INX ಮೀಡಿಯಾ ಹಗರಣ: ಪಿ.ಚಿದಂಬರಂಗೆ ಜಾಮೀನು, ಆದರೆ ಸಿಗಲಿಲ್ಲ ಬಿಡುಗಡೆ ಭಾಗ್ಯ!

ನ್ಯಾಯಮೂರ್ತಿ ಆರ್.ಬಾನುಮತಿ, ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಮತ್ತು ನ್ಯಾಯಮೂರ್ತಿ ಹೃಷಿಕೇಶ ರಾಯ್ ಅವರಿದ್ದ ತ್ರಿಸದಸ್ಯ ಪೀಠ ಜಾಮೀನು ನೀಡಿ ಆದೇಶ ಹೊರಡಿಸಿದ್ದು, 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್‌ ಮತ್ತು ಪ್ರತಿ ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಷರತ್ತು ವಿಧಿಸಿದೆ. 

Last Updated : Oct 22, 2019, 01:09 PM IST
INX ಮೀಡಿಯಾ ಹಗರಣ: ಪಿ.ಚಿದಂಬರಂಗೆ ಜಾಮೀನು, ಆದರೆ ಸಿಗಲಿಲ್ಲ ಬಿಡುಗಡೆ ಭಾಗ್ಯ! title=

ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ. 

ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವ ದೆಹಲಿ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಚಿದಂಬರಂ ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಆರ್.ಬಾನುಮತಿ, ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಮತ್ತು ನ್ಯಾಯಮೂರ್ತಿ ಹೃಷಿಕೇಶ ರಾಯ್ ಅವರಿದ್ದ ತ್ರಿಸದಸ್ಯ ಪೀಠ ಜಾಮೀನು ನೀಡಿ ಆದೇಶ ಹೊರಡಿಸಿದ್ದು, 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್‌ ಮತ್ತು ಪ್ರತಿ ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಷರತ್ತು ವಿಧಿಸಿದೆ. 

ಪ್ರಕರಣದ ವಿಚಾರಣೆಯ ವೇಳೆ, ಸಿಬಿಐ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರಕರಣದ ವಿಚಾರಣೆ ಪ್ರಾರಂಭವಾಗುವವರೆಗೆ ಮತ್ತು ಪ್ರಮುಖ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸದವರೆಗೆ ಚಿದಂಬರಂಗೆ ಪ್ರಕರಣದಲ್ಲಿ ಜಾಮೀನು ನೀಡಬಾರದು ವಾದಿಸಿದರು.

ಅದೇ ವೇಳೆ, ಚಿದಂಬರಂ ಪರ ವಕೀಲ ಕಪಿಲ್ ಸಿಬಲ್ ಅವರು, ಚಿದಂಬರಂ ಯಾವುದೇ ಸ್ಥಾನದಲ್ಲಿಲ್ಲ ಎಂದು ಹೈಕೋರ್ಟ್ ಒಪ್ಪಿಕೊಂಡಿತ್ತು, ಆದ್ದರಿಂದ ಅವರು ಸಾಕ್ಷ್ಯಗಳನ್ನು ಹಾಳುಮಾಡಲು ಸಾಧ್ಯವಿಲ್ಲ ಅಥವಾ ಅವರು ದೇಶವನ್ನು ತೊರೆಯಲು ಸಾಧ್ಯವಿಲ್ಲ ಎಂದರು.

ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ತನಿಖೆ ನಡೆಸಿದ ಸಿಬಿಐ ಕಳೆದ ಮೂರು ದಿನಗಳ ಹಿಂದಷ್ಟೇ ಚಿದಂಬರಂ ಮತ್ತು 13 ಮಂದಿ ವಿರುದ್ಧ ಪ್ರಕರಣ ದಾಖಲಿಸಿತ್ತು. ಚಿದಂಬರಂ ವಿರುದ್ಧ ಮೊದಲು ದಾಖಲಿಸಲಾಗಿದ್ದ ಎಫ್‍ಐಆರ್‍ನಲ್ಲಿ 3.1 ಕೋಟಿ ಲಂಚ ಸ್ವೀಕರಿಸಲಾಗಿದೆ ಎಂಬ ಆರೋಪ ಮಾಡಲಾಗಿತ್ತು. ಚಾರ್ಜ್‍ಶೀಟ್‍ನಲ್ಲಿ ಲಂಚದ ಮೊತ್ತವನ್ನು 9.96 ಲಕ್ಷ ಎಂದು ಉಲ್ಲೇಖಿಸಲಾಗಿದೆ.

2007 ರಲ್ಲಿ ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ ಐಎನ್‌ಎಕ್ಸ್ ಮೀಡಿಯಾಕ್ಕೆ 305 ಕೋಟಿ ರೂ.ಗೆ ನೀಡಿದ್ದ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ (ಎಫ್‌ಐಪಿಬಿ) ಕ್ಲಿಯರೆನ್ಸ್‌ನಲ್ಲಿನ ಅಕ್ರಮಗಳ ಆರೋಪದಲ್ಲಿ ಸಿಬಿಐ ದಾಖಲಿಸಿದ ಎಫ್‌ಐಆರ್‌ಗೆ ಈ ಪ್ರಕರಣ ಸಂಬಂಧಿಸಿದ್ದು, ಹಣ ವರ್ಗಾವಣೆ ಆರೋಪದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಆಗಸ್ಟ್ 21 ರಂದು ಚಿದಂಬರಂ ಅವರನ್ನು ಬಂಧಿಸಿತ್ತು.

Trending News