ಸುಪ್ರೀಂ ಕೋರ್ಟ್‌ನಲ್ಲಿ ಇಂದು ಅನರ್ಹರ ಪ್ರಕರಣದ ಆದೇಶ ಪ್ರಕಟ ಸಾಧ್ಯತೆ

ಒಟ್ಟಾರೆ ಅನರ್ಹ ಶಾಸಕರ ಪರವಾಗಿ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ,‌ ಚಿಕ್ಕಬಳ್ಳಾಪುರ ಕ್ಷೇತ್ರದ ಅನರ್ಹ ಶಾಸಕ ಡಾ. ಸುಧಾಕರ್ ಪರವಾಗಿ ಹಿರಿಯ ನ್ಯಾಯವಾದಿ ಸಿ.ಎ.‌‌ ಸುಂದರಂ, ಪಕ್ಷೇತರ ಶಾಸಕ ಆರ್. ಶಂಕರ್ ಮತ್ತು ಶ್ರೀಮಂತ ಪಾಟೀಲ್ ಪರವಾಗಿ ಗಿರಿ, ಆನಂದ್ ಸಿಂಗ್ ಪರವಾಗಿ ಸಜ್ಜನ್ ಪೂವಯ್ಯ, ಜೆಡಿಎಸ್ ಅನರ್ಹ ಶಾಸಕರ ಪರವಾಗಿ ವಿಶ್ವನಾಥನ್‌ ಹಾಗೂ ಸ್ಪೀಕರ್ ಪರವಾಗಿ ಅಡಿಷನಲ್ ಸಾಲಿಸಿಟರ್​ ಜನರಲ್​ ತುಷಾರ್ ಮೆಹ್ತಾ ವಾದ ಮಂಡಿಸಿದರು.

Last Updated : Sep 26, 2019, 08:14 AM IST
ಸುಪ್ರೀಂ ಕೋರ್ಟ್‌ನಲ್ಲಿ ಇಂದು ಅನರ್ಹರ ಪ್ರಕರಣದ ಆದೇಶ ಪ್ರಕಟ ಸಾಧ್ಯತೆ title=

ನವದೆಹಲಿ: ಬುಧವಾರ ದಿನವಿಡೀ ಕರ್ನಾಟಕದ 17 ಮಂದಿ ಕಾಂಗ್ರೆಸ್ ಮತ್ತು ಜೆಡಿಎಸ್ ಅನರ್ಹ ಶಾಸಕರ ಪರ ವಾದ ಆಲಿಸಿದ ಸುಪ್ರೀಂ ಕೋರ್ಟ್ ಗುರುವಾರಕ್ಕೆ ವಿಚಾರಣೆ ಮಂದೂಡಿದ್ದು, ಇಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪರ ವಕೀಲರ ವಾದ ಕೇಳಿದ ಬಳಿಕ ಆದೇಶ ನೀಡುವ ಸಾಧ್ಯತೆ ಇದೆ.

ಬುಧವಾರ ಬೆಳಗ್ಗೆ 11.30 ಸುಮಾರಿಗೆ ಅನರ್ಹ ಶಾಸಕರು ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ಕೈಗೆತಿಕೊಂಡ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜಯ್ ಖನ್ನಾ ಮತ್ತು ಕೃಷ್ಣನ್ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠವು ದಿನವಿಡೀ ಅನರ್ಹ ಶಾಸಕರ ಪರ ವಾದ ಆಲಿಸಿತು.

ಒಟ್ಟಾರೆ ಅನರ್ಹ ಶಾಸಕರ ಪರವಾಗಿ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ,‌ ಚಿಕ್ಕಬಳ್ಳಾಪುರ ಕ್ಷೇತ್ರದ ಅನರ್ಹ ಶಾಸಕ ಡಾ. ಸುಧಾಕರ್ ಪರವಾಗಿ ಹಿರಿಯ ನ್ಯಾಯವಾದಿ ಸಿ.ಎ.‌‌ ಸುಂದರಂ, ಪಕ್ಷೇತರ ಶಾಸಕ ಆರ್. ಶಂಕರ್ ಮತ್ತು ಶ್ರೀಮಂತ ಪಾಟೀಲ್ ಪರವಾಗಿ ಗಿರಿ, ಆನಂದ್ ಸಿಂಗ್ ಪರವಾಗಿ ಸಜ್ಜನ್ ಪೂವಯ್ಯ, ಜೆಡಿಎಸ್ ಅನರ್ಹ ಶಾಸಕರ ಪರವಾಗಿ ವಿಶ್ವನಾಥನ್‌ ಹಾಗೂ ಸ್ಪೀಕರ್ ಪರವಾಗಿ ಅಡಿಷನಲ್ ಸಾಲಿಸಿಟರ್​ ಜನರಲ್​ ತುಷಾರ್ ಮೆಹ್ತಾ ವಾದ ಮಂಡಿಸಿದರು.

ಮೊದಲು ವಾದ ಮಂಡಿಸಿದ ಮುಕುಲ್​ ರೋಹಟ್ಗಿ, ಚುನಾಯಿತ ಪ್ರತಿನಿಧಿಗಳನ್ನು ಹಲವು ನಿಯಮಗಳಡಿ ಅನರ್ಹಗೊಳಿಸಲು ಕಾರಣಗಳಿವೆ. ರಾಜೀನಾಮೆ ನೀಡುವಾಗ ಶಾಸಕರು ಪೂರ್ವಾಪರ ಯೋಚಿಸಿ ನಿರ್ಧಾರ ತೆಗೆದುಕೊಂಡು ರಾಜೀನಾಮೆ ಸಲ್ಲಿಸಿರುತ್ತಾರೆ. ಬೇರೆ ಕಾರಣ ನೀಡಿ ರಾಜೀನಾಮೆ ತಿರಸ್ಕರಿಸಿ ಅನರ್ಹಗೊಳಿಸುವುದು ಸರಿಯಲ್ಲ. ಚುನಾವಣೆಗೆ ಸ್ಪರ್ಧಿಸದಂತೆ ಸೂಚಿಸಿರುವುದು ಕೂಡ ಸರಿಯಲ್ಲ. ಕೂಡಲೇ ಚುನಾವಣೆ ಪ್ರಕ್ರಿಯೆಯನ್ನು 2-3 ತಿಂಗಳು ಮುಂದೂಡಬೇಕು. ಇಲ್ಲವೇ ಸ್ಪರ್ಧೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಪಕ್ಷವನ್ನು ತ್ಯಜಿಸಿದರೇ ಅಥವಾ ಪಕ್ಷಕ್ಕೆ ಹಾನಿಯಾಗುವಂತಹ ಚಟುವಟಿಕೆ ನಡೆಸಿದರೆ ಮಾತ್ರ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುತ್ತದೆ. ಅದರಡಿ ನಿರ್ಧಾರ ಕೈಗೊಳ್ಳಬಹುದು. ಆದರೆ, ಸ್ಪೀಕರ್​ ಈ ಯಾವ ಚಟುವಟಿಕೆಗಳು ಇಲ್ಲದೆಯೇ ಅವರನ್ನು ಅನರ್ಹಗೊಳಿಸಿದ್ದಾರೆ ಎಂದು ಅನರ್ಹ ಶಾಸಕ ಸುಧಾಕರ್ ಪರ ವಕೀಲ ಸಿ.ಎ. ಸುಂದರಂ ವಾದ ಮಂಡಿಸಿದರು.

