ಬೆಂಗಳೂರು: ಇಂದಿನಿಂದ (ಸೆ. 1) ಜಾರಿಯಾಗುವಂತೆ ಅನ್ಲಾಕ್-4 (Unlock-4) ಮಾರ್ಗಸೂಚಿಯನ್ನು ರಾಜ್ಯಸರ್ಕಾರ ಹೊರಡಿಸಿದ್ದು, ಕಂಟೇನ್ಮೆಂಟ್ ವಲಯ ಹೊರತುಪಡಿಸಿದ ಪ್ರದೇಶಗಳಲ್ಲಿ ಪಬ್, ಕ್ಲಬ್, ಬಾರ್ ಆಂಡ್ ರೆಸ್ಟೋರೆಂಟ್ಗಳನ್ನು (Restaurant) ತೆರೆಯಲು ಅನುಮತಿ ನೀಡಿದೆ. ಇದೇ ಹಿನ್ನಲೆಯಲ್ಲಿ ಇಂದು ರಾಜ್ಯಾದ್ಯಂತ ಮಾರುಕಟ್ಟೆಗಳು ಆರಂಭವಾಗಿವೆ. ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆಯೂ ಕಾರ್ಯಾರಂಭವಾಗಿದೆ.
ಆದರೆ ಕೇಂದ್ರ ಗೃಹ ಸಚಿವಾಲಯದ ಅನ್ಲಾಕ್-4 (Unlock-4) ಮಾರ್ಗಸೂಚಿ ಪ್ರಕಾರ ಸಿನಿಮಾ ಮಂದಿರ, ಈಜುಕೊಳ, ಮನೋರಂಜನಾ ಉದ್ಯಾನವನಗಳನ್ನು ತೆರೆಯುವಂತಿಲ್ಲ. ಸೆ.21ರಿಂದ ರಂಗಮಂದಿರ ತೆರೆಯಲು ಅನುಮತಿ ನೀಡಲಾಗಿದೆ. ಜೊತೆಗೆ ಕೇಂದ್ರ ಗೃಹ ಇಲಾಖೆಯ ಒಪ್ಪಿಗೆ ಇಲ್ಲದೆ ಅಂತಾರಾಷ್ಟ್ರೀಯ ವಿಮಾನ ಪ್ರಯಾಣವನ್ನು ಕೂಡ ಮಾಡುವಂತಿಲ್ಲ. ಆದರೆ ರಾಜ್ಯದೊಳಗೆ ಮತ್ತು ರಾಜ್ಯದ ಹೊರಗೆ ಓಡಾಡುವುದಕ್ಕೆ ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ. ಜೊತೆಗೆ ಯಾವುದೇ ರೀತಿಯ ಪಾಸ್ ಅಥವಾ ಅನುಮತಿ ಕೂಡ ಅಗತ್ಯ ಇರುವುದಿಲ್ಲ.
ಶಾಲಾ-ಕಾಲೇಜುಗಳು ಬಂದ್ :
ಕೇಂದ್ರ ಗೃಹ ಸಚಿವಾಲಯದ ಅನ್ಲಾಕ್-4 (Unlock-4) ಮಾರ್ಗಸೂಚಿ ಪ್ರಕಾರ ಶಾಲೆ, ಕಾಲೇಜು, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು ಸೆ.30ರವರೆಗೆ ತರಗತಿ ಮುಚ್ಚಿರಬೇಕಾಗುತ್ತದೆ. ಆನ್ಲೈನ್ ಕ್ಲಾಸ್ (Online Class) ಮಾಡಲು ಅಡ್ಡಿ ಇರುವುದಿಲ್ಲ. 9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆಯಲು (ಕಂಟೇನ್ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಮಾತ್ರ) ಪೋಷಕರ ಒಪ್ಪಿಗೆ ಮೇರೆಗೆ ಶಾಲೆಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಬಾರ್ ಅಂಡ್ ರೆಸ್ಟೋರೆಂಟ್ ಗೆ ಅವಕಾಶ :
ಮದ್ಯದಂಗಡಿಗಳಲ್ಲಿ ಆಹಾರ ಮತ್ತು ಮದ್ಯಗಳೆರಡನ್ನೂ ಸರಬರಾಜು ಮಾಡಲು ಮತ್ತು ಸೇವಿಸಲು ಅವಕಾಶ ನೀಡಲಾಗಿದೆ. ಈ ಕುರಿತು ರಾಜ್ಯ ಸರ್ಕಾರವು ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ. ಆನ್ಲಾಕ್ 4.0 ಜಾರಿ ಬೆನ್ನಲ್ಲೇ ಆರ್ವಿಬಿ(ಪಬ್), ಕ್ಲಬ್(ಸಿಎಲ್4), ಸ್ಟಾರ್ ಹೋಟೆಲ್ (ಸಿಎಲ್6ಎ), ಹೋಟೆಲ್-ಗೃಹ (ಸಿಎಲ್7), ವೈನ್ ಟ್ಯಾವರಿನ್, ವೈನ್ ಬೋಟಿಕ್ ಹಾಗೂ ಮೈಕ್ರೋಬ್ರಿವರಿ ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಶೇ.50 ಗ್ರಾಹಕರು ಆಹಾರದೊಂದಿಗೆ ಮದ್ಯ, ಬಿಯರ್ ಹಾಗೂ ವೈನ್ ಸೇವಿಸಬಹುದು ಎಂದು ಅಬಕಾರಿ ಇಲಾಖೆಯ ಆದೇಶ ತಿಳಿಸಿದೆ.