ನವದೆಹಲಿ : ಅಯೋಧ್ಯಾ ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಅರ್ಜಿಗಳ ಅಂತಿಮ ವಿಚಾರಣೆಯನ್ನು ಗುರುವಾರ ಸುಪ್ರೀಂಕೋರ್ಟ್ ಮುಂದುವರಿಸಲಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ನ್ಯಾಯಮೂರ್ತಿ ಅಬ್ದುಲ್ ನಝೀರ್ ಅವರು ಅಯೋಧ್ಯೆಯಲ್ಲಿ ವಿವಾದಿತ ಪ್ರದೇಶದ ಸುಮಾರು 13 ಅರ್ಜಿಗಳ ವಿಚಾರಣೆಯನ್ನು ಗುರುವಾರ ಮಧ್ಯಾಹ್ನ 2 ಗಂಟೆಗೆ ನಡೆಸಲಿದ್ದಾರೆ.
ಈ ಪ್ರಕರಣದ ಕೊನೆಯ ವಿಚಾರಣೆಯನ್ನು ಡಿಸೆಂಬರ್ 5, 2017 ರಂದು ನಡೆಸಲಾಗಿತ್ತು. ಕಪಿಲ್ ಸಿಬಲ್ ಸೇರಿದಂತೆ ಹಿರಿಯ ವಕೀಲರು ವಿಚಾರಣೆಯನ್ನು ಮುಂದೂಡಬೇಕೆಂದು ಮನವಿ ಮಾಡಿದ್ದರು. 2019 ರ ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ವಿಚಾರಣೆ ನಡೆಯಬೇಕೆಂದೂ, ಜುಲೈ 2019 ಕ್ಕೆ ವಿಚಾರಣೆಯನ್ನು ಮುಂದೂಡಬೇಕೆಂದು ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ನ ಪರವಾಗಿ ಸಿಬಲ್ ವಾದ ಮಂಡಿಸಿದ್ದರು. ಅಲ್ಲದೆ, ಈ ಪ್ರಕರಣವನ್ನು ಐದು ನ್ಯಾಯಾಧೀಶರ ಸಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕೆಂದೂ ವಕೀಲರು ಒತ್ತಾಯಿಸಿದ್ದರು.
ಆದರೆ, ಸಿಬಲ್ ಅವರ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಫೆಬ್ರವರಿ 8 ಕ್ಕೆ ನಿಗದಿಪಡಿಸಿತ್ತು.