Farmers Protest : ದೆಹಲಿ ಗಡಿಗಳಲ್ಲಿ ಇಂದು ರೈತರ ಟ್ರ್ಯಾಕ್ಟರ್ ಮೆರವಣಿಗೆ

ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ 7ನೇ ಸುತ್ತಿನ ಸಭೆ ನಡೆಯುವ ಮೊದಲೇ ರೈತರು 'ಮಾತುಕತೆ ಫಲಪ್ರದವಾಗದಿದ್ದರೆ, ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಒಪ್ಪದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು' ಎಂಬ ಎಚ್ಚರಿಕೆ ನೀಡಿದ್ದರು. ಈಗ ಪ್ರತಿಭಟನೆ ತೀವ್ರಗೊಳಿಸುವ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

Written by - Yashaswini V | Last Updated : Jan 7, 2021, 10:15 AM IST
  • ಇದು ಗಣರಾಜ್ಯೋತ್ಸವ ಪಥಸಂಚಲನದ ಟ್ರ್ಯಾಕ್ಟರ್‌ ಮೆರವಣಿಗೆ'ಯ ಟ್ರೈಲರ್
  • ಟ್ರ್ಯಾಕ್ಟರ್ ಮೆರವಣಿಗೆಯ ಮೆರುಗು ಹೆಚ್ಚಿಸಲಿರುವ ರೈತ ಮಹಿಳೆಯರು
  • ಈಗಾಗಲೇ 7 ಸಭೆ ನಡೆದು ಎಲ್ಲವೂ ವಿಫಲವಾಗಿರುವುದರಿಂದ ಪ್ರತಿಭಟನೆ ತೀವ್ರಗೊಳಿಸುತ್ತಿರುವ ರೈತರು
Farmers Protest : ದೆಹಲಿ ಗಡಿಗಳಲ್ಲಿ ಇಂದು ರೈತರ ಟ್ರ್ಯಾಕ್ಟರ್ ಮೆರವಣಿಗೆ title=
Farmers tractor parade today

ನವದೆಹಲಿ: ಇತ್ತೀಚೆಗೆ ಕೇಂದ್ರ ಸರ್ಕಾರ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು (Agricultural Laws) ವಾಪಸ್ ಪಡೆಯುವಂತೆ ಒತ್ತಾಯಿಸಿ 42ಕ್ಕೂ ಹೆಚ್ಚು ರೈತ ಸಂಘಟನೆಗಳು ದೆಹಲಿಯ ಗಡಿಗಳಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ‌. ಈ ನಡುವೆ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ಮಧ್ಯೆ 7 ಸುತ್ತು ಮಾತುಕತೆಗಳು ನಡೆದು 7 ಸಭೆಗಳೂ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಿದ್ದು ಇಂದು ಪೂರ್ವ ಮತ್ತು ಪಶ್ಚಿಮ ಪೆರಿಫೆರಲ್ ಸೇರಿದಂತೆ ದೆಹಲಿಯ ನಾಲ್ಕು ಗಡಿಗಳಲ್ಲಿ ಟ್ರ್ಯಾಕ್ಟರ್ ಮೆರವಣಿಗೆ (Tractor Rally) ನಡೆಸಲಿದ್ದಾರೆ.

ವಿಶೇಷ ಎಂದರೆ ಮಹಿಳೆಯರು ಟ್ರ್ಯಾಕ್ಟರ್ ಚಾಲನೆ ಮಾಡಲಿದ್ದು ಮೆರವಣಿಗೆಯ ಮೆರಗು ಹೆಚ್ಚಿಸಿದ್ದಾರೆ. ಈ ಮೂಲಕ ರೈತ (Farmer) ಹೋರಾಟಕ್ಕೆ ಮಹಿಳೆಯರು ಅಧಿಕೃತವಾಗಿ ಕಾಲಿಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೆ ರೈತರು ಜನವರಿ 26ರಂದು ಗಣರಾಜ್ಯೋತ್ಸವ ಪಥಸಂಚಲನಕ್ಕೆ (Republic Day Pared) ಪ್ರತಿಯಾಗಿ ರೈತರು ಅಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲಿದ್ದಾರೆ. 'ಗಣರಾಜ್ಯೋತ್ಸವದ ಟ್ರ್ಯಾಕ್ಟರ್ ಮೆರವಣಿಗೆ'ಯ ಟ್ರೈಲರ್ (Trailer) ಆಗಿ ಇಂದು ದೆಹಲಿ ಗಡಿಗಳಲ್ಲಿ ಮಹಿಳೆಯರ ಟ್ರ್ಯಾಕ್ಟರ್ ಮೆರವಣಿಗೆಯಲಿದೆ.

ಜನವರಿ 4ರಂದು ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ 7ನೇ ಸುತ್ತಿನ ಸಭೆ ನಡೆಯುವ ಮೊದಲೇ ರೈತರು 'ಮಾತುಕತೆ ಫಲಪ್ರದವಾಗದಿದ್ದರೆ, ಅಂದರೆ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಒಪ್ಪದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು' ಎಂಬ ಎಚ್ಚರಿಕೆಯನ್ನು ರವಾನಿಸಿದ್ದರು. ಈಗ ಪ್ರತಿಭಟನೆಯನ್ನು ತೀವ್ರಗೊಳಿಸುವ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ : 'ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವವರೆಗೆ ನಾವು ಹಿಂದಕ್ಕೆ ಹೆಜ್ಜೆ ಇಡಲ್ಲ'

ಸ್ವರಾಜ್‌ ಇಂಡಿಯಾದ (Swaraj India) ಮುಖಂಡ ಹಾಗೂ ರೈತ ಹೋರಾಟಗಾರ ಯೋಗೇಂದ್ರ ಯಾದವ್ (Yogendra Yadav) 'ಜನವರಿ 7 ರಂದು ದೆಹಲಿಯ ಮುಖ್ಯ ನಾಲ್ಕು ಗಡಿ ಭಾಗದಲ್ಲಿ ಟ್ರಾಕ್ಟರ್‌ ಮೆರವಣಿಗೆ ಆಯೋಜಿಸಲಾಗುವುದು. ಇದು ಜನವರಿ 26 ರಂದು ನಡೆಯುವ ಟ್ರಾಕ್ಟರ್‌ ಮೆರವಣಿಗೆಯ ಟ್ರೇಲರ್‌ ಆಗಿರಲಿದೆ' ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು. ಕನಿಷ್ಠ ಬೆಂಬಲ ಬೆಲೆಗೆ (MSP) ಕಾನೂನಿನಡಿಯಲ್ಲಿ ಖಾತರಿ ಒದಗಿಸಬೇಕು ಹಾಗೂ ರೈತರ ಪಾಲಿಗೆ ಮಾರಕವಾಗಲಿರುವ ವಿದ್ಯುತ್ ಕಾನೂನನ್ನು ರದ್ದುಗೊಳಿಸಬೇಕು ಎಂಬುದು ರೈತರ ಬೇಡಿಕೆಗಳು. 

ಇದನ್ನೂ ಓದಿ : ಕೇಂದ್ರ ಸರ್ಕಾರಕ್ಕೆ ಮತ್ತೆ ರೈತರಿಂದ ಎಚ್ಚರಿಕೆ

ಈ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು 2020ರ ನವೆಂಬರ್ 26ರಿಂದ ದೇಶದ ವಿವಿಧ ಭಾಗಗಳಿಂದ ರೈತರು 'ದೆಹಲಿ ಚಲೊ' ಹೆಸರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡು ದೆಹಲಿಯತ್ತ ಧಾವಿಸಿದ್ದರು. ಆದರೆ ಕೇಂದ್ರ ಸರ್ಕಾರದ ಅಡಿಯಲ್ಲೇ ಕೆಲಸ ಮಾಡುವ ದೆಹಲಿ ಪೊಲೀಸರು (Dehli Police) ರೈತರನ್ನು ದೆಹಲಿ ಗಡಿಗಳಲ್ಲೇ ತಡೆದಿದ್ದರು. ಮೊದಲಿಗೆ ದೆಹಲಿಗೆ ಬಂದು ಪ್ರತಿಭಟನೆ ನಡೆಸಲು ಅನುಮತಿ ಕೊಟ್ಟು ಬಳಿಕ ಪ್ರತಿಭಟನೆ ಹತ್ತಿಕ್ಕಲೆಂದೇ ಕೋವಿಡ್-19 (COVID-19) ನೆಪದಲ್ಲಿ ಅನುಮತಿಯನ್ನು ಹಿಂಪಡೆದ ಪೊಲೀಸರ (ಕೇಂದ್ರ ಸರ್ಕಾರದ) ನಡೆ ಖಂಡಿಸಿ ರೈತರು ದೆಹಲಿ ಗಡಿಗಳಲ್ಲೇ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.

ನವೆಂಬರ್ 26ರಿಂದ ಕಳೆದ 45 ದಿನಗಳಿಂದ ದೆಹಲಿ ಗಡಿಗಳಲ್ಲಿ ಕೊರೆಯುವ ಚಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಹಠಮಾರಿತನ ಪ್ರದರ್ಶಿಸುತ್ತಿದೆ. ಪರಿಣಾಮವಾಗಿ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ. ರೈತರು ಟ್ರ್ಯಾಕ್ಟರ್ ಮೆರವಣಿಗೆ ಹಮ್ಮಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News