ನವದೆಹಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಲದ ಗುಂಡಿಗಳನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ಮೂವರು ಪೌರ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಬೆಳಗ್ಗೆ 9 ಗಂಟೆಗೆ 38 ವರ್ಷದ ರಾಜಪ್ಪನ್ ಎನ್ನುವ ವ್ಯಕ್ತಿ ಮಲದ ಗುಂಡಿಗೆ ಇಳಿದಿದ್ದಾನೆ, ಆಗ ಅಲ್ಲಿನ ವಿಷಕಾರಿ ಅನಿಲದಿಂದಾಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಮಲದ ಗುಂಡಿಯಲ್ಲಿ ರಾಜಪ್ಪನ್ ನ್ನು ರಕ್ಷಿಸಲು ಹೋದ ವೇಡಿಯಪ್ಪನ್ ಹಾಗೂ ಇನ್ನೊಬ್ಬ ವ್ಯಕ್ತಿ ಕೂಡ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ತಂದೆ ಸಾವಿನಿಂದಾಗಿ ದುಃಖಿಗಳಾದ ಮಗಳು ಕುಪ್ಪಮ್ಮ ' ನನ್ನ ತಂದೆ ಮಲದ ಗುಂಡಿಗೆ ಇಳಿಯುವಾಗ, ನಾಯಿ ಇದ್ದಕ್ಕಿದ್ದಂತೆ ಬೊಗಳುತ್ತದೆ. ಅದು ಕೆಟ್ಟ ಶಕುನ ಮತ್ತು ನಾನು ಅವನಿಗೆ ಹೋಗಬೇಡ ಎಂದು ಹೇಳಿದೆ ... ಆದರೆ ಅವರು ನಮ್ಮ ಮಾತು ಕೇಳದೆ ಹೊರಟು ಹೋದರು. ನಂತರ ಅವರು ಮಲದ ಗುಂಡಿಯಿಂದ ಹೊರಗೆ ಬರಲೇ ಇಲ್ಲ ' ಹೇಳಿದರು.
1993 ರಿಂದ ಮಲದ ಗುಂಡಿಯಲ್ಲಿ ಕಾರ್ಯನಿರ್ವಹಿಸುವುದನ್ನು ನಿಷೇಧಿಸಲಾಗಿದೆ. ಅಲ್ಲದೆ 2013 ರಲ್ಲಿ ಮಲದ ಗುಂಡಿ ಬಲಿಯುತ್ತಿದ್ದ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸುವ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಆದಾಗ್ಯೂ ಈ ಪದ್ಧತಿ ಇನ್ನು ದೇಶದಲ್ಲಿ ಚಾಲ್ತಿಯಲ್ಲಿದೆ. ಕಳೆದ ಐದು ವರ್ಷಗಳಲ್ಲಿ ತಮಿಳುನಾಡಿನಲ್ಲಿ ಹಸ್ತಚಾಲಿತ ಸ್ಕ್ಯಾವೆಂಜಿಂಗ್ನಿಂದಾಗಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ.