ಇಂದಿನಿಂದ ಸುಪ್ರೀಂನಲ್ಲಿ ರಾಮ ಜನ್ಮ ಭೂಮಿ ವಿವಾದ ಅಂತಿಮ ವಿಚಾರಣೆ; ಯಾರ ಪಾಲಾಗುತ್ತೆ ಅಯೋಧ್ಯೆ?

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ.

Last Updated : Oct 29, 2018, 09:47 AM IST
ಇಂದಿನಿಂದ ಸುಪ್ರೀಂನಲ್ಲಿ ರಾಮ ಜನ್ಮ ಭೂಮಿ ವಿವಾದ ಅಂತಿಮ ವಿಚಾರಣೆ; ಯಾರ ಪಾಲಾಗುತ್ತೆ ಅಯೋಧ್ಯೆ? title=

ನವದೆಹಲಿ: ಎರಡು ದಶಕಗಳಿಂದ ಹಿಂದೂ-ಮುಸ್ಲಿಮರ ನಡುವಿನ ವೈಮನಸ್ಸಿಗೆ ಕಾರಣವಾಗಿರುವ ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ಸ್ಥಳ ವಿವಾದದ ಅರ್ಜಿಗಳ ಅಂತಿಮ ಹಂತದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರದಿಂದ ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳು ವಾದ ಮತ್ತು ಪ್ರತಿವಾದಕ್ಕೆ ಸಂಪೂರ್ಣ ಸಿದ್ಧತೆ ನಡೆಸಿವೆ.

2.77 ಎಕರೆ ವಿವಾದಿತ ಸ್ಥಳದ ಮಾಲೀಕತ್ವದ ಬಗ್ಗೆ ಎದ್ದಿರುವ ಪ್ರಶ್ನೆಗೆ ಉತ್ತರ ನೀಡಲು ಇಂದಿನಿಂದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ.

2010ರಲ್ಲಿ ಈ ವಿವಾದದ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್ ಈ 2.77 ಎಕರೆ ವಿವಾದಿತ ಪ್ರದೇಶವನ್ನು ರಾಮಲಲ್ಲಾ, ಸುನ್ನಿ ವಕ್ಫ್ ಬೋರ್ಡ್ ಮತ್ತು ನಿರ್ಮೋಹಿ ಅಖರ ಈ ಮೂವರಿಗೆ ಸಮನಾಗಿ ಹಂಚಿಕೆ ಮಾಡಿ ತೀರ್ಪು ಕೊಟ್ಟಿತ್ತು. ಆ ತೀರ್ಪನ್ನು ಪ್ರಶ್ನಿಸಿ ಸಾಕಷ್ಟು ಮೇಲ್ಮನವಿಗಳು ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಕೆಯಾಗಿದ್ದವು. ಇದೀಗ ಈ ವಿವಾದಕ್ಕೆ ಇತಿಶ್ರೀ ಹೇಳಲು ಬಯಸಿರುವ ಸುಪ್ರೀಂ ಕೋರ್ಟ್​, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾಯಮುರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮುರ್ತಿ ಕೆ.ಎಂ.ಜೋಸೆಫ್ ಅವರಿರುವ ಸುಪ್ರೀಂ ಪೀಠವು ಈ ಮೇಲ್ಮನವಿಗಳ ವಿಚಾರಣೆ ನಡೆಸಲಿದೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ನಮಾಜ್ ಮಾಡಲು ಮಸೀದಿಯೇ ಬೇಕಿಲ್ಲ ಎಂದು ಎಂದು 1994ರ ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶವನ್ನು ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು. ಜೊತೆಗೆ ಈ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ತೀರ್ಮಾನಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
 

Trending News