ನವದೆಹಲಿ:ಕೊರೊನಾ ವೈರಸ್ ಅನ್ನು ಮಟ್ಟ ಹಾಕಲು ಈ ಔಷಧಿಯನ್ನು ಸಿದ್ಧಪಡಿಸಲಾಗಿದೆ ಎಂದು ಬಾಬಾ ರಾಮದೇವ್ ಅವರ ಕಂಪನಿ ಪತಂಜಲಿ ವಿಶ್ವಾಸ ವ್ಯಕ್ತಪಡಿಸಿದೆ. ಮಂಗಳವಾರ ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ಸ್ವಾಮಿ ರಾಮದೇವ್, ಕೊರೊನಾ ವೈರಸ್ ಚಿಕಿತ್ಸೆಗೆ ಯಾವಾಗ ಔಷಧಿ ಬರಲಿದೆ ಎಂಬುದನ್ನು ಇಡೀ ವಿಶ್ವವೇ ನಿರೀಕ್ಷಿಸುತ್ತಿದೆ. ಹೀಗಾಗಿ ಕೊರೊನಾ ವೈರಸ್ ಗೆ ಮೊದಲ ಹಾಗೂ ಸಂಪೂರ್ಣ ಆಯುರ್ವೇದ ಔಷಧಿಯನ್ನು ನಾವು ತಯಾರಿಸಿದ್ದೇವೆ ಎಂಬುದು ಒಂದು ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ. ಕೊರೋನಿಲ್ ಹೆಸರಿನ ಈ ಸಂಪೂರ್ಣ ಆಯುರ್ವೇದ ಔಷಧಿಯನ್ನು ಎಲ್ಲಿ ಪಡೆಯಬೇಕು ಎಂಬುದರ ಕುರಿತು ವಿಸ್ತಾರವಾಗಿ ಬಾಬಾ ರಾಮದೇವ್ ತನ್ನ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಆಯುರ್ವೇದದ ವಿಧಾನದಿಂದ ತಯಾರಿಸಲಾಗಿರುವ ಕೊರೊನಿಲ್ ಔಷಧಿ ಮುಂದಿನ ಏಳು ದಿನಗಳಲ್ಲಿ ಪತಂಜಲಿಯ ಅಂಗಡಿಯಲ್ಲಿ ಲಭ್ಯವಿರಲಿದೆ ಎಂದು ಸ್ವಾಮಿ ರಾಮದೇವ್ ಹೇಳಿದ್ದಾರೆ. ಇದಲ್ಲದೆ, ಈ ಔಷಧಿಯನ್ನು ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಆಪ್ ಕೂಡ ಸೋಮವಾರ ಬಿಡುಗಡೆಗೊಳಿಸಲಾಗುವುದು ಎಂದು ಬಾಬಾ ರಾಮದೇವ್ ಹೇಳಿದ್ದಾರೆ.
Launch of first and foremost evidence-based ayurvedic medicine for Covid-19@yogrishiramdev @Ach_Balkrishna #Patanjali #आयुर्वेदविजय_कोरोनिल_श्वासारि pic.twitter.com/3hiyUSnZJX
— Patanjali Ayurved (@PypAyurved) June 23, 2020
ಪತ್ರಿಕಾಗೋಷ್ಠಿಯಲ್ಲಿ ಸ್ವಾಮಿ ರಾಮದೇವ್, ಅಲೋಪತಿ ವ್ಯವಸ್ಥೆಯು ಇಂದು ಔಷಧಿ ಕ್ಷೇತ್ರವನ್ನು ಮುನ್ನಡೆಸುತ್ತಿದೆ. ಆದರೆ, ನಾವು ಕೊರೊನಿಲ್ ಅನ್ನು ಸಿದ್ಧಪಡಿಸಿ, ಅದರ ಕ್ಲಿನಿಕಲ್ ಕಂಟ್ರೋಲ್ ಸ್ಟಡಿ ಮಾಡಿದ್ದೇವೆ ಮತ್ತು ಅದನ್ನು ನೂರು ಜನರ ಮೇಲೆ ಪರೀಕ್ಷಿಸಿದ್ದೇವೆ. ಮೂರು ದಿನಗಳಲ್ಲಿ, 65 ಪ್ರತಿಶತ ರೋಗಿಗಳು ಧನಾತ್ಮಕದಿಂದ ಋಣಾತ್ಮಕಕ್ಕೆ ತಿರುಗಿದ್ದಾರೆ ಎಂದು ರಾಮದೇವ್ ಹೇಳಿದ್ದಾರೆ. ಏಳು ದಿನಗಳಲ್ಲಿ 100 ಪ್ರತಿಶತ ಜನರು ಗುಣಮುಖರಾಗಿದ್ದಾರೆ. ನಾವು ಈ ಔಷಧಿಯನ್ನು ಸಂಪೂರ್ಣ ಸಂಶೋಧನೆಯೊಂದಿಗೆ ಸಿದ್ಧಪಡಿಸಿದ್ದೇವೆ ಎಂದು ಯೋಗುರು ರಾಮದೇವ್ ಹೇಳಿದ್ದಾರೆ. ಜೊತೆಗೆ ನಮ್ಮ ಔಷಧಿ 100% ಚೇತರಿಕೆ ದರ ಮತ್ತು ಶೂನ್ಯ ಪ್ರತಿಶತ ಸಾವಿನ ಪ್ರಮಾಣವನ್ನು ಹೊಂದಿದೆ. ನಮ್ಮ ಈ ವಿಶ್ವಾಸದ ಕುರಿತು ಜನರು ನಮ್ಮನ್ನು ಪ್ರಶ್ನಿಸಿದರೂ, ಪ್ರತಿಯೊಂದು ಪ್ರಶ್ನೆಗೂ ನಮ್ಮ ಬಳಿ ಉತ್ತರವಿದೆ ಎಂದು ರಾಮದೇವ್ ಹೇಳಿದ್ದಾರೆ. ಈ ಔಷಧಿಯನ್ನು ತಯಾರಿಸಲು ನಾವು ಎಲ್ಲಾ ವೈಜ್ಞಾನಿಕ ನಿಯಮಗಳನ್ನು ಅನುಸರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಈ ಔಷಧಿಯನ್ನು ತಯಾರಿಸಲು ಕೇವಲ ದೇಸಿ ಪದಾರ್ಥಗಳನ್ನು ಮಾತ್ರ ಬಳಸಲಾಗಿದ್ದು, ಇದರಲ್ಲಿ ಮುಲೆಠಿ, ಗಿಲೋಯ್, ಅಶ್ವಗಂಧಾ, ತುಳಸಿ, ಶ್ವಾಸಹರಿ ಇತ್ಯಾದಿಗಳನ್ನು ಬಳಸಲಾಗಿದೆ ಎಂದು ರಾಮದೇವ್ ಮಾಹಿತಿ ನೀಡಿದ್ದಾರೆ.