ನವದೆಹಲಿ: 10 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿದ ಸಶಸ್ತ್ರ ಪಡೆಗಳ ಅಂಗವಿಕಲ ಸೈನಿಕರಿಗೆ ಅಮಾನ್ಯ ಪಿಂಚಣಿ ನೀಡಲು ರಕ್ಷಣಾ ಸಚಿವಾಲಯವು ಅನುಮತಿ ನೀಡಿದೆ. ಪ್ರಸ್ತುತ, 10 ವರ್ಷಗಳಿಗಿಂತ ಹೆಚ್ಚು ಸೇವೆ ಸಲ್ಲಿಸಿದ ಮತ್ತು ಮಿಲಿಟರಿ ಸೇವೆಗೆ ಸಂಬಂಧಿಸದ ಯಾವುದೇ ಕಾರಣಗಳಿಂದಾಗಿ ಮುಂದಿನ ಮಿಲಿಟರಿ ಸೇವೆಗೆ ಅಮಾನ್ಯವೆಂದು ಘೋಷಿಸಲ್ಪಟ್ಟಿರುವ ಸಶಸ್ತ್ರ ಪಡೆ ಯೋಧರಿಗೆ ಅಮಾನ್ಯ ಪಿಂಚಣಿ ನೀಡುವ ಅವಕಾಶವಿದೆ. 10 ವರ್ಷಗಳಿಗಿಂತ ಕಡಿಮೆ ಸೇವೆಯನ್ನು ಹೊಂದಿರುವ ಸೈನಿಕರು ಕೇವಲ ಇನ್ವ್ಯಾಲಿಡ್ ಗ್ರಾಚ್ಯುಟಿ ಮಾತ್ರ ಪಡೆಯುತ್ತಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಸಚಿವಾಲಯ, ಸಶಸ್ತ್ರ ಸೇನಾಪಡೆಯಲ್ಲಿ 10 ವರ್ಷಕ್ಕಿಂತ ಕಡಿಮೆ ಅವಧಿಗಾಗಿ ಸೇವೆ ಸಲ್ಲಿಸಿರುವ ಯೋಧರಿಗೂ ಕೂಡ ಇನ್ವ್ಯಾಲಿಡಿಟಿ ಪೆನ್ಷನ್ ನೀಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದಿದೆ. 10 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿರುವ ಹಾಗೂ ಶಾರೀರಿಕ ಅಥವಾ ಮಾನಸಿಕವಾಗಿ ಸೇನೆಯಲ್ಲಿ ಮುಂದುವರೆಯುವಿಕೆಯಿಂದ ಅಮಾನ್ಯಗೊಂಡ ಹಾಗೂ ಪುನರ್ ನಿಯುಕ್ತಿ ಪಟ್ಟಿಯಿಂದ ಕೈಬಿದಲಾಗಿರುವ ಸೈನಿಕರಿಗೆ ಇದರ ಲಾಭ ಸಿಗಲಿದೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ಹೇಳಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಕುರಿತಾದ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ. ಜನವರಿ 4, 2019 ಅಥವಾ ಅದಕ್ಕಿಂತ ಮೊದಲು ಸಶಸ್ತ್ರಪಡೆಯಲ್ಲಿ ಕಾರ್ಯನಿರತರಾಗಿದ್ದ ಎಲ್ಲ ಸೈನಿಕರಿಗೆ ಇದರ ಲಾಭ ಸಿಗಲಿದೆ ಎಂದು ಸಚಿವಾಲಯ ಹೇಳಿದೆ.