ಉತ್ತರಾಖಂಡ್: ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಮೇ 19ರಂದು ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕೇದಾರನಾಥ ಪ್ರವಾಸ ಕೈಗೊಂಡಿದ್ದಾರೆ.
ಕೇದಾರನಾಥ್ ಹಾಗೂ ಬದ್ರಿನಾಥ್ ಪುಣ್ಯ ಕ್ಷೇತ್ರಗಳಿಗೆ ಎರಡು ದಿನಗಳ ಆಧ್ಯಾತ್ಮಿಕ ಪ್ರವಾಸ ಕೈಗೊಂಡಿರುವ ಮೋದಿ ಇಂದು ಬೆಳಿಗ್ಗೆ ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಇದಕ್ಕೂ ಮುನ್ನ ಡೆಹರಾಡುನ್'ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಲ್ಲಿ ಇಳಿದ ಮೋದಿ, ಬಳಿಕ ಹೆಲಿಕಾಪ್ಟರ್ ಮೂಲಕ ಕೇದಾರನಾಥ ತಲುಪಿದರು. ಕೇದಾರನಾಥದಲ್ಲಿ ಪ್ರಧಾನಿ ಮೋದಿಯನ್ನು ಕಂಡ ಯಾತ್ರಾರ್ಥಿಗಳು ಶುಭ ಹಾರೈಸಿದರು.
ನೇಪಾಳಿ ಶೈಲಿಯಲ್ಲಿ ಉಡುಗೆ ತೊಟ್ಟಿದ್ದ ಪ್ರಧಾನಿ ಮೋದಿ, ಕೈಯಲ್ಲಿ ಊರುಗೋಲು ಹಿಡಿದು ದೇವಾಲಯದಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರಲ್ಲದೆ ರುದ್ರಾಭಿಷೇಕದಲ್ಲಿ ಪಾಲ್ಗೊಂಡರು. ಇಂದು ಇಡೀ ದಿನ ಕೇದಾರನಾಥ್ ಧಾಮದಲ್ಲೇ ಇರುವ ಪ್ರಧಾನಿ ಮೋದಿ ಅಲ್ಲಿಯೇ ಧ್ಯಾನ ಕೈಗೊಳ್ಳಲಿದ್ದಾರೆ. ಬಳಿಕ ನಾಳೆ ಬೆಳಿಗ್ಗೆ ಬದರೀನಾಥಕ್ಕೆ ತೆರಳಿ ಪೂಜೆ ಸಲ್ಲಿಸಿ, ಸಂಜೆ ದೆಹಲಿಗೆ ಹಿಂತಿರುಗಲಿದ್ದಾರೆ.
ಮಾರ್ಚ್ 10ರಿಂದ ಆರಂಭವಾಗಿರುವ ಚುನಾವಣಾ ನೀತಿಸಂಹಿತೆ ಇನ್ನೂ ಜಾರಿಯಲ್ಲಿದ್ದು, ಫಲಿತಾಂಶ ಬಂದು ಹೊಸ ಸರ್ಕಾರ ರಚನೆ ಆಗುವವರೆಗೂ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ಚುನಾವಣಾ ಆಯೋಗವು ಪ್ರಧಾನಿ ಕಾರ್ಯಾಲಯಕ್ಕೆ ಸೂಚನೆ ನೀಡಿದೆ.