ಈ ನಡುವೆ ಈಗಿನ ಸ್ಪೀಕರ್​ ಪರ ವಾದ ಮಂಡಿಸಿದ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ, ರಾಜೀನಾಮೆ ನೀಡಲು ಶಾಸಕರು ಸ್ವತಂತ್ರ. ಅವರ ರಾಜೀನಾಮೆ ಕಾನೂನು ಬದ್ಧವೇ ಹಾಗೂ ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೋ ಇಲ್ಲವೋ ಎಂಬುದನ್ನ ನಿರ್ಧರಿಸುವುದಷ್ಟೇ ಸ್ಪೀಕರ್​ ಕೆಲಸ. ಇನ್ನು ಅವರು ಪಕ್ಷ ಬಿಡ್ತಾರಾ ಮುಂದೇನು ಮಾಡ್ತಾರೆ, ಹಿಂದಿನ ಉದ್ದೇಶ ಏನು ಎಂಬ ಬಗ್ಗೆ ನಿರ್ಧರಿಸುವುದು ಸ್ಪೀಕರ್​ ಕೆಲಸವಲ್ಲ. ಇನ್ನು ರಾಜೀನಾಮೆ ಮೊದಲು ನೀಡಿದಾಗ ಹಾಗೂ ಆ ಸ್ಪೀಕರ್​ ಮುಂದೆ ಬರುವ ಅನರ್ಹತೆ ಅರ್ಜಿಗಳಲ್ಲಿ ಸ್ಪೀಕರ್​ ನಡೆದುಕೊಳ್ಳಬೇಕಾದ ರೀತಿಗಳ ಬಗ್ಗೆ ನಿಯಮಾವಳಿ ರೂಪಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ರಾಜೀನಾಮೆ ನೀಡದೆ ಅನರ್ಹಗೊಂಡಿರುವ ಶಾಸಕರಾದ ಆರ್. ಶಂಕರ್ ಹಾಗೂ ಶ್ರೀಮಂತ ಪಾಟೀಲ ಅವರ‌ ಪರ ವಕೀಲ ವಿ. ಗಿರಿ ವಾದ ಮಾಡಿ ರಾಜೀನಾಮೆ ನೀಡದಿದ್ದರೂ ಅನರ್ಹಗೊಳಿಸಲಾಗಿದೆ. ಶಂಕರ್ ಅವರ ಕೆಪಿಜೆಪಿಯು ಮೈತ್ರಿ ಸರ್ಕಾರದ ಭಾಗ ಆಗಿರಲಿಲ್ಲ.‌ ಪಕ್ಷವನ್ನು ಕಾಂಗ್ರೆಸ್  ಪಕ್ಷದಲ್ಲಿ ವಿಲೀನಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಸ್ಪೀಕರ್ ಈ ಕುರಿತ ಪ್ರಕ್ರಿಯೆಗೆ ಪಕ್ಷದ ಒಪ್ಪಿಗೆ ಪತ್ರ ನೀಡಿರುವುದು ಸರಿಯಿಲ್ಲ ಎಂದು ಕಳೆದ ಜೂನ್ ತಿಂಗಳಲ್ಲಿ ಲಿಖಿತವಾಗಿ ತಿಳಿಸಿ‌‌‌‌ ವಿಲೀನ‌ ಪ್ರಕ್ರಿಯೆಗೆ ಒಪ್ಪಿಗೆ ನೀಡಿರಲಿಲ್ಲ. ಹಾಗಾಗಿ ವಿಲೀನ ಪ್ರಕ್ರಿಯೆ ಪೂರ್ಣ ಆಗಿರಲಿಲ್ಲ. ವಿಲೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ಸ್ವತಃ  ಸ್ಪೀಕರ್‌ ಹೇಳಿದ್ದರು. ಕೇವಲ  ಒಬ್ಬ ಶಾಸಕ ವಿಲೀನಗೊಳ್ಳಲಾಗದು. ಇಡೀ ಪಕ್ಷ‌ ವಿಲೀನಗೊಳ್ಳಬೇಕು ಎಂದು ತಿಳಿಸಿದ್ದರಿಂದ‌ ಕೆಪಿಜಿಪಿ ವಿಲೀನ ಪ್ರಕ್ರಿಯೆ‌ ಅಪೂರ್ಣವಾಗಿದೆ. ಆದರೂ ಅವರು ಕಾಂಗ್ರೆಸ್ ಶಾಸಕ ಎಂದು ಅನರ್ಹಗೊಳಿಸಲಾಗಿದೆ. ಸ್ಪೀಕರ್ ರಮೇಶಕುಮಾರ ಅವರು  ವಿಲೀನಗೊಳ್ಳಲು ಪಕ್ಷ ಒಪ್ಪಿರುವ ದಾಖಲೆ ನೀಡಿ ಎಂದು ಕೇಳಿದ್ದರು. ಶಂಕರ್ ಅದನ್ನು ಕೊಟ್ಟಿರಲಿಲ್ಲ. ಆದ್ದರಿಂದ ಕಾಂಗ್ರೆಸ್ ಪಕ್ಷದ ವಿಪ್ ಅವರಿಗೆ ಅನ್ವಯ ಆಗುವುದಿಲ್ಲ.  ಅವರು ಸ್ವತಂತ್ರವಾಗಿಯೇ ಮುಂದುವರಿದಿದ್ದಾರೆ ಎಂದು ಗಿರಿ ತಿಳಸಿದರು.‌ ಆಗ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಪರ ವಕೀಲ ದೇವದತ್ ಕಾಮತ್ ಗುರುವಾತ ಈ ಬಗ್ಗೆ ಲಿಖಿತ ವಾದ  ಸಲ್ಲಿಸುತ್ತೇವೆ ಎಂದು ಹೇಳಿದರು.

