೆಯ ದೆಹಲಿ ಮತ್ತು ದೆಹಲಿಯಿಂದ ದಿನಕ್ಕೆ 150 ಕ್ಕೂ ಹೆಚ್ಚು ರೈಲುಗಳು ಹಾದು ಹೋಗುತ್ತವೆ. ರೈಲು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ 27 ಪ್ಯಾಸೆಂಜರ್ ರೈಲುಗಳನ್ನು ರೈಲ್ವೆ ಇಲಾಖೆ ರದ್ದುಪಡಿಸಿದೆ. ಅದೇ ಸಮಯದಲ್ಲಿ 7 ರೈಲುಗಳ ಮಾರ್ಗಗಳನ್ನು ಬದಲಿಸಲಾಗಿದೆ. 14 ಎಕ್ಸ್ಪ್ರೆಸ್ ರೈಲುಗಳು ಹೊಸದಿಲ್ಲಿ ರೈಲ್ವೆ ನಿಲ್ದಾಣದ ಮೂಲಕ ಸಂಚರಿಸಲಿವೆ. ಮೂರು ಎಕ್ಸ್ಪ್ರೆಸ್ಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಯಮುನಾ ಸೇತುವೆಯ ಮೇಲೆ, ವಿಶೇಷ ರೀತಿಯ ಸಾಧನಗಳನ್ನು ರೈಲ್ವೆ ಪರವಾಗಿ ಸ್ಥಾಪಿಸಲಾಗಿದೆ. ಇದರ ಮೂಲಕ, ರೈಲ್ವೆ ಅಧಿಕಾರಿಗಳು ಪ್ರತಿ ನಿಮಿಷಕ್ಕೊಮ್ಮೆ ಯಮುನಾ ನದಿಯಲ್ಲಿ ನೀರಿನ ಮಟ್ಟವನ್ನು ತಿಳಿಯುತ್ತಾರೆ.
ಈಗಾಗಲೇ ಸ್ಥಗಿತಗೊಂಡಿದ್ದ ರಸ್ತೆ ಸಂಚಾರ
ಯಮುನಾ ನದಿಯಲ್ಲಿ ಹೆಚ್ಚುತ್ತಿರುವ ನೀರಿನ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ಕಬ್ಬಿಣದ ಸೇತುವೆಯ ಕೆಳ ಭಾಗದಲ್ಲಿ ರಸ್ತೆಯ ಸಂಚಾರವನ್ನು ಭಾನುವಾರ ಮುಚ್ಚಲಾಯಿತು. ಶಾಹಧರ ಜಿಲ್ಲೆಯ ಜಿಲ್ಲಾಧಿಕಾರಿ ಪತ್ರವೊಂದನ್ನು ನೀಡಿ, ತಕ್ಷಣವೇ ಕಬ್ಬಿಣದ ಸೇತುವೆ ರಸ್ತೆ ಸಂಚಾರವನ್ನು ನಿಲ್ಲಿಸಲು ಸೂಚನೆ ನೀಡಿದ್ದರು. ಈ ನಿಟ್ಟಿನಲ್ಲಿ ಸ್ಥಳೀಯ ಪೊಲೀಸ್ ಮತ್ತು ಟ್ರಾಫಿಕ್ ಅಧಿಕಾರಿಗಳು ಕೂಡ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಿದ್ದರು.
1978 ರಲ್ಲಿ ದಾಖಲೆ ನಿರ್ಮಿಸಿದ್ದ ಯಮುನಾ
1978 ರಲ್ಲಿ, ಯಮುನಾದ ನೀರಿನ ಮಟ್ಟವು 207.49 ಮೀಟರನ್ನು ತಲುಪಿ ದಾಖಲೆ ನಿರ್ಮಿಸಿತ್ತು. 2010 ರಲ್ಲಿ, 207.11 ಮೀಟರ್ ಮತ್ತು 2013 ರಲ್ಲಿ 207.32 ಮೀಟರ್ಗಳನ್ನು ತಲುಪಿತ್ತು. ಯಮುನಾ ನದಿಯಲ್ಲಿ ನೀರಿನ ಮಟ್ಟ 204.83 ಮೀಟರ್ ಮೀರಿದ್ದರೆ, ಅದನ್ನು ಅಪಾಯಕಾರಿ ಎಂದು ಪರಿಗಣಿಸಲಾಗಿದೆ.