JNU; 37 ವರ್ಷಗಳ ಹಿಂದೆ ಇದೇ ರೀತಿ ಹಿಂಸಾಚಾರ ನಡೆದಾಗ ವಿಶ್ವವಿದ್ಯಾಲಯ ಮಾಡಿದ್ದೇನು?

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU) ಆವರಣದಲ್ಲಿ ಭಾನುವಾರ ಸಂಜೆ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಮೇಲೆ ನಡೆದಿರುವ ಹಲ್ಲೆಯ ಬಗ್ಗೆ ಮಾಜಿ ಪ್ರೊ ಉಪಕುಲಪತಿ ಡಾ.ಕಪಿಲ್ ಕಪೂರ್ ಝೀ ನ್ಯೂಸ್ ಜೊತೆ ಮಾತನಾಡಿದರು.

Last Updated : Jan 7, 2020, 06:26 AM IST
JNU; 37 ವರ್ಷಗಳ ಹಿಂದೆ ಇದೇ ರೀತಿ ಹಿಂಸಾಚಾರ ನಡೆದಾಗ ವಿಶ್ವವಿದ್ಯಾಲಯ ಮಾಡಿದ್ದೇನು? title=

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU Violence) ಆವರಣದಲ್ಲಿ ಭಾನುವಾರ ಸಂಜೆ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರನ್ನು ಥಳಿಸಿದ ಪ್ರಕರಣ ಅಪರಿಚಿತ ಜನರ ವಿರುದ್ಧ ದಾಖಲಾಗಿದೆ. ದೆಹಲಿ ಪೊಲೀಸರು ಘಟನೆಯಲ್ಲಿ ಭಾಗಿಯಾದವರ ಸಿಸಿಟಿವಿ ದೃಶ್ಯಾವಳಿಗಳ ತನಿಖೆಯ ನಂತರ ಹೆಸರನ್ನು ನಮೂದಿಸಲಿದ್ದಾರೆ. ಇದೀಗ ಈ ಘಟನೆ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದೀಗ 1972 ರಿಂದ 2005 ರವರೆಗೆ ಜೆಎನ್‌ಯುನಲ್ಲಿದ್ದ ಮಾಜಿ ಜೆಎನ್‌ಯು ಪ್ರೊ. ಉಪಕುಲಪತಿ ಡಾ. ಕಪಿಲ್ ಕಪೂರ್ ಝೀ ನ್ಯೂಸ್ ಜೊತೆ ಘಟನೆ ಕುರಿತಂತೆ ಮಾತನಾಡಿದ್ದಾರೆ.

ಈ ಸಂದರ್ಭದಲ್ಲಿ 37 ವರ್ಷಗಳ ಹಿಂದೆ JNUನಲ್ಲಿ ನಡೆದ ಘಟನೆ ಬಗ್ಗೆ ತಿಳಿಸಿದ ಪ್ರೊ. ಡಾ. ಕಪಿಲ್, '1983 ರಲ್ಲಿ ಸಹ ವಿದ್ಯಾರ್ಥಿಗಳಲ್ಲಿ ಇದೇ ರೀತಿಯ ಒಂದು ಉದ್ವಿಘ್ನತೆ ಭುಗಿಲೆದ್ದಿತ್ತು. ನಂತರ 1 ವರ್ಷದ ಪ್ರವೇಶವನ್ನು ನಿಲ್ಲಿಸಲಾಯಿತು. ಹಾಸ್ಟೆಲ್ ಖಾಲಿ ಮಾಡಲಾಯಿತು ಮತ್ತು ಮತ್ತೆ ಹಾಸ್ಟೆಲ್ನಲ್ಲಿ ಹೊಸ ಪ್ರವೇಶವನ್ನು ನೀಡಲಾಯಿತು ಎಂದು ತಿಳಿಸಿದರು. ಈ ಸಮಯದಲ್ಲಿ ಜೆಎನ್‌ಯು ಅನ್ನು ದ್ವೀಪದಂತೆ ಮಾಡಲಾಗಿದೆ ಮತ್ತು ವಿದ್ಯಾರ್ಥಿಗಳು ನಾಯಕರ ರಾಜಕೀಯಕ್ಕಾಗಿ ರಾಜಕಾರಣಿಗಳ ಕೈಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಕೈಯಲ್ಲಿ ಆಡುತ್ತಿದ್ದಾರೆಂದು ತೋರುತ್ತದೆ. ಶಿಕ್ಷಕರನ್ನು ಕೆಲಸ ಮಾಡಲು ಬಿಡುವುದು ಸಹ ಹಿಂಸೆ. ನನಗೂ ಅದೇ ರೀತಿ ವಿರೋಧವಿತ್ತು ಎಂದವರು ತಿಳಿಸಿದರು.

ಅಧ್ಯಯನದ ಬಗ್ಗೆ ವಿದ್ಯಾರ್ಥಿಗಳ ಗಮನ ಕಡಿಮೆ:
ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ಕಡಿಮೆ ಮತ್ತು ಅಂತರರಾಷ್ಟ್ರೀಯ ರಾಷ್ಟ್ರೀಯ ರಾಜಕೀಯದತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂದು ಡಾ. ಕಪಿಲ್ ಹೇಳಿದರು. ಜೆಎನ್‌ಯುನ ಈ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮೂರು ವರ್ಷಗಳ ಹಿಂದೆ ಮುನೀರ್ಕಾದ ಜನರು ಜೆಎನ್‌ಯು ಭೂಮಿಯನ್ನು ಮರಳಿ ಕೇಳಿದ್ದರು ಎಂದವರು ತಿಳಿಸಿದರು.

