ನವದೆಹಲಿ: ವಿದೇಶದಲ್ಲಿ ಆಸ್ತಿ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಎದುರು ಬುಧವಾರದೊಳಗಾಗಿ ಹಾಜರಾಗುವಂತೆ ಪ್ರಿಯಾಂಕ ಗಾಂಧಿ ಪತಿ ರಾಬರ್ಟ್ ವಾದ್ರಾಗೆ ವಿಶೇಷ ಕೋರ್ಟ್ ಸೂಚನೆ ನೀಡಿದೆ.
ಲಂಡನ್ ಮೂಲದ ಸಂಸ್ಥೆಗೆ 17.77 ಕೋಟಿ ಅಕ್ರಮ ವರ್ಗಾವಣೆ ಮಾಡಿದ್ದಾರೆ ಎಂದು ರಾಬರ್ಟ್ ವಾದ್ರಾ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ. ರಾಬರ್ಟ್ ವಾದ್ರಾ ಲಂಡನ್‌ನಲ್ಲಿ ಮಿಲಿಯನ್ ಪೌಂಡ್ ಮೌಲ್ಯದ ಎಂಟು ಆಸ್ತಿಗಳ ಒಡೆತನ ಹೊಂದಿದ್ದಾರೆ ಎಂದು ಇಡಿ ಹೇಳಿದೆ.
ಕಳೆದ ಡಿಸೆಂಬರ್ 7 ರಂದು ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಅವರ ಮೇಲೆ ಐಟಿ ಮತ್ತು ಇಡಿ ದಾಳಿ ನಡೆದಿತ್ತು. ತನಿಖೆ ನಂತರ ಇಡಿಯು ವಾದ್ರಾ ವಿರುದ್ಧ ಅಕ್ರಮ ಹಣ ವರ್ಗಾವಣೆ ಕೇಸು ದಾಖಲಿಸಿತ್ತು. ಇದು ವಾದ್ರಾ ಅವರಿಗೆ ಬಂಧನ ಭೀತಿ ತಂದಿತ್ತು. ಹಾಗಾಗಿ ವಾದ್ರಾ ನಿರೀಕ್ಷಣಾ ಜಾಮೀನಿಗೆ ಮನವಿ ಮಾಡಿದ್ದರು.
ವಾದ್ರಾ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯವು ಶನಿವಾರ ವಾದ್ರಾ ಅವರಿಗೆ ಫೆಬ್ರವರಿ 16 ರವರೆಗೆ ನಿರೀಕ್ಷಣಾ ಜಾಮೀನು ನೀಡಿದೆ. ಈ ನಡುವೆ ವಾದ್ರಾ ಅವರು ಅಗತ್ಯ ದಾಖಲೆಗಳನ್ನು ಇಡಿಗೆ ಸಲ್ಲಿಸಬಹುದಾಗಿದೆ.