ಶ್ರೀಮಂತ ಪಾಟೀಲ ಅವರು ಅನಾರೋಗ್ಯದ ಕಾರಣ ಕುಟುಂಬದ ವೈದ್ಯರ ಸಲಹೆಯ ಮೇರೆಗೆ ಮುಂಬೈಗೆ ತೆರಳಿ‌ ಚಿಕಿತ್ಸೆ ಪಡೆದಿದ್ದು, ಕಲಾಪಕ್ಕೆ‌ ಹಾಜರಾಗಲು‌  ಆಗದು ಎಂದು ತಿಳಿಸಿ ಸ್ಪೀಕರ್ ಗೆ ಪತ್ರ ಬರೆದಿದ್ದರು. ಆದರೂ ಅವರ‌ ಆರೋಗ್ಯ ‌ಸ್ಥಿತಿಯ ಬಗ್ಗೆ ನಂಬಿಕೆ ಇಲ್ಲದಂತೆ ವರ್ತಿಸಿ ಅನರ್ಹಗೊಳಿಸಲಾಗಿದೆ ಎಂದು ತಿಳಿಸಿದರು. ಆಗ ಸ್ಪೀಕರ್ ಪರ ವಕೀಲರನ್ನು ಕರೆಸಿ ವಿಲೀನ ಪ್ರಕ್ರಿಯೆ‌ ಕುರಿತು ಕೇಳಲಾಯಿತು. ವಿಲೀನ ಕುರಿತ ಆದೇಶ ಆಗಿಲ್ಲ ಎಂದು ಸ್ಪೀಕರ್‌ ಪರ‌ ಕಿರಿಯ‌ ವಕೀಲರು ಮಾಹಿತಿ ನೀಡಿದರು. ಸ್ಪೀಕರ್‌ ರಮೇಶಕುಮಾರ್ ಕೈಗೊಂಡ ನಿರ್ಧಾರವನ್ನು ಈಗಿನ ಸ್ಪೀಕರ್‌ ಕಾಗೇರಿ ಪರ ಹಾಜರಾದ ವಕೀಲರು ಸಮರ್ಥಿಸಿಲ್ಲ.‌ ಶಾಸಕ ತನ್ನ ವಿವೇಚನೆಗೆ ಒಳಪಟ್ಟು ರಾಜೀನಾಮೆ ಸಲ್ಲಿಸಲು ಸ್ವತಂತ್ರ ಎಂದು ಹೇಳಿರುವುದು ಗಮನಾರ್ಹ ಎಂದು ಗಿರಿ ವಾದ ಮುಗಿಸಿದರು.

ಜೆಡಿಎಸ್ ಅನರ್ಹ ಶಾಸಕರಾದ ಎಚ್. ವಿಶ್ವನಾಥ್, ನಾರಾಯಣಗೌಡ, ಗೋಪಾಲಯ್ಯ ಪರ‌ ವಕೀಲ‌ ವಿಶ್ವನಾಥನ್‌ ವಾದ ಮಾಡಿ ನಾವು ಸಂದರ್ಭಾನುಸಾರ ರಾಜೀನಾಮೆ‌‌ ಸಲ್ಲಿಸಿದ್ದು, ಸ್ಪೀಕರ್‌ ಹೊರಡಿಸಿರುವ ಅನರ್ಹತೆಯ ಆದೇಶಕ್ಕೆ‌ ತಡೆ‌ ನೀಡಬೇಕು ಎಂದು ಕೋರಿ‌ದರು. ಆನಂದ್ ಸಿಂಗ್ ಪರ ಸಜ್ಜನ್ ಪೂವಯ್ಯ ವಾದ ಮಾಡಿ ಪಕ್ಷ‌ ತ್ಯಜಿಸಲು ಹೊರಟವರಿಗೂ ಆನಂದ್ ಸಿಂಗ್ ಗೂ ಸಂಬಂಧ ಇಲ್ಲ.  ಜಿಂದಾಲ್‌ಗೆ ಭೂಮಿ‌ ಕೊಟ್ಟಿದ್ದ ಸರ್ಕಾರದ‌ ವಿರುದ್ಧ ಪ್ರತಿಭಟನಾರ್ಥ ರಾಜೀನಾಮೆ‌ ನೀಡಿದ್ದರೂ  ನನ್ನನ್ನು ಅನರ್ಹಗೊಳಿಸಲಾಗಿದೆ ಎಂದು ಹೇಳಿದ‌‌ರು. ಇಂದು ಕೆಪಿಸಿಸಿ ಪರ ಕಪಿಲ್ ಸಿಬಲ್ ಪ್ರತಿವಾದ ಮಂಡಿಸಿದ ಬಳಿಕ ಸುಪ್ರೀಂ ಕೋರ್ಟಿನ ತ್ರಿ ಸದಸ್ಯ ಪೀಠವು ತೀರ್ಪು ಪ್ರಕಟಿಸುತ್ತದೋ ಅಥವಾ ನಾಳೆಗೆ ಕಾಯ್ದಿರಿಸುತ್ತೋ ಎಂಬುದನ್ನು ಕಾದುನೋಡಬೇಕು.
 

Trending News