ನವದೆಹಲಿ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದ ಎಲ್ಲ ನಾಲ್ಕು ಅಪರಾಧಿಗಳಿಗೆ ಎರಡು ವಾರದೊಳಗೆ ಗಲ್ಲು ಶಿಕ್ಷೆ ಜಾರಿಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರಿಂ ಕೋರ್ಟ್ ಗುರುವಾರ ವಜಾ ಮಾಡಿದೆ.
ನಿರ್ಭಯಾ ಹತ್ಯೆ ಅಪರಾಧಿಗಳಾದ ಮುಕೇಶ್, ಪವನ್ ಗುಪ್ತಾ, ವಿನಯ್ ಶರ್ಮಾ ಮತ್ತು ಅಕ್ಷಯ್ ಎಂಬುವರಿಗೆ ನ್ಯಾಯಾಲಯ ಈಗಾಗಲೇ ಗಲ್ಲು ಶಿಕ್ಷೆ ವಿಧಿಸಿದೆ. ಆದರೆ, ಈ ಅಪರಾಧಿಗಳಿಗೆ ಶೀಘ್ರದಲ್ಲಿಯೇ ಗಲ್ಲುಶಿಕ್ಷೆ ಜಾರಿಗೊಳಿಸಬೇಕು, ಎರಡು ವಾರದೊಳಗೆ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ವಕೀಲ ಎ.ಎ.ಶ್ರೀವಾಸ್ತವ ಸುಪ್ರೀಂ ಕೋರ್ಟಲ್ಲಿ ಅರ್ಜಿ ಸಲ್ಲಿಸಿದ್ದರು. ಅಪರಾಧಿಗಳಿಗೆ ಶಿಕ್ಷೆ ತಡವಾದಷ್ಟೂ ನ್ಯಾಯಾಂಗದ ಮೇಲಿನ ಭರವಸೆ ಕಡಿಮೆಯಾಗುತ್ತದೆ ಮತ್ತು ಇಂಥ ಪ್ರಕರಣಗಳು ಹೆಚ್ಚಾಗುತ್ತವೆ ಎಂಬ ಕಳವಳವನ್ನೂ ಶ್ರೀವಾಸ್ತವ ತಮ್ಮ ಅರ್ಜಿಯಲ್ಲಿ ವ್ಯಕ್ತಪಡಿಸಿದ್ದರು.
ಆದರೆ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮದನ್ ಬಿ ಲೋಕುರ್ ಹಾಗೂ ದೀಪಕ್ ಗುಪ್ತ ಅವರಿದ್ದ ಪೀಠ, ಯಾವ ರೀತಿಯ ಮನವಿಯನ್ನು ನೀವು ಮಾಡುತ್ತಿದ್ದೀರಿ? ನ್ಯಾಯಾಲಯವನ್ನು ನೀವು ತಮಾಷೆ ಮಾಡುತ್ತಿದ್ದೀರಿ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.
2017 ರ ಮೇ 5 ರಂದು ನಿರ್ಭಯಾ ಪ್ರಕರಣದ ನಾಲ್ವರು ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಈ ಪ್ರಕರಣದ ಇನ್ನಿಬ್ಬರು ಆರೋಪಿಗಳಲ್ಲಿ ಒಬ್ಬ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡರೆ, ಇನ್ನೋರ್ವ ಬಾಲಾಪರಾಧಿ ಎಂಬ ಕಾರಣಕ್ಕೆ ಆತನಿಗೆ ಮೂರು ವರ್ಷಗಳ ಕಾಲವಷ್ಟೇ ಜೈಲುಶಿಕ್ಷೆ ನೀಡಿ ಬಿಡುಗಡೆ ಮಾಡಲಾಗಿದೆ.