ಅಹಮದಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಅಸಂಘಟಿತ ಕಾರ್ಮಿಕರಿಗಾಗಿ ನೂತನ 'ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್ ಧನ್ ಪಿಂಚಣಿ ಯೋಜನೆ'ಗೆ (PM-SYM) ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, "ನಾವೆಲ್ಲರೂ ಐತಿಹಾಸಿಕ ಅವಕಾಶಗಳಿಗೆ ಸಾಕ್ಷಿಯಾಗಿದ್ದೇವೆ" ಎಂದು ಹೇಳಿದರು.
ದೇಶಾದ್ಯಂತ ಸುಮಾರು 3 ಲಕ್ಷಕ್ಕೂ ಹೆಚ್ಚಿನ ಸೇವಾ ಕೇಂದ್ರಗಳು ಈ ಯೋಜನೆಗಾಗಿ ಕಾರ್ಯನಿರ್ವಹಿಸಲಿದ್ದು, 20 ಮಿಲಿಯನ್ಗಿಂತ ಹೆಚ್ಚಿನ ಜನರು ಇದರ ಭಾಗವಾಗಿದ್ದಾರೆ, ಇದು ದಾಖಲೆಯಾಗಿದೆ. PMSYM 42 ಕೋಟಿ ಕಾರ್ಮಿಕರಿಗೆ ಸಮರ್ಪಿತ ಯೋಜನೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇಂದಿನ ಯೋಜನೆ ನನಗೆ ಒಂದು ಭಾವೋದ್ರಿಕ್ತ ಕ್ಷಣವಾಗಿದೆ. ಏಕೆಂದರೆ, ಅಸಂಘಟಿತ ಕಾರ್ಮಿಕರ ಕಷ್ಟ ಏನೆಂಬುದನ್ನು ನಾನು ವೈಯಕ್ತಿಕವಾಗಿ ಅನುಭವಿಸಿದ್ದೇನೆ. ಈ ಪರಿಸ್ಥಿತಿಗಳೇ ಇಂದು 'ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್ ಧನ್ ಪಿಂಚಣಿ ಯೋಜನೆ'ಗೆ ಸರ್ಕಾರವನ್ನು ಪ್ರೇರೇಪಿಸಿತು ಎಂದು ಪ್ರಧಾನಿ ಮೋದಿ ಹೇಳಿದರು.
60 ವರ್ಷದ ಬಳಿಕ ತಿಂಗಳಿಗೆ 3 ಸಾವಿರ ರೂ. ಪಿಂಚಣಿ:
ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಮಂಡಿಸುವಾಗ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಅಸಂಘಟಿತ ವಲಯದಲ್ಲಿ ಕೆಲಸಗಾರರಿಗೆ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಲು ಘೋಷಿಸಿದರು. ಈ ಯೋಜನೆಯಡಿ ಕಾರ್ಮಿಕರಿಗೆ 60 ವರ್ಷದ ಬಳಿಕ ತಿಂಗಳಿಗೆ 3 ಸಾವಿರ ರೂ. ಪಿಂಚಣಿಯನ್ನು ಖಾತ್ರಿ ಪಡಿಸಲಾಗಿದೆ. ಅಂದರೆ, ಕಾರ್ಮಿಕ ತಿಂಗಳಿಗೆ 100 ರೂ. ಈ ಯೋಜನೆಯಲ್ಲಿ ತೊಡಗಿಸಿದರೆ, ಸರಕಾರವೂ ಅಷ್ಟೇ ಪಾಲನ್ನು ನೀಡುತ್ತದೆ. ಅಂದರೆ, ಕಾರ್ಮಿಕ 60 ವರ್ಷ ವಯಸ್ಸಿಗೆ ತಲುಪಿದಾಗ ಆತನಿಗೆ ತಿಂಗಳಿಗೆ ಕನಿಷ್ಠ 3000 ರೂ. ಪಿಂಚಣಿ ದೊರೆಯುತ್ತದೆ.
ಈ ಯೋಜನೆಗೆ ಸೇರಲು ಒಟ್ಟು 3.13 ಲಕ್ಷ ಸೇವಾ ಕೇಂದ್ರಗಳನ್ನು ದೇಶದಾದ್ಯಂತ ರಚಿಸಲಾಗಿದೆ. ಈ ಯೋಜನೆಗಾಗಿ ನೋಂದಣಿ ಪ್ರಕ್ರಿಯೆ ಫೆಬ್ರವರಿ 15 ರಿಂದ ನಡೆಯುತ್ತಿದೆ. ಲೈಫ್ ಇನ್ಶುರೆನ್ಸ್ ಕಾರ್ಪೊರೇಶನ್ (ಎಲ್ಐಸಿ) ಈ ಯೋಜನೆಯನ್ನು ಅಂತಿಮಗೊಳಿಸುವ ಜವಾಬ್ದಾರಿಯನ್ನು ಪಡೆದಿದೆ. ಎಲ್ಐಸಿಯ ದೊಡ್ಡ ಜಾಲವನ್ನು ಯೋಜನೆಯಲ್ಲಿ ನೋಂದಣಿಗಾಗಿ ಬಳಸಲಾಗುತ್ತಿದೆ. ಇದರ ಅಡಿಯಲ್ಲಿ, ಅಸಂಘಟಿತ ವಲಯದ 18 ರಿಂದ 40 ವರ್ಷ ವಯಸ್ಸಿನ ಅರ್ಹ ಕೆಲಸಗಾರರು ಅಳವಡಿಸಿಕೊಳ್ಳಲು ಅರ್ಹರಾಗಿರುತ್ತಾರೆ.
