ನವದೆಹಲಿ: ವಿಧಾನಸಭೆ ಚುನಾವಣೆಯ ಫಲಿತಾಂಶ ಸ್ಪಷ್ಟ ಚಿತ್ರಣ ಇನ್ನು ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಗೆ ಈ ಚುನಾವಣೆ ಅತ್ಯಂತ ಪ್ರಮುಖ. ಅಧಿಕಾರ ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಬಿಜೆಪಿ ಇದ್ದರೆ, ಅಧಿಕಾರ ಪಡೆದು ಚೇತರಿಸಿಕೊಳ್ಳುವ ತವಕದಲ್ಲಿ ಕಾಂಗ್ರೆಸ್ ಇದೆ.
ಸದ್ಯ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ, ಮಿಜೋರಾಂನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ತೆಲಂಗಾಣದಲ್ಲಿ ಟಿಆರ್ಎಸ್ ಅಧಿಕಾರದಲ್ಲಿದೆ. ಸದ್ಯ ಹೊರಬೀಳುತ್ತಿರುವ ಟ್ರೆಂಡ್ ನಲ್ಲಿ ಬಿಜೆಪಿ ಹಿನ್ನಡೆ ಕಾಯ್ದುಕೊಂಡಿದೆ. ಏತನ್ಮಧ್ಯೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಜೆಪಿಯ ಕೋರ್ ಕಮಿಟಿ ಸಭೆ ಕರೆದಿದ್ದಾರೆ. ಸಭೆಯಲ್ಲಿ ಚುನಾವಣಾ ಫಲಿತಾಂಶಗಳ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ಮಿಜೋರಾಂ ನಲ್ಲಿ ಅಧಿಕಾರ ಸ್ಥಾಪಿಸುವ ಆಶಯ ಹೊಂದಿದ್ದ ಬಿಜೆಪಿಗೆ ಅಲ್ಲಿ ನಿರೀಕ್ಷೆಯ ಗೆಲುವು ಲಭಿಸಿಲ್ಲ. ಛತ್ತೀಸಗಢದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ಉಂಟಾಗಿದೆ. ಇಲ್ಲಿ 15 ವರ್ಷಗಳ ನಂತರ, ಬಿಜೆಪಿ ತನ್ನ ಅಧಿಕಾರವನ್ನು ಕಳೆದುಕೊಳ್ಳುತ್ತಿದೆ.
ನಿಸ್ಸಂಶಯವಾಗಿ ಕೋರ್ ಕಮಿಟಿ ಸಭೆಯ ಪ್ರಮುಖ ಅಜೆಂಡಾ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗೆಗಿನ ಚರ್ಚೆಯಾಗಿದೆ. ದೇಶದ ರಾಜಕೀಯದ ಮೇಲೂ ಈ ಫಲಿತಾಂಶ ಪ್ರಭಾವ ಬೀರಲಿದೆ. ಇನ್ನು ಎರಡೂವರೆ ತಿಂಗಳಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದ್ದು, ಇಂತಹ ಪರಿಸ್ಥಿತಿಯಲ್ಲಿ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ ಎನ್ನಲಾಗಿದೆ.