ನವದೆಹಲಿ: ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಯನಾಡ್ ಸಂಸದ ರಾಹುಲ್ ಗಾಂಧಿ ವಿರುದ್ಧ ದಾಖಲಾದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಗುಜರಾತಿನ ಸೂರತ್ ನಗರದ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.
ಕಳಂಕಿತ ವಜ್ರದ ಉದ್ಯಮಿ ನೀರವ್ ಮೋದಿಯನ್ನು ಉಲ್ಲೇಖಿಸಿ 'ಎಲ್ಲಾ ಕಳ್ಳರು ಮೋದಿಯವರ ಸರ್ ನೇಮ್(ಉಪನಾಮ) ಏಕೆ ಹೊಂದಿದ್ದಾರೆ' ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಈ ಹೇಳಿಕೆ ವಿರುದ್ಧ ಬಿಜೆಪಿ ಮಾನಹಾನಿ ಮೊಕದ್ದಮೆ ದಾಖಲಿಸಿತ್ತು. ಈ ಸಂಬಂಧ ಇಂದು ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಲಿದ್ದಾರೆ.
ರಾಹುಲ್ ವಿರುದ್ಧ ಸ್ಥಳೀಯ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಐಪಿಸಿ ಸೆಕ್ಷನ್ 499 ಮತ್ತು 500ರ ಅಡಿಯಲ್ಲಿ ಸಲ್ಲಿಸಿದ್ದ ದೂರಿನ ಅನ್ವಯ ಮುಖ್ಯ ದಂಡಾಧಿಕಾರಿ ಬಿ.ಎಚ್.ಕಪಾಡಿಯಾ ಅವರು ಮೇ ತಿಂಗಳಲ್ಲಿ ರಾಹುಲ್ ವಿರುದ್ಧ ಸಮನ್ಸ್ ಜಾರಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 10ರಂದು ಸೂರತ್‌ನಲ್ಲಿರುವ ನ್ಯಾಯಾಲಯಕ್ಕೆ ರಾಹುಲ್ ಗಾಂಧಿ ಹಾಜರಾಗುವುದಾಗಿ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚಬಡಾ ತಿಳಿಸಿದ್ದಾರೆ. ವಿಮಾನ ನಿಲ್ದಾಣದಿಂದ ನ್ಯಾಯಾಲಯಕ್ಕೆ ಹೋಗುವ ಸಂಪೂರ್ಣ ಮಾರ್ಗದಲ್ಲಿ ರಾಹುಲ್ ಗಾಂಧಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಲಿದ್ದಾರೆ.