ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಆರು ರಾಜ್ಯಗಳ 25 ರಾಜ್ಯಸಭಾ ಸ್ಥಾನಗಳ ಚುನಾವಣೆ 2019ರ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ. ಅದರಲ್ಲೂ ಮುಖ್ಯವಾಗಿ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿರುವ ಕರ್ನಾಟಕ ಹಾಗೂ ಹೆಚ್ಚು ಸ್ಥಾನಗಳಿರುವ ಕಾರಣದಿಂದಾಗಿ ಉತ್ತರ ಪ್ರದೇಶ ಈ ಚುನಾವಣೆಯಲ್ಲಿ ಹೆಚ್ಚಾಗಿ ಗಮನ ಸೆಳೆಯುತ್ತಿವೆ.
ರಾಜ್ಯಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬೆಳಿಗ್ಗೆ 9 ಗಂಟೆಯಿಂದ ಆರಂಭವಾಗಿದೆ. ಮತದಾನ ಪ್ರಕ್ರಿಯೆಯು ಸಂಜೆ 4 ಗಂಟೆಗೆ ಪೂರ್ಣಗೊಳ್ಳಲಿದೆ. ಕರ್ನಾಟಕ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್ ಘಡ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮತದಾನ ಆರಂಭವಾಗಿದೆ.
ಕರ್ನಾಟಕದ ರಾಜ್ಯಸಭಾ ಚುನಾವಣೆ ಚಿತ್ರಣ
ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳಿಗೆ 5 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ರಾಜೀವ್ ಚಂದ್ರಶೇಖರ್, ಕಾಂಗ್ರೆಸಿನಿಂದ ಎಲ್. ಹನುಮಂತಯ್ಯ, ನಾಸೀರ್ ಹುಸೇನ್ ಮತ್ತು ಜಿ. ಸಿ. ಚಂದ್ರಶೇಖರ್ ಸ್ಪರ್ಧಿಸಿದ್ದರೆ, ಜೆಡಿಎಸ್ ನಿಂದ ಬಿ. ಎಂ. ಫಾರೂಕ್ ಸ್ಪರ್ಧಿಸಿದ್ದಾರೆ.
ಕರ್ನಾಟಕದ ವಿಧಾನಸಭೆ ಒಟ್ಟು ಸದಸ್ಯರ ಸಂಖ್ಯೆ 224. ಇದರಲ್ಲಿ 7 ಸ್ಥಾನಗಳು ಖಾಲಿ ಇವೆ. ಕಾಂಗ್ರೆಸ್ 123, ಬಿಜೆಪಿ 43 ಹಾಗೂ ಏಳು ಬಂಡಾಯ ಶಾಸಕರನ್ನೂ ಒಳಗೊಂಡಂತೆ ಜೆಡಿಎಸ್ 37 ಸದಸ್ಯ ಬಲವನ್ನು ಹೊಂದಿದೆ. ಪ್ರತಿ ಅಭ್ಯರ್ಥಿ ಗೆಲುವಿಗೆ 44 ಮತಗಳ ಅಗತ್ಯವಿದೆ.
ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್, ಕಾಂಗ್ರೇಸ್ ಅಭ್ಯರ್ಥಿಗಳಾದ ನಾಸಿರ್ ಹುಸೇನ್ ಮತ್ತು ಎಲ್. ಹನುಮಂತಯ್ಯರ ಗೆಲುವಿನ ಹಾದಿ ಸುಗಮವಾಗಿದ್ದು, ಆಯ್ಕೆ ಬಹುತೇಕ ಖಚಿತವಾಗಿದೆ. ಆದರೆ ಕಾಂಗ್ರೆಸಿನ 3ನೇ ಅಭ್ಯರ್ಥಿ ಜಿ.ಎಸ್. ಚಂದ್ರಶೇಖರ್ ಹಾಗೂ ಜೆಡಿಎಸ್ ಅಭ್ಯರ್ಥಿ ಬಿ.ಎಂ. ಫಾರೂಕ್ ನಡುವೆ ನಾಲ್ಕನೇ ಸ್ಥಾನಕ್ಕೆ ತೀವ್ರ ಹಣಾಹಣಿ ನಡೆಯಲಿದೆ.
ಕಾಂಗ್ರೆಸ್ ಮೂರನೇ ಅಭ್ಯರ್ಥಿ ಗೆಲುವಿಗೆ ಜೆಡಿಎಸ್ ಬಂಡಾಯ ಶಾಸಕರು ಹಾಗೂ ನಾಲ್ವರು ಪಕ್ಷೇತರರ ಅಗತ್ಯವಿದೆ. 2016ರ ಜೂನ್ 11 ರಂದು ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ನ ಏಳು ಶಾಸಕರು ಅಡ್ಡ ಮತದಾನ ಮಾಡಿದ್ದರು. ಪರಿಣಾಮವಾಗಿ ಕಾಂಗ್ರೆಸಿನ ಮೂರನೇ ಅಭ್ಯರ್ಥಿ ಗೆದ್ದಿದ್ದರು. ಆ ಸಮಯದಲ್ಲೂ ಜೆಡಿಎಸ್ ಅಭ್ಯರ್ಥಿಯಾಗಿದ್ದ ಫಾರೂಕ್ ಸೋತಿದ್ದರು. ಈ ಬಾರಿಯ ಚುನಾವಣೆಯಲ್ಲೂ ಇದೇ ಪುನಾರಾವರ್ತನೆ ಆಗುವ ಸಂಭವವಿದ್ದು, ಫಾರೂಕ್ ಗೆಲ್ಲಲು ಪವಾಡವೇ ನಡೆಯಬೇಕಿದೆ.