ನದಿಗೆ ಬಿದ್ದ ಬಸ್; 6 ಸಾವು, 19 ಮಂದಿಗೆ ಗಾಯ

ಇಂದೋರ್‌ನಿಂದ ಚತರ್‌ಪುರಕ್ಕೆ ಬಸ್ ಪ್ರಯಾಣಿಸುತ್ತಿದ್ದಾಗ ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. 

Last Updated : Oct 3, 2019, 12:11 PM IST
ನದಿಗೆ ಬಿದ್ದ ಬಸ್; 6 ಸಾವು, 19 ಮಂದಿಗೆ ಗಾಯ title=

ರೈಸನ್ : ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ಬಸ್ಸೊಂದು ನದಿಗೆ ಬಿದ್ದ ಪರಿಣಾಮ ಎರಡು ವರ್ಷದ ಮಗು ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 19 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದೋರ್‌ನಿಂದ ಚತರ್‌ಪುರಕ್ಕೆ ಬಸ್ ಪ್ರಯಾಣಿಸುತ್ತಿದ್ದಾಗ ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಬಸ್‌ನಲ್ಲಿ 45 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

"ಕಾಲುವೆಯ ಹರಿವು ತುಂಬಾ ವೇಗವಾಗಿದ್ದರಿಂದ ಬಸ್ ಮೂರನೇ ಎರಡರಷ್ಟು ಭಾಗ ನೀರಿನಲ್ಲಿ ಮುಳುಗಿತ್ತು. ಆದಾಗ್ಯೂ, ನಾವು ಮೃತ ದೇಹಗಳನ್ನು ಪತ್ತೆ ಮಾಡಿದ್ದೇವೆ. ಗಂಭೀರವಾಗಿ ಗಾಯಗೊಂಡವರನ್ನು ಭೋಪಾಲ್ ಆಸ್ಪತ್ರೆಗೆ ದಾಖಲಿಸಿದ್ದು, ಇತರ ಗಾಯಾಳುಗಳಲ್ಲಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಜಿಲ್ಲಾಧಿಕಾರಿ ಉಮಾಶಂಕರ್ ಭಾರ್ಗವ್ ತಿಳಿಸಿದ್ದಾರೆ.

ಗಾಯಾಳುಗಳಿಗೆ ರೆಡ್ ಕ್ರಾಸ್ ವತಿಯಿಂದ ತಲಾ 10,000 ರೂ. ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅಪಘಾತಕ್ಕೆ ಕಾರಣ ಅರಿಯಲು ತನಿಖೆ ನಡೆಯುತ್ತಿದೆ.

Trending News