ನವದೆಹಲಿ: ಹಿರಿಯ ವಕೀಲರಾದ ಇಂದು ಮಲ್ಹೋತ್ರಾ ಅವರು ಸುಪ್ರೀಂಕೋರ್ಟ್'ನ ನ್ಯಾಯಮೂರ್ತಿಯಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ನೇರವಾಗಿ ನೇಮಕವಾಗಲಿರುವ ಮೊದಲ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿರುವ ಇಂದು ಮಲ್ಹೋತ್ರಾ ಅವರು, ಈ ಮೊದಲು ಉತ್ತರಾಖಂಡ್ ಹೈಕೋರ್ಟ್'ನ ಹಿರಿಯ ವಕೀಲರಾಗಿ ಕಾರ್ಯನಿರ್ವಹಿಸಿದ್ದರು.
ಜನವರಿ 22ರಂದು ಪ್ರಸ್ತುತ ಉತ್ತರಾಖಂಡ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿರುವ ಕೆ.ಎಂ. ಜೋಸೆಫ್ ಮತ್ತು ಹಿರಿಯ ವಕೀಲರಾದ ಇಂದು ಮಲ್ಹೋತ್ರಾ ಅವರ ಹೆಸರನ್ನು ಸುಪ್ರೀಂಕೋರ್ಟ್ ಕೊಲಿಜಿಯಂ ಪದನ್ನೋತಿಗಾಗಿ ಕಾನೂನು ಸಚಿವಾಲಯಕ್ಕೆ ಈ ಹಿಂದೆ ಶಿಫಾರಸು ಮಾಡಿತ್ತು. ಆದರೆ, ಮಲ್ಹೋತ್ರಾ ಅವರ ಹೆಸರನ್ನು ಮಾತ್ರ ಕೇಂದ್ರ ಸರ್ಕಾರ ಅನುಮೋದಿಸಿತ್ತು.
ಇದೀಗ ಇಂದು ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು,
ಸ್ವಾತಂತ್ರ್ಯಾನಂತರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೇರಿದ ಏಳನೇ ಮಹಿಳೆ ಎನಿಸಿಕೊಳ್ಳಲಿದ್ದಾರೆ. ಉಳಿದವರೆಲ್ಲವರೂ ಹೈಕೋರ್ಟ್ಗಳಿಂದ ಬಡ್ತಿಯಾಗಿ ಬಂದವರು. ಈಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಕೆಲಸ ಮಾಡುತ್ತಿರುವ ಏಕೈಕ ಮಹಿಳೆ ಆರ್. ಭಾನುಮತಿ. ಇವರೊಂದಿಗೆ ಇಂದು ಮಲ್ಹೊತ್ರಾ ಅವರೂ ಇಂದು ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.