ನವದೆಹಲಿ: ಬಹುಕೋಟಿ ಆಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಕ್ಯಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರು ಪ್ರಸ್ತಾಪಿಸಿರುವುದಾಗಿ ಜಾರಿ ನಿರ್ದೇಶನಾಲಯ ಬಹಿರಂಗಗೊಳಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಅನುರಾಗ್ ಠಾಕೂರ್, ಒಂದು ವೇಳೆ ಮೈಕೇಲ್ ಅವರ ಬಗ್ಗೆ ಹೇಳದಿದ್ದರೂ, 'ಶ್ರೀಮತಿ ಗಾಂಧಿ' ಯಾರೆಂದು ಪ್ರತಿಯೊಬ್ಬರಿಗೂ ತಿಳಿದಿದೆ ಎಂದು ಹೇಳಿದ್ದಾರೆ.
ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ವಿರುದ್ಧ ಭಾನುವಾರ ತೀವ್ರ ವಾಗ್ದಾಳಿ ನಡೆಸಿದ ಅನುರಾಗ್ ಠಾಕೂರ್, ಸೋನಿಯಾ ಗಾಂಧಿ ಹಲವು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದರೂ ಸಹ, ಅವರು 'ಇಟಾಲಿಯನ್ ಲೇಡಿ' ಎಂದು ಇಡೀ ವಿಶ್ವಕ್ಕೇ ತಿಳಿದಿದೆ ಎಂದಿದ್ದಾರೆ.
"ಕ್ರಿಶ್ಚಿಯನ್ ಮೈಕೆಲ್ ಸೋನಿಯಾ ಗಾಂಧಿ ಬಗ್ಗೆ ಹೇಳಿದ್ದಾರೆಯೇ ಅಥವಾ ಇಲ್ಲವೇ ಎಂಬುದಕ್ಕಿಂತ, 'ಇಟಾಲಿಯನ್ ಲೇಡಿ' ಯಾರು? 'ಇಟಾಲಿಯನ್ ಲೇಡಿ ಮಗ' ಯಾರು? ಮತ್ತು ''ಶ್ರೀಮತಿ ಗಾಂಧಿ' ಯಾರು ಎಂಬುದು ಅವರಿಗೆ ತಿಳಿದಿದೆ. ವಿಪರ್ಯಾಸ ಅಂದರೆ, ಭಾರತದ ಜನತೆ ಅವರನ್ನು ಹಲವು ಬಾರಿ ಲೋಕಸಭೆಗೆ ಆಯ್ಕೆ ಮಾಡಿದ್ದರೂ ಸಹ ಇಂದಿಗೂ ಅವರು ವಿಶ್ವದ 'ಇಟಾಲಿಯನ್ ಲೇಡಿ' " ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಹೇಳಿದ್ದಾರೆ.
ಕಳೆದ ವಾರ, ಜಾರಿ ನಿರ್ದೇಶನಾಲಯದ ವಶದಲ್ಲಿರುವ ವಿವಿಐಪಿ ಕಾಪ್ಟರ್ ಹಗರಣದ ಮಧ್ಯವರ್ತಿ ಮೈಕೆಲ್, ಆಗಸ್ಟಾ ವೆಸ್ಟ್ ಲ್ಯಾಂಡ್ ಕ್ಯಾಪ್ಟರ್ ಖರೀದಿ ಒಪ್ಪಂದದಿಂದ ಎಚ್ಎಎಲ್ ಅನ್ನು ಕೈಬಿಟ್ಟಿದ್ದು ಹೇಗೆ ಮತ್ತು ಟಾಟಾಗೆ ಆಹ್ವಾನ ನೀಡಿದ ವಿಚಾರವನ್ನು ಬಾಯಿಬಿಟ್ಟಿರುವುದಾಗಿ ಇಡಿ ಅಧಿಕಾರಿಗಳು ಕೋರ್ಟ್ ಗೆ ತಿಳಿಸಿದ್ದರು. ವಿಚಾರಣೆ ವೇಳೆ ಕ್ರಿಶ್ಚಿಯನ್ ಮೈಕೆಲ್, ದೊಡ್ಡ ವ್ಯಕ್ತಿ ಹಾಗೂ ಆರ್ ಹೆಸರಿನ(ರಾಹುಲ್ ಗಾಂಧಿ) ವ್ಯಕ್ತಿ ಎಂದು ಹೇಳಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕಾಗಿದೆ ಎಂದೂ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರು ಪ್ರಸ್ತಾಪಿಸಿರುವುದಾಗಿ ಜಾರಿ ನಿರ್ದೇಶನಾಲಯ ದೆಹಲಿ ಪಟಿಯಾಲ ಹೌಸ್ ಕೋರ್ಟ್ ಗೆ ತಿಳಿಸಿತ್ತು.
12 ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್ಪಿ ತ್ಯಾಗಿ ಸೇರಿದಂತೆ 9 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು, ಈ ಒಪ್ಪಂದದಿಂದ ಸರ್ಕಾರದ ಖಜಾನೆಗೆ 3,600 ಕೋಟಿ ರೂ ನಷ್ಟವಾಗಿದೆ ಎಂದು ಆರೋಪಿಸಿದೆ.