VIDEO: ಬಳ್ಳಾರಿಯಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ್ದ ಸುಷ್ಮಾ ಸ್ವರಾಜ್!

ಬಳ್ಳಾರಿಯನ್ನು 'ತವರು' ಎಂದು ಹೇಳಿಕೊಂಡಿದ್ದ ಸುಷ್ಮಾ ಸ್ವರಾಜ್, ಪ್ರತಿ ವರ್ಷ(1999-2010) 'ವರಮಹಾಲಕ್ಷ್ಮಿ' ಹಬ್ಬಕ್ಕೆ ಬಳ್ಳಾರಿಗೆ ಬಂದು ಗಣಿ ಜಿಲ್ಲೆಯಲ್ಲಿ ಕಮಲ ಅರಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Last Updated : Aug 7, 2019, 08:40 AM IST
VIDEO: ಬಳ್ಳಾರಿಯಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ್ದ ಸುಷ್ಮಾ ಸ್ವರಾಜ್! title=
Video Grab

ಬೆಂಗಳೂರು: ಕಾಂಗ್ರೆಸ್ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಗಣಿ ನಾಡು ಬಳ್ಳಾರಿಯಲ್ಲಿ ಕಮಲ ಅರಳಿಸಿದ ಕೀರ್ತಿ ಸುಷ್ಮಾ ಸ್ವರಾಜ್ ಅವರಿಗೆ ಸಲ್ಲುತ್ತದೆ. 90 ರ ದಶಕದಲ್ಲಿ 1999ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಹೈದರಾಬಾದ್ ಕರ್ನಾಟಕದ ಭಾಗವಾದ ಬಳ್ಳಾರಿ ಲೋಕಸಭೆ ಕ್ಷೇತ್ರ ಬಹಳ ಗಮನ ಸೆಳೆದಿತ್ತು. ಇದಕ್ಕೆ ಪ್ರಮುಖ ಕಾರಣ ಇಬ್ಬರು ಮಹಿಳಾ ಮಣಿಯರಾದ ಸುಷ್ಮಾ ಸ್ವರಾಜ್ ಮತ್ತು ಸೋನಿಯಾ ಗಾಂಧಿ ಈ ಕ್ಷೇತ್ರದಿಂದ ಕಣಕ್ಕಿಳಿದಿದ್ದರು.

ಉತ್ತರ ಪ್ರದೇಶದ ಅಮೇಥಿ ಮತ್ತು ಬಳ್ಳಾರಿ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸೋನಿಯಾ ಎರಡೂ ಕ್ಷೇತ್ರಗಳಲ್ಲೂ ವಿಜಯದ ಪತಾಕೆ ಹಾರಿಸಿದರು. ತಮ್ಮ ಕುಟುಂಬದ ಭದ್ರಕೋಟೆಯಾಗಿದ್ದ ಅಮೇಥಿ ಕ್ಷೇತ್ರವನ್ನು ಉಳಿಸಿಕೊಂಡು, ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಐವತ್ತು ಸಾವಿರ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದ ಸುಷ್ಮಾ ಸ್ವರಾಜ್ ಅದೇ ಬಳ್ಳಾರಿಯನ್ನು 'ತವರು' ಎಂದು ಹೇಳಿಕೊಂಡರು. ಅಲ್ಲದೆ ಪ್ರತಿ ವರ್ಷ(1999-2010) 'ವರಮಹಾಲಕ್ಷ್ಮಿ' ಹಬ್ಬಕ್ಕೆ ಬಳ್ಳಾರಿಗೆ ಬಂದು ಗಣಿ ಜಿಲ್ಲೆಯಲ್ಲಿ ಕಮಲ ಅರಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಇಂದು ನಮ್ಮೊಂದಿಗಿಲ್ಲ. ತೀವ್ರ ಹೃದಯಾಘಾತದಿಂದ ಅವರು ಮಂಗಳವಾರ ರಾತ್ರಿ ವಿಧಿವಶರಾದರು. ಸುಷ್ಮಾ ನಿಧನಕ್ಕೆ ದೇಶಾದ್ಯಂತ ಲಕ್ಷಾಂತರ ಮಂದಿ ಕಂಬನಿ ಮಿಡಿದಿದ್ದಾರೆ. 

1999ರಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ್ದ ಸುಷ್ಮಾ ಸ್ವರಾಜ್:
ಮಾನ್ಯ ಸಭಾಧ್ಯಕ್ಷರೇ ಭಾರತದ ಜನಪ್ರಿಯ ಪ್ರಧಾನಮಂತ್ರಿ ಮತ್ತು ರಾಜ್ಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರೇ ನೀವು ವಿಶ್ವಾಸಮತ ಯಾಚಿಸಿದ ದಿನವನ್ನು ಜ್ಞಾಪಕ ಮಾಡಿಕೊಳ್ಳುತ್ತೇನೆ....  