ಮಾಹಿತಿಯ ಪ್ರಕಾರ, ಬೀದಿ ಬದಿ ವ್ಯಾಪಾರಿಗಳು, ಆಟೊ, ರಿಕ್ಷಾ ಚಾಲಕರು, ಕಟ್ಟಡ ನಿರ್ಮಾಣ ಕೆಲಸಗಾರರು, ಕೃಷಿ ಕಾರ್ಮಿಕರು, ಬೀಡಿ ಕಾರ್ಮಿಕರು, ನೇಕಾರರು ಸೇರಿದಂತೆ ಅಸಂಘಟಿತ ವಲಯದ 42 ಕೋಟಿ ಜನರ ಪೈಕಿ, 10 ಕೋಟಿ ಜನರು ಈ ಯೋಜನೆಯ ಲಾಭ ಪಡೆಯುವ ಸಾಧ್ಯತೆ ಇದೆ. ಇದಕ್ಕಾಗಿ ಸರಕಾರ ಆರಂಭಿಕವಾಗಿ 500 ಕೋಟಿ ರೂ. ಅನ್ನು ಕಾಯ್ದಿಟ್ಟಿದೆ. ಅಗತ್ಯಕ್ಕೆ ತಕ್ಕಂತೆ ಈ ಮೊತ್ತವನ್ನು ಸರಕಾರ ಹೆಚ್ಚಿಸಲಿದೆ. ಹಣವನ್ನು ಯಾವ ರೀತಿ ತೊಡಗಿಸಬೇಕೆಂದು ಇನ್ನೂ ಸರಕಾರ ಸ್ಪಷ್ಟವಾಗಿ ನಮೂದಿಸಿಲ್ಲ. ಆದರೂ, ಎನ್‌ಪಿಎಸ್ ಮಾದರಿಯಲ್ಲೇ ಇರಬಹುದು ಎಂದು ಹೇಳಲಾಗುತ್ತಿದೆ.
ಕಾರ್ಮಿಕನೊಬ್ಬ ತನ್ನ 29ನೇ ವಯಸ್ಸಿನಲ್ಲಿ ಈ ಯೋಜನೆಗೆ ಒಳಪಟ್ಟರೆ ಆತ ತಿಂಗಳಿಗೆ 100 ರೂ. ತೊಡಗಿಸಬೇಕಾಗುತ್ತದೆ. ಅಷ್ಟೇ ಮೊತ್ತದ ಹಣವನ್ನು ಸರಕಾರ ಪಾವತಿಸುತ್ತದೆ. ಆಗ ಆತ, 60 ವರ್ಷದ ಬಳಿಕ ಅಂದರೆ ತಿಂಗಳಿಗೆ 3000 ರೂ. ಪಡೆಯುತ್ತಾನೆ. ಹಾಗೆಯೇ, ಕಾರ್ಮಿಕನೊಬ್ಬ ತನ್ನ 18ನೇ ವಯಸ್ಸಿನಲ್ಲೇ ಈ ಯೋಜನೆಗೆ ಒಳಪಟ್ಟರೆ ಆತ ತಿಂಗಳಿಗೆ 55 ರೂ. ತೊಡಗಿಸಬೇಕಾಗುತ್ತದೆ. ಮೇಲ್ನೋಟಕ್ಕೆ ಈ ಯೋಜನೆ ಅಸಂಘಟಿತ ವಲಯದ ಕಾರ್ಮಿಕರಿ ಬಂಪರ್ ರೀತಿಯಲ್ಲಿ ಕಾಣಿಸುತ್ತಿದೆ. ಆದರೆ, ಇದರ ಸ್ಪಷ್ಟ ರೂಪರೇಷೆಗಳು ಗೊತ್ತಾದಾಗಲೇ ಅದರ ಪೂರ್ಣ ಪರಿಚಯವಾಗಬಹುದು.
ಯೋಜನೆಯಡಿಯಲ್ಲಿ ನೋಂದಾಯಿಸಲಾದವರಿಗೆ ವಿಶಿಷ್ಟ ID ಸಂಖ್ಯೆ ನೀಡಲಾಗುವುದು. ಬಜೆಟ್ ಭಾಷಣದಲ್ಲಿ, ಪಿಯೂಷ್ ಗೋಯಲ್ ಅವರು ಸರ್ಕಾರದ ಪರವಾಗಿ, ಅಸಂಘಟಿತ ವಲಯ ಉದ್ಯೋಗಿಗಳಿಗೆ ನಿವೃತ್ತಿಯ ನಂತರ ಕನಿಷ್ಠ ಪಿಂಚಣಿ ಖಾತರಿ ನೀಡಲಾಗುವುದು ಎಂದು ಹೇಳಿದರು. ಸರಕಾರ ಪ್ರಾರಂಭಿಸಿದ ಯೋಜನೆಯು, ಮಾಸಿಕ ಆದಾಯ 15 ಸಾವಿರಕ್ಕಿಂತ ಕಡಿಮೆ ಆದಾಯವಿರುವ ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ.