ಬೆಂಗಳೂರು: ಇಲ್ಲಿನ ಇಸ್ರೋ ಕೇಂದ್ರದಲ್ಲಿ ಹಾಜರಿದ್ದ ವಿದ್ಯಾರ್ಥಿಯೋರ್ವ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರತದ ರಾಷ್ಟ್ರಪತಿಯಾಗಲು ಸಲಹೆಗಳನ್ನು ನೀಡುವಂತೆ ಒತ್ತಾಯಿಸಿದ ಘಟನೆ ನಡೆದಿದೆ.
ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಏಕೆ? ಬದಲಿಯಾಗಿ ಪ್ರಧಾನಿಯಾಗುವ ಗುರಿಯಿಲ್ಲವೇಕೆ ಎಂದು ಪ್ರಶ್ನಿಸಿದರು.
ಚಂದ್ರಯಾನ-2 ಮಿಷನ್ ನ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯುವುದನ್ನು ವೀಕ್ಷಿಸಲು ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಹನ ನಡೆಸಿದ ಸಂದರ್ಭದಲ್ಲಿ "ಭಾರತದ ರಾಷ್ಟ್ರಪತಿಯಾಗುವುದು ನನ್ನ ಗುರಿ, ಹಾಗಾಗಿ ನಾನು ಯಾವ ಕ್ರಮಗಳನ್ನು ಅನುಸರಿಸಬೇಕು" ಎಂದು ವಿದ್ಯಾರ್ಥಿಯೋರ್ವ ಪ್ರಶ್ನಿಸಿದ. ಅದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ "ರಾಷ್ಟ್ರಪತಿಯೇ ಏಕೆ? ಪ್ರಧಾನಿ ಯಾಕೆ ಬೇಡ? ಎಂದರು.
ಸುಮಾರು 48 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಶುಕ್ರವಾರ ತಡರಾತ್ರಿ 27 ಕಿ.ಗ್ರಾಂ ತೂಕದ ಪ್ರಗ್ಯಾನ್ ರೋವರ್ ಅವನ್ನು ಇರಿಸಿಕೊಂಡಿದ್ದ 1471 ಕಿ.ಗ್ರಾಂ ತೂಕದ 'ವಿಕ್ರಮ್ ಲ್ಯಾಂಡರ್' ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿಯುವ ಕೊನೆ ಕ್ಷಣದಲ್ಲಿ ನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಳೆದುಕೊಂಡಿದೆ. ಚಂದ್ರನ ನೆಲಕ್ಕೆ ಇಳಿಯುವ 2.1 ಕಿಲೋ ಮೀಟರ್ ವರೆಗೂ ಸಂಪರ್ಕದಲ್ಲಿದ್ದ ವಿಕ್ರಮ್, ಬಳಿಕ ಸಂಪರ್ಕ ಕಳೆದುಕೊಂಡಿದೆ. ಸದ್ಯ ವಿಜ್ಞಾನಿಗಳು ಕೊನೆ ಕ್ಷಣದ ದತ್ತಾಂಶಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.