ಮಗಳನ್ನು ನಿರಾಸೆಗೊಳಿಸುವುದಿಲ್ಲ ಎಂದು ಭಾವಿಸುತ್ತೇನೆ:
ಇಲ್ಲಿನ ಜನರು ನನ್ನನ್ನು ಮಗಳೆಂದು ಭಾವಿಸಿ ಕುಂಕುಮ, ಅರಿಶಿನ ಉಡಿ ತುಂಬಿದ್ದಾರೆ. ಸಾಧಾರಣವಾದ ಮಗಳು ಈ ಅರಿಶಿನ, ಕುಂಕುಮ, ಬಟ್ಟೆಗಳಿಗೆ ತೃಪ್ತಿಯಾಗುತ್ತಾರೆ. ಆದರೆ, ರಾಜಕಾರಣದಲ್ಲಿ ಇರುವ ಮಗಳು ಇಷ್ಟರಿಂದಲೇ ತೃಪ್ತಿಪಡದೆ, ವೋಟ್(ಮತ) ಅನ್ನು ಸಹ ಬಯಸುತ್ತಾಳೆ ಎಂದಿದ್ದರು.

ಬಳ್ಳಾರಿಯಲ್ಲಿ ಕಾಂಗ್ರೆಸ್ ವಿರುದ್ಧ ಸುಷ್ಮಾ ವಾಗ್ಧಾಳಿ:
ತಾವು ಈ ಮಗಳನ್ನು ನಿರಾಸೆಗೊಳಿಸುವುದಿಲ್ಲ ಎಂದು ಭಾವಿಸುತ್ತೇನೆ. ಬಂಧುಗಳೇ ಶ್ರೀಮತಿ ಸೋನಿಯಾ ಗಾಂಧಿ ಅವರು ಸಾಧಾರಣ ಸಂಸದೆಯಾಗಲು(ಎಂಪಿ) ಬಂದಿಲ್ಲ. ಅವರು ಪ್ರಧಾನಮಂತ್ರಿಯಾಗುವ ಮಹಾತ್ವಾಕಾಂಕ್ಷೆಯೊಂದಿಗೆ ಬಂದಿದ್ದಾರೆ. ಕಾಂಗ್ರೆಸ್ ನವರು ಪ್ರಧಾನಿ ಸ್ಥಾನಕ್ಕೆ ಯಾರನ್ನೂ ಆರಿಸಿಲ್ಲ. ಚುನಾವಣೆ ನಂತರ ಚುನಾಯಿತ ಸದಸ್ಯರು ಪ್ರಧಾನಮಂತ್ರಿಯನ್ನು ಆರಿಸುತ್ತಾರೆ ಎಂದು ಹೇಳುವುದು ಶುದ್ಧ ಸುಳ್ಳು ಎಂದು ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದ್ದರು.

ಸುಳ್ಳು ಹೇಳಿ ದೇಶವನ್ನು ದಾರಿ ತಪ್ಪಿಸಬೇಡಿ:
ಸೋನಿಯಾಗಾಂಧಿಯವರು ರಾಜ್ಯಸಭೆಯ ಸದಸ್ಯರಾಗಲೀ ಅಥವಾ ಲೋಕಸಭಾ ಸದಸ್ಯರಾಗಲೀ ಆಗಿಲ್ಲ. ಆದರೂ, ಕಾಂಗ್ರೇಸಿನ ಸಂಸದೀಯ ಮಂಡಳಿ ನಾಯಕಿಯಾಗಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರ ಮಂತ್ರಿ ಮಂಡಲವನ್ನು ಉರುಳಿಸಿದ ನಂತರ ಸ್ವತಃ ಸೋನಿಯಾಗಾಂಧಿಯವರೇ ಪರ್ಯಾಯ ಸರ್ಕಾರವನ್ನು ರಚಿಸಲು ರಾಷ್ಟ್ರಪತಿ ಅವರನ್ನು ಭೇಟಿಯಾಗಿದ್ದರು. ಆದುದರಿಂದ ಸುಳ್ಳು ಹೇಳಿ ದೇಶವನ್ನು ದಾರಿ ತಪ್ಪಿಸಬೇಡಿ ಎಂದು ಹರಿಹಾಯ್ದಿದ್ದರು. ಪ್ರಿಯಾಂಕ ಹೇಳುತ್ತಾರೆ, ತಾಯಿ... ನನ್ನ ತಾಯಿಯನ್ನು ರಕ್ಷಿಸಿ ಎಂದು ಮತ್ತು ಕಾಂಗ್ರೆಸ್ ಗೆ ವೋಟ್ ಕೇಳಿ ಎಂದು. ಆದರೆ, ನಾನು ಹೇಳುತ್ತೇನೆ "ಭಾರತ ಮಾತೆಯನ್ನು ರಕ್ಷಿಸಿ" ಎಂದು ಮತ್ತು ಬಿಜೆಪಿಗೆ ವೋಟ್ ಕೇಳಿ ಎಂದು. ಸೋನಿಯಾ ಗಾಂಧಿ ಹೇಳುತ್ತಾರೆ 'ನಾನು ಈ ರಾಷ್ಟ್ರದ ಸೊಸೆ'. "ನೀವು ಈ ರಾಷ್ಟ್ರದ ಸೊಸೆ. ನಿಮಗೆ ಸಲ್ಲಬೇಕಾದ ಪ್ರೀತಿ,  ವಿಶ್ವಾಸ ಮತ್ತು ರಕ್ಷಣೆಯನ್ನು  ಕೊಡುತ್ತೇವೆ. ಆದರೆ, ನೀವು ಈ ದೇಶದ ಪ್ರಧಾನಿ ಪದವಿ ಕೇಳಿದರೆ ಈ ಜನತೆ ನಿಮಗೆ ಇಲ್ಲ... ಇಲ್ಲ... ಇಲ್ಲಾ... ಎಂದು ಹೇಳಲೇ ಬೇಕಾಗುತ್ತದೆ." 

