ನವದೆಹಲಿ: ಅಕ್ರಮವಾಗಿ ಸುಮಾರು 70 ಲಕ್ಷ ರೂ. ಮೌಲ್ಯದ ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ದೆಹಲಿ ಅಪರಾಧ ವಿಭಾಗದ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ದೇಶದ ರಾಜಧಾನಿ ದೆಹಲಿಯು ಕ್ರಮೇಣ ಮಾದಕವಸ್ತು ಕಳ್ಳಸಾಗಣೆದಾರರ ಕೇಂದ್ರ ಸ್ಥಾನವಾಗಿ ಪರಿವರ್ತಿತವಾಗುತ್ತಿದೆ. ಈ ಬೆನ್ನಲ್ಲೇ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ 3 ಆರೋಪಿಗಳನ್ನು ದ್ವಾರಕಾದಲ್ಲಿ ಬಂಧಿಸಲಾಗಿದ್ದು, ಅವರಿಂದ 700 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿ ಕ್ರೈಂ ಬ್ರಾಂಚ್ ಡಿಸಿಪಿ ಭೀಷ್ಮಾ ಸಿಂಗ್ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಾದ ರವಿ ಮತ್ತು ಮುನ್ನಾ, ಘಜಿಯಾಬಾದ್ ನಿವಾಸಿಗಳಾಗಿದ್ದು, ಟ್ರಕ್ ಚಾಲಕ ಗಯಾ ಪಾಲ್ ಬಿಹಾರದ ನಿವಾಸಿಯಾಗಿದ್ದಾನೆ ಎನ್ನಲಾಗಿದೆ. ಈ ಮೂವರು ಮಾದಕ ವಸ್ತುಗಳ ಸಾಗಾಣಿಕೆ ಜಾಲದ ಪರವಾಗಿ ಕೆಲಸಮಾಡುತ್ತಿದ್ದು, ಈ ತಂಡವನ್ನು ಬಿಹಾರದಿಂದ ನಿಯಂತ್ರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಡಿಶಾ ಮತ್ತು ಛತ್ತೀಸ್ಗಢದಿಂದ 1500 ರೂ.ಗೆ ಗಾಂಜಾ ಖರೀದಿಸಿ, ಬಿಹಾರದ ಮೂಲಕ ದೆಹಲಿಗೆ ಸರಬರಾಜು ಮಾಡಲಾಗುತ್ತದೆ ಎಂದು ಪೋಲಿಸ್ ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಇಲ್ಲಿ ಒಂದು ಕೆ.ಜಿ ಗಾಂಜಾ ಬೆಲೆ 10 ಸಾವಿರ ರೂ. ಆಗಿದ್ದು, ನಂತರ ಅದನ್ನು ಸಾರಾಯಿ ಸಾಗಿಸುವ ಟ್ರಕ್ನಲ್ಲಿ ಹರಿಯಾಣದಿಂದ ಬಿಹಾರಕ್ಕೆ ಸಾಗಿಸಿ, ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಈ ಆರೋಪಿಗಳು ಈ ಕೃತ್ಯವನ್ನು ಕಳೆದ ಎರಡು ವರ್ಷಗಳಿಂದ ಮಾಡುತ್ತಿದ್ದು, ಈ ಗ್ಯಾಂಗ್ ಮುಖ್ಯಸ್ಥನನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.