ನೀವೂ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದೀರಾ? ಒಂದು ವೇಳೆ ನಿಮ್ಮ ಉತ್ತರ ಹೌದು ಎಂದಾದಲ್ಲಿ ನಿಮ್ಮ ಖಾತೆಯಲ್ಲಿನ ಠೇವಣಿ ಎಷ್ಟು ಸೇಫ್ ಆಗಿದೆ ನಿಮಗೆ ತಿಳಿದಿದೆಯಾ? ಅಂದರೆ, ಒಂದು ವೇಳೆ ಯಾವುದೇ ಕಾರಣದಿಂದ ನಿಮ್ಮ ಠೇವಣಿ ಮುಳುಗಿ ಹೋದರೆ ನಿಮಗೆ ಎಷ್ಟು ಹಣ ವಾಪಸ್ ಸಿಗಲಿದೆ ನಿಮಗೆ ಗೊತ್ತಾ? ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ 2020ರ ಭಾಷಣದಲ್ಲಿ ಈ ಕುರಿತು ಸ್ಪಷ್ಟೀಕರಣ ನೀಡಿದ್ದು, ಇದರಿಂದ ನಿಮ್ಮ ಠೇವಣಿ ಸೇಫ್ ಆಗಲಿದೆ.
ಬ್ಯಾಂಕ್ ಗ್ಯಾರಂಟಿ
ತಮ್ಮ ಬಜೆಟ್ 2020 ಭಾಷಣದಲ್ಲಿ ಈ ಕುರಿತು ಉಲ್ಲೇಖಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕ್ ನಿಮ್ಮ ಠೇವಣಿಗೆ ಬ್ಯಾಂಕ್ ಗ್ಯಾರಂಟಿಯನ್ನು 5 ಲಕ್ಷ ರೂ.ಗಳವರೆಗೆ ಹೆಚ್ಚಿಸಿದ್ದಾರೆ. ಇದಕ್ಕೂ ಮೊದಲು ಬ್ಯಾಂಕ್ ಗಳು ನಿಮ್ಮ ಠೇವಣಿ ಮೊತ್ತಕ್ಕೆ 1 ಲಕ್ಷ ರೂ.ಗಳವರೆಗೆ ಗ್ಯಾರಂಟಿ ನೀಡುತ್ತಿದ್ದವು. ಫೆಬ್ರುವರಿ 4ನೇ ತಾರೀಖಿನಿಂದ ಈ ನಿಯಮವನ್ನು ಜಾರಿಗೊಳಿಸಲಾಗಿದೆ. ಒಂದು ವೇಳೆ ನಿಮ್ಮ ಬ್ಯಾಂಕ್ ಠೇವಣಿ ಮುಳುಗಿಹೋದರೆ ನಿಮಗೆ 5 ಲಕ್ಷ ರೂ. ಸಿಗಲಿದೆ. ಈ ಗ್ಯಾರಂಟಿ ನಿಮಗೆ ಭಾರತೀಯ ರಿಸರ್ವ್ ಬ್ಯಾಂಕ್ ನ ಸಂಪೂರ್ಣ ಸ್ವಾಮ್ಯದ ಠೇವಣಿ ವಿಮಾ ಹಾಗೂ ನಿಶ್ಚಿತ ಸಾಲ ನಿಗಮ(DICGC) ನೀಡಲಿದೆ.
ನಿಮ್ಮ ಹಣ ಸುರಕ್ಷಿತವಾಗಿರಲಿದೆ
ಈ ಕುರಿತು ಹೇಳಿಕೆ ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕ್ ಠೇವಣಿದಾರರ ಭರವಸೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ. ಈ ಕುರಿತು ಶನಿವಾರ ತಮ್ಮ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿದ್ದ ವಿತ್ತ ಸಚಿವೆ, ಎಲ್ಲ ಸರ್ಕಾರಿ ಬ್ಯಾಂಕ್ ಗಳ ಆರೋಗ್ಯದ ನಿಗಾ ವಹಿಸಲು ಒಂದು ನಿರ್ಧಿಷ್ಟ ಪ್ರನಾಳಿಕೆ ಇದ್ದು, ಎಲ್ಲ ಠೇವಣಿದಾರರ ಹಣ ಸುರಕ್ಷಿತವಾಗಿರಲಿದೆ ಎಂದಿದ್ದರು. ಇದಕ್ಕೂ ಮೊದಲು ಮಾಹಿತಿ ನೀಡಿದ್ದ ಕೇಂದ್ರ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್, ವಿತ್ತೀಯ ಸೇವಾ ವಿಭಾಗ ಈ ಕುರಿತು DICGC ಗೆ ಸೂಚನೆ ನೀಡಿದ್ದು, ಕೇಂದ್ರ ಸರ್ಕಾರ ಪ್ರತಿ ಉಳಿತಾಯ ಖಾತೆದಾರರ ಖಾತೆಯ ಗ್ಯಾರಂಟಿಯನ್ನು 5 ಲಕ್ಷ ರೂ.ಗಳ ವರೆಗೆ ಹೆಚ್ಚಿಸುವುದಕ್ಕೆ ಅನುಮತಿ ನೀಡಿದೆ ಎಂದು ಹೇಳಿದ್ದರು.
PMC ಬ್ಯಾಂಕ್ ಹಗರಣ
ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪ್ ರೇಟಿವ್ ಬ್ಯಾಂಕ್ ಹಗರಣ ಬೆಳಕಿಗೆ ಬಂದ ಬಳಿಕ ಇಂತಹ ಕೋ-ಆಪ್ ರೇಟಿವ್ ಬ್ಯಾಂಕುಗಳ ಮೇಲೆ RBI ತನ್ನ ಪಟ್ಟು ಬಿಗಿಗೊಳಸಿತ್ತು. ಈ ಕುರಿತು ಸರ್ಕಾರಕ್ಕೆ ಮನವಿಸಲ್ಲಿಸಿದ್ದ RBI ಕೋ-ಆಪ್ ರೇಟಿವ್ ಬ್ಯಾಂಕ್ ಗಳ ಮೇಲಿನ ನಿಯಂತ್ರಣ ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿತ್ತು. ಈ ಹಗರಣ ಬೆಳಕಿಗೆ ಬಂದ ಬಳಿಕ ಲಕ್ಷಾಂತರ ಠೇವಣಿದಾರರ ವಿಶ್ವಾಸಕ್ಕೆ ಭಾರಿ ಪೆಟ್ಟು ಬಿದ್ದಿತ್ತು. ಹೀಗಾಗಿ ಇನ್ಮುಂದೆ PMC ಬ್ಯಾಂಕಿನ ಲಕ್ಷಾಂತರ ಉಳಿತಾಯ ಖಾತೆದಾರರಿಗೆ 5 ಲಕ್ಷ ರೂ.ವರೆಗಿನ ಠೇವಣಿ ಮೊತ್ತ ಸೇಫ್ ಆಗಲಿದೆ.