ಮಧುರೈ: ಒಂದೇ ರೈಲ್ವೆ ಹಳಿಯ ಮೇಲೆ ಎರಡು ರೈಲುಗಳ ಬಂದರೆ ಏನಾಗುತ್ತೆ? ಈ ಬಗ್ಗೆ ಯಾರಾದರೂ ಆಲೋಚಿಸಿದ್ದೀರಾ? ಇಂತಹದೇ ಒಂದು ಘಟನೆ ತಮಿಳುನಾಡಿನ ಮಧುರೈನಲ್ಲಿ ಶುಕ್ರವಾರ ನಡೆದಿದೆ.
ಮಧುರೈನಲ್ಲಿ ಶುಕ್ರವಾರ ಒಂದೇ ಹಳಿಯ ಮೇಲೆ ಎರಡು ಟ್ರೈನ್ ಗಳು ಬಂದದ್ದು ಕಂಡು ಎರಡೂ ರೈಲಿನ ಪ್ರಯಾಣಿಕರು ಕಿರುಚಾಟ ಆರಂಭಿಸಿದ್ದರು. ಇನ್ನೇನು ದೊಡ್ಡ ದುರಂತವೇ ನಡೆದುಹೋಗಲಿದೆ ಎನ್ನುವಷ್ಟರ ಹೊತ್ತಿಗೆ ಎರಡೂ ರೈಲಿನ ಚಾಲಕರು ಎಚ್ಚರಿಕೆಯಿಂದ ಕ್ರಮ ಕೈಗೊಂಡ ಪರಿಣಾಮ ರೈಲುಗಳೆರಡೂ ಸ್ವಲ್ಪ ಅಂತರದಲ್ಲಿ ನಿಂತಿದ್ದರಿಂದ ಭಾರೀ ಅಪಘಾತ ತಪ್ಪಿತು.
ವರದಿಯ ಪ್ರಕಾರ, ಸುರಕ್ಷತಾ ಪ್ರೋಟೋಕಾಲ್ ಅನ್ನು ನಿರ್ಲಕ್ಷಿಸಿ ತೆರವುಗೊಳಿಸುವಿಕೆ ಮತ್ತು ಬೇಜವಾಬ್ದಾರಿ ಕಾರ್ಯ ನಿರ್ವಹಣೆಗಾಗಿ ರೈಲ್ವೆ ಇಲಾಖೆ ಮೂರು ರೈಲ್ವೇ ನೌಕರರನ್ನು ಅಮಾನತುಗೊಳಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಕಾಲಿಗುಡಿ ಮತ್ತು ತಿರುಮಂಗಲಂ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಗಳಾದ ಭೀಮ್ ಸಿಂಗ್ ಮೀನಾ ಮತ್ತು ಜಯಕುಮಾರ್, ನಿಯಂತ್ರಕ ಮುರುಗನಂದಂ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇವರೆಲ್ಲರೂ ಮಧುರೈ ವಿಭಾಗದ ಉದ್ಯೋಗಿಗಳು ಎನ್ನಲಾಗಿದೆ.
ಮಧುರೈನಿಂದ ಸೆಂಗೊಟ್ಟಾಯ್ ಗೆ ಹೊರಟಿದ್ದ ರೈಲು, ಗುರುವಾರ ಸಂಜೆ ತಿರುಮಂಗಲಂ ನಿಲ್ದಾಣದಲ್ಲಿ ಸಂಜೆ 5:30 ಗಂಟೆಗೆ ರೈಲು ಬಂದು ನಿಂತಿತ್ತು. ಅದೇ ಸಮಯದಲ್ಲಿ ಸೆಂಗೋಟ್ಟೈ-ಮಧುರೈ ರೈಲು ಸಹ ಅದೇ ಟ್ರ್ಯಾಕ್ ಮೇಲೆ ಬಂದಿತು. ಅದೇ ಸಮಯಕ್ಕೆ ಎರಡೂ ರೈಲಿನ ಪ್ರಯಾಣಿಕರು ಆತಂಕದಿಂದ ಕಿರುಚಾಡಲು ಆರಂಭಿಸಿದರು. ಕೂಡಲೇ ಎಚ್ಚೆತ್ತುಕೊಂಡ ರೈಲಿನ ಚಾಲಕ ಕೆಲ ಮೀಟರ್ ದೂರದಲ್ಲಿ ರೈಲನ್ನು ನಿಲ್ಲಿಸಿದ ಕಾರಣ ಭಾರೀ ಅನಾಹುತವೊಂದು ತಪ್ಪಿತು. ಈ ಘಟನೆಯ ಬಳಿಕ, ಮಧುರೈ-ಸೆಂಗೋಟ್ಟೈ ರೈಲು ಎರಡು ಗಂಟೆಗಳ ಕಾಲ ವಿಳಂಬವಾಯಿತು.