ವಿದೇಶದಲ್ಲಿ ಸಿಲುಕಿರುವವರನ್ನು ಕರೆತರಲು ಮೇ 15ರಿಂದ 2ನೇ ಹಂತದ ಏರ್ ಲಿಫ್ಟ್!

ಎರಡನೇ ಹಂತದಲ್ಲಿ 7 ದೇಶಗಳಲ್ಲಿ‌ ಸಿಲುಕಿರುವ ಭಾರತೀಯರನ್ನು ಕರೆತರಲು ಯೋಜನೆ ರೂಪಿಸಲಾಗಿದೆ. ಆ ಪೈಕಿ ಈ ಬಾರಿ ರಷ್ಯಾ, ಜರ್ಮನಿ, ಥೈಲ್ಯಾಂಡ್, ಫ್ರಾನ್ಸ್, ಸ್ಪೇನ್, ಉಜ್ಜಕಿಸ್ತಾನ, ಖಝಕಿಸ್ತಾನಲ್ಲಿ ಸಿಲುಕಿರುವವರನ್ನು ಕರೆತರಲಾಗುತ್ತದೆ.

Last Updated : May 9, 2020, 08:30 AM IST
ವಿದೇಶದಲ್ಲಿ ಸಿಲುಕಿರುವವರನ್ನು ಕರೆತರಲು ಮೇ 15ರಿಂದ 2ನೇ ಹಂತದ ಏರ್ ಲಿಫ್ಟ್! title=

ನವದೆಹಲಿ: ಕ್ರೂರಿ ಕೊರೋನಾವನ್ನು ನಿಯಂತ್ರಿಸಲು ಲಾಕ್ಡೌನ್ ಜಾರಿಗೊಳಿಸಿದ ಪರಿಣಾಮ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಎರಡನೇ ಹಂತದ ವಂದೇ ಭಾರತ್ ಮಿಷನ್ ಯೋಜನೆ ಆರಂಭಿಸಲಿದೆ.

ಮೊದಲ ಹಂತದ ವಂದೇ ಭಾರತ್ ಮಿಷನ್ (Vande Bharat Mission) ಯೋಜನೆ ಮೇ 13ಕ್ಕೆ ಮುಕ್ತಾಯವಾಗಲಿದ್ದು ಮೇ 15ರಿಂದ ಎರಡನೇ ಹಂತದ ಅಂದರೆ 'ವಂದೇ ಭಾರತ್ ಮಿಷನ್ 2.0' ಯೋಜನೆ ಆರಂಭಿಸಲಾಗುತ್ತದೆ. ಮೊದಲ ಹಂತದಲ್ಲಿ ಸುಮಾರು 15 ಸಾವಿರ ಭಾರತೀಯರನ್ನು ‌ತಾಯ್ನಾಡಿಗೆ ಕರೆತರಲಾಗಿತ್ತು.‌ ಅದೇ ರೀತಿ ಎರಡನೇ ಹಂತದಲ್ಲೂ ವಿದೇಶದಲ್ಲಿ ಸಿಲುಕಿರುವ ಸುಮಾರು 15 ಸಾವಿರ ಸ್ವದೇಶಿಗರನ್ನು ಕರೆತರುವ ಪ್ರಯತ್ನಗಳಾಗುತ್ತಿವೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿದೇಶಾಂಗ ಇಲಾಖೆಯು ಭಾರತದಲ್ಲಿರುವ ಬೇರೆ ಬೇರೆ ದೇಶಗಳ ರಾಯಭಾರ ಕಚೇರಿಗಳೊಂದಿಗೆ, ಬೇರೆ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ. 

ಎರಡನೇ ಹಂತದಲ್ಲಿ 7 ದೇಶಗಳಲ್ಲಿ‌ ಸಿಲುಕಿರುವ ಭಾರತೀಯರನ್ನು ಕರೆತರಲು ಯೋಜನೆ ರೂಪಿಸಲಾಗಿದೆ. ಆ ಪೈಕಿ ಈ ಬಾರಿ ರಷ್ಯಾ, ಜರ್ಮನಿ, ಥೈಲ್ಯಾಂಡ್, ಫ್ರಾನ್ಸ್, ಸ್ಪೇನ್, ಉಜ್ಜಕಿಸ್ತಾನ, ಖಝಕಿಸ್ತಾನಲ್ಲಿ ಸಿಲುಕಿರುವವರನ್ನು ಕರೆತರಲಾಗುತ್ತದೆ. ಅದಕ್ಕಾಗಿ ಈಗಾಗಲೇ ದೇಶದ 10 ವಿವಿಧ ರಾಜ್ಯಗಳ 60 ಸಾವಿರಕ್ಕೂ ಹೆಚ್ಚು ಜನ‌ ಹೆಸರು ನೊಂದಾಯಿಸಿಕೊಂಡಿದ್ದಾರೆ.

ಯಾವ ಯಾವ ರಾಜ್ಯಗಳಿಂದ ಎಷ್ಟೆಷ್ಟು ಮಂದಿ ಸಮುದ್ರ ಸೇತು ಯೋಜನೆಯಡಿ ಭಾರತಕ್ಕೆ ಮರಳಲು ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂಬ ವಿವರ ಹೀಗಿದೆ...
* ಕೇರಳ 25,246
* ತಮಿಳುನಾಡು 6,617
* ಮಹಾರಾಷ್ಟ್ರ 4,341
* ಉತ್ತರ ಪ್ರದೇಶ 3,715
* ರಾಜಸ್ಥಾನ 3,320
* ತೆಲಂಗಾಣ 2,796
* ಕರ್ನಾಟಕ 2,786 
* ಆಂಧ್ರಪ್ರದೇಶ 2,445
* ಗುಜರಾತ್ 2,330
* ದೆಹಲಿ 2,232

ಮೊದಲ ಹಂತದ ವಂದೇ ಭಾರತ್ ಮಿಷನ್ ಯೋಜನೆಯಂತೆ ಈಗಲೂ ವೃದ್ದರು, ಗರ್ಭಿಣಿಯರು, ಆರೋಗ್ಯದ ಸಮಸ್ಯೆ ಇರುವವರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು, ವಲಸೆ ಕಾರ್ಮಿಕರಿಗೆ ಮೊದಲ ಆದ್ಯತೆಯಾಗಿರುತ್ತದೆ. ಆಯಾದೇಶಗಳಲ್ಲಿ ಉದ್ಯೋಗಿ ಆಗಿರುವವರಿಗೆ ನಂತರದ ಆದ್ಯತೆ ನೀಡಲಾಗುತ್ತದೆ‌.

ಮೊದಲ ಹಂತದಲ್ಲಿ ವಂದೇ ಭಾರತ್ ಮಿಷನ್ ‌ಮತ್ತು ಸಮುದ್ರ ಸೇತು ಹೆಸರಿನಲ್ಲಿ 12 ದೇಶಗಳಲ್ಲಿ ಸಿಲುಕಿದ್ದ ಸುಮಾರು 15 ಸಾವಿರ ಜನ ಭಾರತೀಯರನ್ನು 64 ವಿಶೇಷ ವಿಮಾನಗಳು ಮತ್ತು 11 ಹಡಗುಗಳ ಮೂಲಕ ಸ್ವದೇಶಕ್ಕೆ ವಾಪಸ್ ಕರೆತರುವ ಕೆಲಸ ಈಗಾಗಲೇ ನಡೆಯುತ್ತಿದೆ. ಮೊದಲ ಹಂತದ ಮೇಗಾ ಏರ್ ಲಿಫ್ಟ್ ಕಾರ್ಯಚರಣೆ ಮೇ13 ರಂದು ಅಂತ್ಯವಾಗಲಿದೆ.‌ ಇದು ಮುಗಿಯುತ್ತಿದ್ದಂತೆ ಅಂದರೆ ಮೇ 15ರಿಂದ ಎರಡನೇ ಹಂತದ ವಂದೇ ಭಾರತ್ ಮಿಷನ್ ಮೂಲಕ ವಿದೇಶಗಳಲ್ಲಿ ಸಿಲುಕಿರುವಸ ಭಾರತೀಯರು ಕರೆತರಲಾಗುತ್ತದೆ.

Trending News