ನವದೆಹಲಿ: ನಮ್ಮ ಸರ್ಕಾರದ ಉದ್ದೇಶ ಪ್ರಬಲ ರಾಷ್ಟ್ರ ಮತ್ತು ಬಲಿಷ್ಠ ನಾಗರಿಕರು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಶುಕ್ರವಾರ ಕೇಂದ್ರ ಬಜೆಟ್ 2019-20ರ ಮಂಡನೆಗೂ ಮುನ್ನ ಮಾತನಾಡಿದ ಅವರು, "ನಮ್ಮ ಉದ್ದೇಶ ಬಲಿಷ್ಠ ರಾಷ್ಟ್ರಕ್ಕಾಗಿ, ಬಲಿಷ್ಠ ನಾಗರಿಕರಿಗಾಗಿ ಆಗಿದೆ. ಹಾಗಾಗಿ ದೃಢ ನಿಶ್ಚಯದ ಮಾನವ ಪ್ರಯತ್ನದಿಂದ ಸರ್ವಕಾರ್ಯವೂ ಖಂಡಿತವಾಗಿ ಪೂರ್ಣಗೊಳ್ಳುತ್ತದೆ" ಎಂದು ಹೇಳಿದರು.
ಇದುವರೆಗೂ ಬಜೆಟ್ ಮಂಡಿಸಲು ಸಂಸತ್ತಿಗೆ ಬ್ರೀಫ್ಕೇಸ್ ಕೊಂಡೊಯ್ಯುವ ಸಂಪ್ರದಾಯವನ್ನು ಮುರಿದ ಸೀತಾರಾಮನ್, ಬ್ರೀಫ್ಕೇಸ್ ಬದಲಿಗೆ ಲೆಡ್ಜರ್ ಪುಸ್ತಕದೊಂದಿಗೆ ಸದನದ ಹೊರಗೆ ಪೋಸ್ ನೀಡಿದರು. ಇದಕ್ಕೂ ಮುನ್ನ ಕೇಂದ್ರ ಕ್ಯಾಬಿನೆಟ್ 2019-20ರ ಬಜೆಟ್ ಅನ್ನು ಅನುಮೋದಿಸಿತು.
ಇಂದಿರಾಗಾಂಧಿ ಬಳಿಕ ದೇಶದಲ್ಲಿ ಬಜೆಟ್ ಮಂಡಿಸುತ್ತಿರುವ ಎರಡನೇ ವಿತ್ತ ಸಚಿವೆ ಎಂಬ ಹೆಗ್ಗಳಿಕೆಗೆ ನಿರ್ಮಲಾ ಸೀತಾರಾಮನ್ ಪಾತ್ರರಾಗಿದ್ದಾರೆ. ಇದು ನರೇಂದ್ರ ಮೋದಿ ಸರ್ಕಾರದ ಎರಡನೇ ಅಧಿಕಾರಾವಧಿಯ ಮೊದಲ ಬಜೆಟ್ ಆಗಿದ್ದು, ನಿರ್ಮಲಾ ಸೀತಾರಾಮನ್ ಅವರ ಪೋಷಕರಾದ ಸಾವಿತ್ರಿ ಮತ್ತು ನಾರಾಯಣನ್ ಸೀತಾರಾಮನ್ ಸಹ ಸಂಸತ್ತಿನಲ್ಲಿ ಉಪಸ್ಥಿತರಿದ್ದಾರೆ.