CAA-2019 ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಸಿದ್ಧ

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ದಾಖಲಿಸಲಾಗಿರುವ ಎಲ್ಲ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 18ಕ್ಕೆ ನಡೆಸಲಿದೆ.

Last Updated : Dec 16, 2019, 03:39 PM IST
CAA-2019 ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಸಿದ್ಧ title=

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ದಾಖಲಿಸಲಾಗಿರುವ ಎಲ್ಲ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 18ಕ್ಕೆ ನಡೆಸಲಿದೆ. ತ್ರಿಪುರಾ ಮಹಾರಾಜ ಹಾಗೂ ಕಮಲ್ ಹಾಸನ್ ಅವರ ಪಕ್ಷ MNM ಸರ್ವೋಚ್ಛ ನ್ಯಾಯಾಲಯದಲ್ಲಿ ಈ ಅರ್ಜಿಗಳನ್ನು ದಾಖಲಿಸಿದ್ದು, ಪ್ರಕರಣಗಳ ತ್ವರಿತ ವಿಚಾರಣೆ ನಡೆಸುವಂತೆ ಆಗ್ರಹಿಸಿವೆ. ಇದಕ್ಕೂ ಮೊದಲು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಜಯರಾಂ ರಮೇಶ್ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಅವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ದಾಖಲಿಸಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿದ್ದರು. ಇದೊಂದು ಅಸಂವಿಧಾನಿಕ ಕಾನೂನು ಆಗಿದ್ದು ಇದನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಅವರು ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.

ಈ ಕಾಯ್ದೆ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಆದರಿಂದ ಇಂತಹ ಕಾನೂನನ್ನು ಅನೂರ್ಜಿತಗೊಳಿಸಬೇಕು ಎಂದು ಜಯರಾಂ ರಮೇಶ್ ತಮ್ಮ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಕಾನೂನು 1985ರ ಅಸ್ಸಾಂ ಒಪ್ಪಂದಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಘೋಷಿಸಬೇಕು ಎಂದು ಅವರು ಕೋರಿದ್ದಾರೆ. ಜೊತೆಗೆ ಸುಪ್ರೀಂ ಕೋರ್ಟ್ ನಲ್ಲಿ ಸರಬಾನಂದ್ ಸೋನೋವಾಲ್ ಅವರು ನೀಡಿದ ತೀರ್ಪಿನ ಉಲ್ಲಂಘನೆಯನ್ನೂ ಸಹ ಈ ಕಾಯ್ದೆ ಮಾಡುತ್ತಿದ್ದು, ಇದನ್ನು ಕೂಡಲೇ ರದ್ದುಗೊಳಿಸಬೇಕು. ಪೌರತ್ವ ತಿದ್ದುಪಡಿ ಕಾಯ್ದೆ-2019 ಹಲವಾರು ಅಂತಾರಾಷ್ಟ್ರೀಯ ಒಪ್ಪಂದಗಳ ಉಲ್ಲಂಘನೆಯಾಗಿದ್ದು, ಈ ಒಪ್ಪಂದಗಳಿಗೆ ಭಾರತ ಕೂಡ ಸಹಿ ಹಾಕಿರುವುದಾಗಿ ಜಯರಾಂ ರಮೇಶ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. 

ಇತ್ತ ಜಾಮಿಯಾ ಮಿಲಿಯಾ ಹಾಗೂ ಅಲಿಗಡ್ ವಿಶ್ವವಿದ್ಯಾಲಯಗಳಲ್ಲಿ ನಡೆದ ಹಿಂಸೆ ಕುರಿತಾದ ಪ್ರಕರಣ ಕೂಡ ಸುಪ್ರೀಂ ಅಂಗಳಕ್ಕೆ ತಲುಪಿದೆ. ಇಂದು ಕೋರ್ಟ್ ನಲ್ಲಿ ವಕೀಲರು ಚೀಫ್ ಜಸ್ಟಿಸ್ ನ್ಯಾಯಾಲಯದಲ್ಲಿ ಈ ಕುರಿತು ಉಲ್ಲೇಖಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಮುಖ್ಯ ನ್ಯಾಯಮೂರ್ತಿಗಳು "ಈ ಪ್ರಕರಣದಲ್ಲಿ ಯಾರು ದೋಷಿಗಳು ಅಥವಾ ನಿರ್ದೋಷಿಗಳು ಎಂಬುದನ್ನು ನಾವು ಹೇಳುತ್ತಿಲ್ಲ. ಇಂತಹ ಪ್ರಕರಣಗಳು ನಿಲ್ಲಬೇಕು ಎಂಬುದೇ ನ್ಯಾಯಾಲಯದ ಇಚ್ಚೆಯಾಗಿದೆ" ಎಂದಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಉಂಟಾಗುತ್ತಿರುವ ಹಾನಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯ ನ್ಯಾಯಮೂರ್ತಿಗಳು. ಎಲ್ಲೆಂದರಲೆಲ್ಲ ಹಿಂಸೆ ನಡೆಯುತ್ತಿದ್ದು, ಈ ಹಿಂಸೆಗಳು ಕೂಡಲೇ ನಿಲ್ಲಬೇಕು. ಆ ಬಳಿಕ ಮಾತ್ರ ಈ ಕುರಿತು ವಿಚಾರಣೆ ಸಾಧ್ಯ ಎಂದಿದ್ದಾರೆ.

ಇದಕ್ಕೂ ಮೊದಲು ಅಲಿಗಡ್ ಮುಸ್ಲಿಂ ವಿವಿ ಹಾಗೂ ಜಾಮಿಯಾ ವಿವಿಗಳಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿರುವ ಕಾರ್ಯಾಚರಣೆಯ ಕುರಿತು ಹಿರಿಯ ನ್ಯಾಯವಾದಿ ಇಂದಿರಾ ಜಯಸಿಂಗ್ ಸುಪ್ರೀಂನಲ್ಲಿ ಉಲ್ಲೇಖಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳನ್ನು ಕಾನೂನುಬಾಹೀರವಾಗಿ ಬಂಧಿಸಲಾಗಿದ್ದು, ಹಲವಾರು ವಿದ್ಯಾರ್ಥಿಗಳು ಕಾಣೆಯಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ಅವರು ತಿಳಿಸಿದ್ದಾರೆ. ಅಲ್ಲಿ ವಿದ್ಯಾರ್ಥಿಗಳ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದ್ದು, ನ್ಯಾಯಾಲಯ ಖುದ್ದಾಗಿ ಈ ಪ್ರಕರಣ ಕುರಿತು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಕಳೆದ ರವಿವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ದೆಹಲಿ ಪೊಲೀಸರು ಹಾಗೂ ವಿದ್ಯಾರ್ಥಿಗಳ ಮಧ್ಯೆ ಚಕಮಕಿ ಸಂಭವಿಸಿದು, ಸೋಮವಾರ ಬೆಳಗ್ಗೆ ಸ್ಥಿತಿ ಸಾಮಾನ್ಯಕ್ಕೆ ಮರಳುತ್ತಿದ್ದೆ. ಈ ವೇಳೆ ಬಂಧಿಸಲ್ಪಟ್ಟ ಎಲ್ಲ ವಿದ್ಯಾರ್ಥಿಗಳನ್ನು ದೆಹಲಿ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ನಿನ್ನೆ ಸಂಜೆ ಮುಚ್ಚಲಾಗಿದ್ದ ದೆಹಲಿ ಮೆಟ್ರೋನ ಎಲ್ಲ ಗೇಟ್ ಗಳನ್ನು ಇಂದು ಬೆಳಗ್ಗೆ ಪುನಃ ತೆರೆಯಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.

Trending News