ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ವಿಚಾರದಲ್ಲಿ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಬೇಕು ಎಂದಿದ್ದರು. ಇದನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ಮೋದಿ, ದೀದಿ ನೀವು ನಿಮ್ಮ ರಾಜ್ಯದ ಜನರ ಮೇಲೆ ಭರವಸೆ ಇಡಿ. ಅದನ್ನು ಹೊರತುಪಡಿಸಿ ಅಕ್ರಮವಾಗಿ ವಲಸೆ ಬಂದಿರುವ ಮೇಲೆ ನಿಮ್ಮ ನಂಬಿಕೆ ಯಾಕೆ? ನಿಮ್ಮ ರಾಜ್ಯದ ಜನರು ನಿಮ್ಮ ಶತ್ರುಗಳಾ? ಎಂದು ಪ್ರಶ್ನಿಸಿದ್ದಾರೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ ಬಿಜೆಪಿ ಆಯೋಜಿಸಿದ್ದ 'ಧನ್ಯವಾದ ಪ್ರಧಾನಿ' ಸಮಾವೇಶ ಉದ್ದೇಶಿಸಿ ಮಾತನಾಡಿರುವ ಅವರು, ಬಾಂಗ್ಲಾದೇಶದಿಂದ ಭಾರತಕ್ಕೆ ನುಸುಳುತ್ತಿರುವವರನ್ನು ತಡೆಯಬೇಕು ಎಂದು ಸಂಸತ್ತಿನಲ್ಲಿ ಹೇಳಿಕೆ ನೀಡಿದ ಮಮತಾ ಬ್ಯಾನರ್ಜಿ ಅವರನ್ನು ಪ್ರಶ್ನಿಸಿದ್ದು, ನಿಮಗೆನಾಯಿತು ದೀದಿ? NRC ಹಾಗೂ CAA ಬಗ್ಗೆ ವದಂತಿಗಳನ್ನು ಏಕೆ ಹಬ್ಬಿಸುತ್ತಿರುವಿರಿ? ಯಾಕೆ ಬದಲಾಗಿದ್ದೀರಿ? ಎಂಬಿತ್ಯಾತಿ ಪ್ರರ್ಶ್ನೆಗಳ ಸುರಿಮಳೆಗೈದಿದ್ದಾರೆ.
ಇದಕ್ಕೂ ಮೊದಲು ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಾವು ಈ ಕಾಯ್ದೆಯನ್ನು ತಮ್ಮ ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಬಿಡುವುದಿಲ್ಲ ಎಂದಿದ್ದರು. ಅಷ್ಟೇ ಅಲ್ಲ ಈ ಕಾಯ್ದೆಯನ್ನು ವಿರೋಧಿಸಿ ರಾಜ್ಯದಲ್ಲಿ ಅವರು ಬೃಹತ್ ಸಮಾವೇಶ ಕೂಡ ಹಮ್ಮಿಕೊಂಡಿದ್ದರು. ಈ ಸಮಾವೇಶದಲ್ಲಿ ಮಾತನಾಡಿದ್ದ ದೀದಿ, ಈ ಕಾಯ್ದೆಯ ಅನುಷ್ಠಾನದ ವಿಚಾರದಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕು ಎಂದಿದ್ದರು. ಬಳಿಕ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ, ನನ್ನ ಹೇಳಿಕೆಗಳನ್ನು ತಿರುಚಲಾಗಿದ್ದು, ಕಾಯ್ದೆಯ ಕುರಿತು ತಾವು ಮಾನವ ಹಕ್ಕುಗಳ ಆಯೋಗ ಹಾಗೂ ವಿಶ್ವಸಂಸ್ಥೆಯ ತಜ್ಞರಿಂದ ಸಲಹೆ ಪಡೆಯಬೇಕು ಎಂಬುದಾಗಿ ಮಾತ್ರ ಹೇಳಿದ್ದು ಎಂದು ಸ್ಪಷ್ಟನೆ ನೀಡಿದ್ದರು
ದೇಶಾದ್ಯಂತ ನಡೆಯುತ್ತಿರುವ ಹಿಂಸಾಚಾರಗಳ ಕುರಿತು ಶುಕ್ರವಾರ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದ ದೀದಿ, ಕಾಯ್ದೆಯ ಅನುಷ್ಠಾನದ ಕುರಿತು ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕು ಮತ್ತು ಈಗಾಗಲೇ ಹಲವು ಜನರ ಸಾವಿಗೆ ಕಾರಣವಾದ ಪ್ರತಿಭಟನೆಗಳನ್ನು ತಡೆಯಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.
ಈ ಕಾಯಿದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಮಮತಾ ಕೂಡ ಶಾಮೀಲಾಗಿದ್ದು, ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್, ಚತ್ತೀಸ್ಗಡ್ ಸಿಎಂ ಭೂಪೇಶ್ ಬಘೆಲ್, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೂ ಕೂಡ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಆಂದೋಲನ ನಡೆಸುತ್ತಿದ್ದಾರೆ.