ನವದೆಹಲಿ: ಕೊರೊನಾ ವೈರಸ್ ಹಿನ್ನೆಲೆ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡ ವಲಸಿಗರನ್ನು ಸ್ಥಳಾಂತರಿಸಲು ವಿವಿಧ ರಾಜ್ಯಗಳು ಅನುಮತಿ ನೀಡಬೇಕು ಎಂದು ಕೇಂದ್ರ ರೇಲ್ವೆ ಸಚಿವ ಪಿಯುಶ್ ಗೋಯೆಲ್ ಮನವಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಗೋಯೆಲ್, "ವಿವಿಧ ರಾಜ್ಯಗಳಲ್ಲಿ ಸಿಕ್ಕಿಬಿದ್ದ ವಲಸಿಗರನ್ನು ಸ್ತಲಾಂತರಿಸಲು ಎಲ್ಲಾ ರಾಜ್ಯಗಳನ್ನು ನಾನು ಕೋರುತ್ತೇನೆ. ಇದರಿಂದ ಮುಂದಿನ ಮೂರು ನಾಲ್ಕು ದಿನಗಳಲ್ಲಿ ನಾವು ಅವರನ್ನು ಮತ್ತೆ ಮನೆಗಳಿಗೆ ಕರೆತರಬಹುದು" ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯ ಮೇರೆಗೆ ಕಳೆದ ಆರು ದಿನಗಳಿಂದ ಶಾರ್ಟ್ ನೋಟಿಸ್ ಮೇಲೆ ನಿತ್ಯ ಸುಮಾರು 300 ಶ್ರಮಿಕ್ ಸ್ಪೆಷಲ್ ಟ್ರೇನ್ ಗಳನ್ನು ಓಡಿಸಲು ರೇಲ್ವೆ ಇಲಾಖೆ ಸಂಪೂರ್ಣ ಸಿದ್ಧವಾಗಿದೆ ಎಂದೂ ಕೂಡ ಅವರು ಹೇಳಿದ್ದಾರೆ.
As per the directions of Hon'ble PM @NarendraModi ji, Railways is fully geared up to run 300 Shramik Special trains everyday at short notice since the last six days.
— Piyush Goyal (@PiyushGoyal) May 10, 2020
I appeal to all the States to give permission to evacuate and bring back their stranded migrants so that we can get all of them back to their homes in the next 3-4 days itself.
— Piyush Goyal (@PiyushGoyal) May 10, 2020
ಇದಕ್ಕೂ ಮೊದಲು ಕರೋನಾ ಪ್ರಕೋಪದ ಹಿನ್ನೆಲೆ ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀಬ್ ಗವಾ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ, ಎಲ್ಲಾ ರಾಜ್ಯಗಳಲ್ಲಿನ ಕರೋನದ ಸ್ಥಿತಿಯನ್ನು ಪರಿಶೀಲಿಸಲಾಗಿದೆ. ಸಭೆಯಲ್ಲಿ, ಅನೇಕ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ರಾಜ್ಯಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ಸುಧಾರಿಸುವ ಅವಶ್ಯಕತೆಯಿದೆ ಎಂದು ಒತ್ತಿ ಹೇಳಿದ್ದಾರೆ.
ಸಭೆಯಲ್ಲಿ, ಕ್ಯಾಬಿನೆಟ್ ಕಾರ್ಯದರ್ಶಿ ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಕರೆದೊಯ್ಯಲು ಕೇಂದ್ರ ಸರ್ಕಾರ ಬದ್ಧವಾಗಿದೆ ಮತ್ತು ಈ ಯೋಜನೆಯಡಿ ಇದುವರೆಗೆ 300 ಕ್ಕೂ ಅಧಿಕ ಶ್ರಮಿಕ್ ಸ್ಪೆಷಲ್ ರೈಲುಗಳು, 3.5 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗಾಗಿ ಓಡಿಸಲಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆಗೆ ಸಹಕರಿಸಬೇಕೆಂದು ಅವರು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ. ಇದೇ ವೇಳೆ ವಂದೇ ಭಾರತ್ ಮಿಷನ್ ಅಡಿ ವಿದೇಶದಿಂದ ಮರಳುವ ಭಾರತೀಯರ ಬಗ್ಗೆ ರಾಜ್ಯಗಳ ಸಹಕಾರದ ಕುರಿತು ಕೂಡ ಅವರು ಚರ್ಚೆ ನಡೆಸಿದ್ದಾರೆ.
ಜೊತೆಗೆ ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ವೈದ್ಯರೊಂದಿಗೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದು ಮತ್ತು ಕರೋನಾ ವಾರಿಯರ್ಸ್ ಗಳ ಅನುಕೂಲ ಮತ್ತು ಸುರಕ್ಷತೆಗಾಗಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕ್ಯಾಬಿನೆಟ್ ಕಾರ್ಯದರ್ಶಿ ಇದೇ ವೇಳೆ ಒತ್ತಿ ಹೇಳಿದ್ದಾರೆ. ಸೋಂಕು ಮತ್ತಷ್ಟು ಪಸರಿಸದಂತೆ ತಡೆಯಲು ರಾಜ್ಯಗಳಲ್ಲಿನ ಕಂಟೇನ್ಮೆಂಟ್ ವಲಯಗಳಲ್ಲಿ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ಈ ಸಭೆಯಲ್ಲಿ ವಿವಿಧ ರಾಜ್ಯಗಳ ಕಾರ್ಯದರ್ಶಿಗಳು ಕೂಡ ತಮ್ಮ ತಮ್ಮ ರಾಜ್ಯಗಳಲ್ಲಿ ನಡೆಸಲಾಗುತ್ತಿರುವ ನಿರ್ವಹಣೆಗಳ ಬಗ್ಗೆ ಕೂಡ ಕ್ಯಾಬಿನೆಟ್ ಸಚಿವರಿಗೆ ಮಾಹಿತಿ ನೀಡಿದ್ದಾರೆ. ಕರೋನಾ ವೈರಸ್‌ನಿಂದ ರಕ್ಷಣೆ ನೀಡುವುದು ಅಗತ್ಯವಾಗಿದ್ದರೂ ಕೂಡ ವಿವಿಧ ರಾಜ್ಯಗಳ ಆರ್ಥಿಕ ಚಟುವಟಿಕೆಗಳನ್ನು ಸಹ ದೊಡ್ಡ ಪ್ರಮಾಣದಲ್ಲಿ ಸುಧಾರಿಸಬೇಕಾಗುವ ಅಗತ್ಯತೆ ಇದೆ ಎಂಬುದನ್ನು ಅವರು ಕ್ಯಾಬಿನೆಟ್ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಕ್ಯಾಬಿನೆಟ್ ಕಾರ್ಯದರ್ಶಿಯ ಈ ಸಭೆಯ ನಂತರ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಐದನೇ ಸುತ್ತಿನ ಸಭೆ ನಡೆಸಲಿದ್ದಾರೆ.