ಲಕ್ನೋ: ಲೋಕಸಭೆ ಚುನಾವಣೆ ಸಮೀಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ರಾಮ ನಾಮ ಶುರುವಾಗಿದೆ. ಆಡಳಿತ ಪಕ್ಷ ಬಿಜೆಪಿಯಾಗಲೀ, ಪ್ರತಿಪಕ್ಷ ಕಾಂಗ್ರೆಸ್ ಆಗಲೀ ರಾಮಮಂದಿರ ವಿಚಾರವನ್ನು ಸಾರ್ವಜನಿಕ ಸಭೆಗಳಲ್ಲಿ ಕೆದಕದಿದ್ದರೆ, ಅವರ ಭಾಷಣ ಅಲ್ಲಿ ಅಪೂರ್ಣ. ಇಂಥ ಪರಿಸ್ಥಿತಿಯಲ್ಲಿ ಬಿಜೆಪಿ ನಡೆಯನ್ನು ವಿರೋಧಿಸಿರುವ ಶಿವ ಸೇನೆ ನಾಯಕ ಸಂಜಯ್ ರಾವತ್ 'ಶಿವಸೇನೆ ಎಂದಿಗೂ ರಾಮಮಂದಿರ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡಿಲ್ಲ ಎಂದಿದ್ದಾರೆ.
ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿರುವ ಅವರು, "ರಾಮ ಮಂದಿರ ಠಾಕ್ರೆ ಸಾಹೇಬರ ಕನಸು. ಆದರೆ ಇದು ಎಂದಿಗೂ ಶಿವಸೇನೆಯ ಚುನಾವಣಾ ವಿಷಯವಾಗುವುದಿಲ್ಲ. ಲೋಕಸಭಾ ಚುನಾವಣೆ ಇರಬಹುದು ಅಥವಾ ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಇರಬಹುದು, ಕಳೆದ 25 ವರ್ಷಗಳಲ್ಲಿ ಶಿವಸೇನಾ ಎಂದಿಗೂ ರಾಮಮಂದಿರ ವಿಚಾರವನ್ನು ಮತಗಳಿಗಾಗಿ ಬಳಸಿಕೊಂಡಿಲ್ಲ. ಆದರೆ ಬಿಜೆಪಿ ಈ ವಿಚಾರವನ್ನು ಚುನಾವಣಾ ಸಂದರ್ಭದಲ್ಲಿ ಬಳಸಿಕೊಂಡು ಮತದಾರರಿಗೆ ಮೋಸ ಮಾಡಿದೆ ಎಂದು ಆರೋಪಿಸಿದರು.
ಮುಂದುವರೆದು ಮಾತನಾಡಿದ ರಾವತ್, ಇದುವರೆಗೂ ಲೋಕಸಭೆಯಲ್ಲಾಗಲೀ, ಉತ್ತರಪ್ರದೇಶ ವಿಧಾನಸಭೆಯಲ್ಲಾಗಲೀ ಬಿಜೆಪಿ ಬಹುಮತ ಪಡೆದಿಲ್ಲ. ಆದಾಗ್ಯೂ ಎರಡೂ ಕಡೆ ಬಿಜೆಪಿ ಅಧಿಕಾರದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ 2019ರೊಳಗೆ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಶಿವಸೇನಾ ಮುಖ್ಯಸ್ಥ ಉದ್ಭವ್ ಠಾಕ್ರೆಯವರ ಅಯೋಧ್ಯೆ ಪ್ರವಾಸದ ಬಗ್ಗೆ ವಿವರಣೆ ನೀಡಿದ ಸಂಜಯ್ ರಾವತ್, ನವೆಂಬರ್ 24ರಂದು ಉದ್ಭವ್ ಠಾಕ್ರೆ ಅವರು ಅಯೋಧ್ಯೆಗೆ ತೆರಳಲಿದ್ದಾರೆ ಎಂದು ತಿಳಿಸಿದರು.