ಶ್ರೀಮತಿ ಸೋನಿಯಾಗಾಂಧಿಯವರೇ ಬಳ್ಳಾರಿಗೆ ಬಂದಾಗ, ಜನತೆಯನ್ನು ಉದ್ದೇಶಿಸಿ ಭಾಷಣ ಓದುತ್ತಾ, ನೀವು ಏಕೆ ಹಿಂದುಳಿದಿದ್ದೀರಿ ಎಂದು ಕೇಳಿದ್ದರು. ಸೋನಿಯಾ ಜೀ ಅವರೇ, ಈ ಪ್ರಶ್ನೆಯನ್ನು ನಾವು ನಿಮ್ಮಲ್ಲಿ ಕೇಳಬೇಕು. ತಾವು ಹೇಳಿ 12 ಬಾರಿ ಕಾಂಗ್ರೆಸ್ ಗೆಲ್ಲಿಸಿ ಕಳಿಸಿದರೂ ಏಕೆ ಹಿಂದೆ ಉಳಿದಿದ್ದೆವು? ಈ ಪ್ರಶ್ನೆಗೆ ಹೇಳಬೇಕಾದವರೂ ನೀವು... ಎಂದು ಸುಷ್ಮಾ ಹೇಳಿದ್ದರು.

ಸೋನಿಯಾ ಗಾಂಧಿಯವರು ಹೇಳುತ್ತಾರೆ, ನೀವು ಈ ರಾಷ್ಟ್ರದ ಸೊಸೆ. ಈ ರಾಷ್ಟ್ರಕ್ಕಾಗಿ ನಿಮ್ಮ ಸೇವೆ ಏನು? ರಾಷ್ಟ್ರಕ್ಕಾಗಿ ಮಾಡಿದ ಹೋರಾಟ ಏನು? ತ್ಯಾಗ ಏನು?  ಮತ್ತು ರಾಷ್ಟ್ರ ಪಾಲನೆಯಲ್ಲಿ ನಿಮ್ಮ ಅನುಭವ ಏನು? ನಿಮ್ಮ ಜೀವನ ಚರಿತ್ರೆ ನೋಡಿದಲ್ಲಿ ಸೇವೆ ಸೊನ್ನೆ, ತ್ಯಾಗ ಸೊನ್ನೆ ಮತ್ತು ಅನುಭವ ಸೊನ್ನೆ... ಸೊನ್ನೆ... ಸೊನ್ನೆ... ಎಂದು ವ್ಯಂಗ್ಯ ವಾಡಿದ್ದರು.

ಇದಕ್ಕೆ ವ್ಯತಿರಿಕ್ತವಾಗಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಚರಿತ್ರೆಯನ್ನು ಓದಿ... 60 ವರ್ಷಗಳ ಮೇಲ್ಪಟ್ಟ ವಾಜಪೇಯಿ ಸಂಸದೀಯ ಅನುಭವ, ಅವರ ತ್ಯಾಗ,  ಸೇವಾ ಮನೋಭಾವ, ಬುದ್ಧಿವಂತಿಕೆ, ಮನೋವೈಶಾಲ್ಯ, ಅಸಾಧಾರಣವಾದದ್ದು ಎಂದು ವಾಜಪೇಯಿ ಅವರನ್ನು ಹಾಡಿ ಹೊಗಳಿದ್ದರು.

ಆದ್ದರಿಂದ ಕಾಂಗ್ರೆಸ್ ನವರು ಧನ ಬಲ ಮತ್ತು ಜನ ಬಲದ ಸಹಾಯದಿಂದ ಚುನಾವಣೆಯನ್ನು ಗೆಲ್ಲುತ್ತಾರೆ. ಅವರಿಗೆ ನೆನಪಿರಲಿ, ನಮ್ಮಲ್ಲಿ ಬರೀ ಕಮಲ ಮಾತ್ರ ಇಲ್ಲ. ನಮ್ಮ ಜೊತೆಗೆ ಬಾಣವೂ ಇದೇ ಎಂದು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ್ದರು.

ಕನ್ನಡದಲ್ಲಿ ಸುಷ್ಮಾ ಅವರ ಭಾಷಣವನ್ನು ನೀವೂ ಒಮ್ಮೆ ಕೇಳಿ...

Trending News