ದಾಳಿಕೋರರನ್ನು ಹುಡುಕುತ್ತಿರುವ ಪೊಲೀಸರು:
ಮತ್ತೊಂದೆಡೆ, ಮುಖವಾಡ ಧರಿಸಿ ಬಂದು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಮೇಲೆ ಹಲ್ಲೆ ನಡೆಸಿದ ದಾಳಿಕೋರರು ವಿಶ್ವವಿದ್ಯಾಲಯದಿಂದ ಬಂದವರೋ ಅಥವಾ ಹೊರಗಿನವರೋ ಎಂಬುದನ್ನು ಪತ್ತೆ ಹಚ್ಚಲು ಸಿಸಿಟಿವಿ ವಿಡಿಯೋ ಪರಿಶೀಲಿಸಲು ಪ್ರಯತ್ನಿಸುತ್ತಿರುವುದಾಗಿ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಹಿಂಸಾಚಾರದ ಸಮಯದಲ್ಲಿ ಸಹಾಯಕ್ಕಾಗಿ ಪಿಸಿಆರ್ ಅನ್ನು ಕರೆಯುವವರನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿರುವುದಾಗಿ ಅವರು ತಿಳಿಸಿದರು. "ಭಾನುವಾರ ಸಂಜೆ ಸ್ವೀಕರಿಸಿದ ಪಿಸಿಆರ್ ಕರೆ ಆಧರಿಸಿ ನಾವು ಪ್ರಕರಣ ದಾಖಲಿಸಿದ್ದೇವೆ" ಎಂದು ಅಧಿಕಾರಿ ಹೇಳಿದ್ದಾರೆ.

"ಜೆಎನ್‌ಯು ಹಿಂಸಾಚಾರದ ವೇಳೆ ನಾವು 10-12 ಮೊಬೈಲ್ ಸಂಖ್ಯೆಗಳಿಂದ ಕರೆಗಳನ್ನು ಸ್ವೀಕರಿಸಿದ್ದೇವೆ ಮತ್ತು ಅವರ ಮೊಬೈಲ್ ಫೋನ್‌ಗಳಿಂದ ಕರೆ ಮಾಡಿದವರನ್ನು ಗುರುತಿಸಲು ನಾವು ಪ್ರಯತ್ನಿಸುತ್ತಿದ್ದೇವೆ". ಕ್ಯಾಂಪಸ್ ಒಳಗೆ ಹಿಂಸಾಚಾರ ಹೇಗೆ ಸ್ಫೋಟಿಸಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಸದ್ಯ ಅಪರಿಚಿತ ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಇದರ ಜಾಡು ಸಿಗಲಿದೆ ಎಂದವರು ತಿಳಿಸಿದರು.

ವಿಡಿಯೋ ತುಣುಕಿನ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, 'ನಮ್ಮಲ್ಲಿ ಹಲವಾರು ವಿದ್ಯಾರ್ಥಿಗಳ ಮೊಬೈಲ್ ಫೋನ್‌ಗಳಿಂದ ವೀಡಿಯೊಗಳನ್ನು ರೆಕಾರ್ಡ್ ಮಾಡಲಾಗಿರುವ ತುಣುಕುಗಳು ಲಭ್ಯವಿದೆ. ಘಟನೆಯನ್ನು ದೃಡೀಕರಿಸಲು ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸುತ್ತಿದ್ದೇವೆ. ಇದಕ್ಕೂ ಮೊದಲು ನಾವು ಏನನ್ನೂ ಕಾಮೆಂಟ್ ಮಾಡಲು ಸಾಧ್ಯವಿಲ್ಲ ಎಂದರು.

ಹಿಂದಿನ ದಿನ, ಜೆಎನ್‌ಯು ಪ್ರಕರಣವನ್ನು ಅಪರಾಧ ಶಾಖೆಗೆ ವರ್ಗಾಯಿಸಲಾಯಿತು. ದೆಹಲಿ ಪೊಲೀಸರ ತಂಡ ವಿಶ್ವವಿದ್ಯಾಲಯದ ಆವರಣಕ್ಕೆ ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದೆ. ಭಾನುವಾರ ಸಂಜೆ, ಕೆಲವು ಮುಖವಾಡಧಾರಿಗಳು ಜೆಎನ್‌ಯು ಕ್ಯಾಂಪಸ್‌ಗೆ ಪ್ರವೇಶಿಸಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಮೇಲೆ ಕೋಲು ಮತ್ತು ಲೋಹದ ರಾಡ್ ಗಳಿಂದ ಹಲ್ಲೆ ನಡೆಸಿದರು. ಈ ದಾಳಿಯಲ್ಲಿ ಸುಮಾರು 35 ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಗಾಯಗೊಂಡಿದ್ದಾರೆ. ಹಿಂಸಾಚಾರದ ನಂತರ, ಪೊಲೀಸರು ಆವರಣದ ಸುತ್ತಲೂ ಭಾರಿ ಬಿಗಿ ಭದ್ರತೆ ನಿಯೋಜಿಸಿದ್ದಾರೆ ಮತ್ತು ಹತ್ತಿರದ ಬಾಬಾ ಗಂಗ್ನಾಥ್ ಮಾರ್ಗವನ್ನು ಮುಚ್ಚಿದ್ದಾರೆ.

Trending News