ಸುನಂದಾ ಪುಷ್ಕರ್ ಪ್ರಕರಣ: ಶಶಿ ತರೂರ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪ

ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಹಾಗೂ ಕಾಂಗ್ರೆಸ್ ಸಂಸದ ಶಶಿ ತರೂರ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

Last Updated : May 14, 2018, 05:27 PM IST
ಸುನಂದಾ ಪುಷ್ಕರ್ ಪ್ರಕರಣ: ಶಶಿ ತರೂರ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪ title=

ನವದೆಹಲಿ : ಕಳೆದ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಸುನಂದಾ ಪುಷ್ಕರ್ ಸಾವಿನ ಪ್ರಕರಣವನ್ನು ಆತ್ಮಹತ್ಯೆ ಎಂದು ಪರಿಗಣಿಸಿರುವ ಪೊಲೀಸರು, ಪತಿ ಹಾಗೂ ಕಾಂಗ್ರೆಸ್ ಸಂಸದ ಶಶಿ ತರೂರ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಶಶಿ ತರೂರ್ ವಿರುದ್ಧ ಭಾರತೀಯ ದಂಡ ಸಂಹಿತೆ 498ಎ ಹಾಗೂ 306ರ ಅಡಿಯಲ್ಲಿ ಜಾರ್ಜ್ ಶೀಟ್ ತಯಾರಿಸಿರುವ ಪೊಲೀಸರು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಧರ್ಮೇಂದ್ರ ಸಿಂಗ್ ಅವರಿಗೆ ಆರೋಪಪಟ್ಟಿ ಸಲ್ಲಿಸಿದ್ದು, ತಮ್ಮ ಮೇಲೆ ನಡೆದಿದ್ದ ದೀರ್ಘ ಕಾಲದ ದೌರ್ಜನ್ಯದಿಂದ ಬೇಸತ್ತಿದ್ದ ಸುನಂದಾ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ವಿವರಿಸಿದ್ದಾರೆ. 

2010ರಲ್ಲಿ ಶಶಿ ತರೂರ್ ಅವರನ್ನು ವಿವಾಹವಾಗಿದ್ದ ಸುನಂದಾ ಪುಷ್ಕರ್, 2014ರ ಜನವರಿ 17ರಂದು ದೆಹಲಿಯ ಹೋಟೆಲೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ತಾವು ಸಾಯುವ ಕೆಲ ದಿನಗಳ ಹಿಂದಷ್ಟೇ ತಮ್ಮ ಪತಿಯ ವಿರುದ್ಧ ಅಸಹನೆ ವ್ಯಕ್ತಪಡಿಸಿದ್ದ ಸುನಂದಾ, ಪಾಕಿಸ್ತಾನಿ ಪತ್ರಕರ್ತೆಯೊಂದಿಗೆ ಶಶಿ ತರೂರ್ ಅಫೇರ್ ಇಟ್ಟುಕೊಂಡಿದ್ದಾರೆ ಎಂದು ಸಾರ್ವಜನಿಕವಾಗಿ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ ಪೊಲೀಸರು ತನಿಖೆ ಆರಂಭಿಸಿದ್ದರು.

ಇದೀಗ ಪೊಲೀಸರು ತಮ್ಮ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ನಂತರ ಶಶಿ ತರೂರ್ ಅವರು ಟ್ವೀಟ್ ಮಾಡಿದ್ದು, "ಸುನಂದಾ ಬಗ್ಗೆ ತಿಳಿದಿರುವವರು ಯಾರೂ ಸಹ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದರೆ ನಂಬುವುದಿಲ್ಲ. ಹಾಗಿದ್ದ ಮೇಲೆ ನಾನು ಪ್ರಚೋದನೆ ನೀಡಿದ್ದೇನೆ ಎಂಬುದರಲ್ಲಿ ಸತ್ಯವಿಲ್ಲ. ಯಾವ ಆಧಾರದ ಮೇಲೆ ದೆಹಲಿ ಪೊಲೀಸರು ಈ ಆರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ತಿಳಿದಿಲ್ಲ. ಈ ಹಿಂದೆ ಸಾವಿನ ಸಂಬಂಧ ಯಾವ ಸುಳಿವೂ ಸಿಕ್ಕಿಲ್ಲ ಎಂದು ಹೇಳಿದ್ದ ಪೊಲೀಸರು, ಇದೀಗ ಕೇವಲ 6 ತಿಂಗಳಲ್ಲಿ ನಾನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದೇನೆ ಎಂದು ಆರೋಪಿಸಿದ್ದಾರೆ. ಇದು ನಂಬಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. 

Trending News