ಕರ್ನಾಟಕದಲ್ಲಿ ವಿಧಾನಸಭೆ ಉಪಚುನಾವಣೆಗೆ ಸುಪ್ರೀಂಕೋರ್ಟ್ ತಡೆ

ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ಘೋಷಣೆಯಾಗಿದ್ದ ಉಪಚುನಾವಣೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.   

Last Updated : Sep 26, 2019, 04:52 PM IST
ಕರ್ನಾಟಕದಲ್ಲಿ ವಿಧಾನಸಭೆ ಉಪಚುನಾವಣೆಗೆ ಸುಪ್ರೀಂಕೋರ್ಟ್ ತಡೆ title=

ನವದೆಹಲಿ: ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ಘೋಷಣೆಯಾಗಿದ್ದ ಉಪಚುನಾವಣೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಇದರಿಂದಾಗಿ ಅನರ್ಹ ಶಾಸಕರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.

ಇಂದು ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠ, ಈ ಪ್ರಕರಣ ಇತ್ಯರ್ಥವಾಗುವವರೆಗೂ ಉಪಚುನಾವಣೆ ನಡೆಸುವಂತಿಲ್ಲ ಎಂದು ಆದೇಶಿಸಿ, 15 ಕ್ಷೇತ್ರಗಳ ಉಪಚುನಾವಣೆಗೆ ತಡೆಯಾಜ್ಞೆ ನೀಡಿದೆ. ಅಲ್ಲದೆ, ಶಾಸಕರ ಅನರ್ಹತೆ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ನ್ಯಾಯಾಲಯ ಮುಂದೂಡಿದೆ.

ಬುಧವಾರ ಅನರ್ಹ ಶಾಸಕರ ಪರ ವಾದ ಮಂಡಿಸಿದ ವಕೀಲ ಮುಕುಲ್ ರೋಹ್ಟಗಿ ಅವರು,  ಶಾಸಕರ ಅನರ್ಹತೆಯಿಂದಾಗಿ ತೆರವಾಗಿರುವ 15 ವಿಧಾನಸಭಾ ಕ್ಷೇತ್ರಗಳಿಗೆ ಈಗಾಗಲೇ ಚುನಾವಣಾ ಆಯೋಗ ಉಪಚುನಾವಣೆ ಅಧಿಸೂಚನೆ ಹೊರಡಿಸಿದೆ. ಅದರಂತೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದೆ. ಹಾಗಾಗಿ ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಕೂಡಲೇ ಇತ್ಯರ್ಥಗೊಳಿಸಿ. ಇಲ್ಲವಾದಲ್ಲಿ ಉಪಚುನಾವಣೆ ಮುಂದೂಡಿ ಅಥವಾ ಸ್ಪೀಕರ್ ಆದೇಶಕ್ಕೆ ತಡೆ ನೀಡಿ ಅನರ್ಹಗೊಂಡಿರುವ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. 

ಬಳಿಕ ಇಂದು ನಡೆದ ವಿಚಾರಣೆಯಲ್ಲಿ ಕಾಂಗ್ರೆಸ್ ಪರ ವಾದ ಮಂಡಿಸಿದ ವಕೀಲ ಕಪಿಲ್ ಸಿಬಲ್ ಅವರು, ಚುನಾವಣೆಯನ್ನು ಯಾವುದೇ ಕಾರಣಕ್ಕೂ ಮುಂದೂಡಬಾರದು. ನಿಗದಿತ ಸಮಯಕ್ಕೆ ಚುನಾವಣೆ ನಡೆಯಲಿ ಎಂದು ವಾದ ಮಂಡಿಸಿದರು. ಚುನಾವಣಾ ಆಯೋಗದ ಪರ ವಕೀಲ ದ್ವಿವೇದಿ ಅವರ ವಾದವೂ ಇದೇ ಆಗಿತ್ತು. 

ಆದರೆ, ವಾದ ಪ್ರತಿವಾದಗಳನ್ನು ಆಲಿಸಿದ ತ್ರಿಸದ್ಯ ಪೀಠ, ಪ್ರಕರಣದ ಸಮಗ್ರ ವಿಚಾರಣೆ ನಡೆಸುವ ಅಗತ್ಯವಿರುವುದರಿಂದ ಉಪಚುನಾವಣೆಗೆ ತಡೆ ನೀಡಿ, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಿದೆ. ಆದರೆ, ಸ್ಪೀಕರ್ ರಮೇಶ್ ಕುಮಾರ್ ಅವರು ನೀಡಿದ್ದ ಅನರ್ಹತೆ ಆದೇಶಕ್ಕೆ ತಡೆಯಾಜ್ಞೆ ನೀಡದ ಕಾರಣ, ಅನರ್ಹಗೊಂಡಿರುವ ಶಾಸಕರು ಅನರ್ಹರಾಗಿಯೇ ಉಳಿದಿದ್ದಾರೆ. 

ಮತ್ತೊಂದೆಡೆ, ಉಪಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿ, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಹಂತದಲ್ಲಿದ್ದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳಿಗೆ ತಡೆಯಾಜ್ಞೆಯಿಂದಾಗಿ ನಿರಾಸೆ ಉಂಟಾಗಿದೆ.
 

Trending News