ಲೋಕಸಭಾ ಚುನಾವಣೆ 2019: ಪ್ರಚಂಡ ಬಹುಮತದ ಬಳಿಕ ಪ್ರಧಾನಿ ಮೋದಿಯಿಂದ 3 ಪ್ರತಿಜ್ಞೆ!

ಈ ಬಡ ಫಕೀರನ ಜೋಳಿಗೆಯನ್ನು ನೀವು ಪ್ರೀತಿಯ ಆಶೀರ್ವಾದದಿಂದ ತುಂಬಿಸಿದ್ದೀರಿ. ನನಗೆ ದೇಶ ಮುನ್ನಡೆಸಲು ಪ್ರಚಂಡ ಬಹುಮತ ಕೊಟ್ಟಿದ್ದೀರಿ. ನಿಮಗೆಲ್ಲರಿಗೂ ನನ್ನ ಧನ್ಯವಾದಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Last Updated : May 23, 2019, 10:49 PM IST
ಲೋಕಸಭಾ ಚುನಾವಣೆ 2019: ಪ್ರಚಂಡ ಬಹುಮತದ ಬಳಿಕ ಪ್ರಧಾನಿ ಮೋದಿಯಿಂದ 3 ಪ್ರತಿಜ್ಞೆ! title=

ನವದೆಹಲಿ: ಲೋಕಸಭಾ ಚುನಾವಣೆ 2019ರಲ್ಲಿ ಬಿಜೆಪಿ ಪ್ರಚಂಡ ಬಹುಮತ ಸಾಧಿಸಿದ ಬಳಿಕ ಬಿಜೆಪಿ ಮುಖ್ಯ ಕಛೇರಿಯನ್ನು ತಲುಪಿದ ಪ್ರಧಾನಿ ನರೇಂದ್ರ ಮೋದಿ, ಅಲ್ಲಿ ನೆರೆದಿದ್ದ ಕಾರ್ಯಕರ್ತರು, ಪಕ್ಷದ ನಾಯಕರನ್ನು ಉದ್ದೇಶಿಸಿ ಭಾಷಣ ಮಾಡಿದರು.

"ಈ ಬಡ ಫಕೀರನ ಜೋಳಿಗೆಯನ್ನು ನೀವು ಪ್ರೀತಿಯ ಆಶೀರ್ವಾದದಿಂದ ತುಂಬಿಸಿದ್ದೀರಿ. ನನಗೆ ದೇಶ ಮುನ್ನಡೆಸಲು ಪ್ರಚಂಡ ಬಹುಮತ ಕೊಟ್ಟಿದ್ದೀರಿ. ನಿಮಗೆಲ್ಲರಿಗೂ ನನ್ನ ಧನ್ಯವಾದಗಳು. ನಮ್ಮ ದೇಶವನ್ನು ಸಮೃದ್ದಗೊಳಿಸಲು ನಮ್ಮೆಲ್ಲರ ಶ್ರಮ ಅಗತ್ಯ. 5 ವರ್ಷದಲ್ಲಿ ದೇಶವನ್ನು ಹೊಸ ಹಾದಿಗೆ ಕೊಂಡೊಯ್ಯುತ್ತೇನೆ" ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು.

"ನಾನು ಮೊದಲಿನಿಂದಲೂ ತಪ್ಪು ಅಥವಾ ಕೆಟ್ಟ ಉದ್ದೇಶಗಳಿಂದ ಏನನ್ನೂ ಮಾಡುವುದಿಲ್ಲ. ತಪ್ಪುಗಳು ಆಗಬಹುದು, ಆದರೆ ನನ್ನ ಉದ್ದೇಶವು ಎಂದಿಗೂ ತಪ್ಪಾಗುವುದಿಲ್ಲ" ಎಂದು ಹೇಳಿದ ಮೋದಿ, "ಈ ದೇಶದ ಜನರಿಗೆ ನಾನು ಹೇಳಲು ಇಚ್ಚಿಸುವುದೇನೆಂದರೆ, ನಾನೆಂದೂ ನನಗಾಗಿ ಏನನ್ನೂ ಮಾಡಿಕೊಂದಿಲ್ಲ, ಹೀಗೆಯೇ ಮುಂದುವರೆಯುತ್ತೇನೆ. ನನ್ನ ಎಲ್ಲಾ ಸಮಯವನ್ನು ಭಾರತ ದೇಶಕ್ಕೆ ಹಾಗೂ ಭಾರತೀಯರಿಗಾಗಿ ಮುಡಿಪಾಗಿಡುತ್ತೇನೆ" ಎಂದು ಮೋದಿ ಪ್ರತಿಜ್ಞೆ ಮಾಡಿದರು.

ಮುಂದುವರೆದು ಮಾತನಾಡಿದ ಅವರು, 2014ರಲ್ಲಿ ನನ್ನ ಬಗ್ಗೆ ತಿಳಿದಿಲ್ಲದಿದ್ದರೂ ನನಗೆ ಆಶೀರ್ವಾದ ಮಾಡಿದ್ದಿರಿ. ಈಗ 2019ರಲ್ಲಿ ನನ್ನ ಬಗ್ಗೆ ತಿಳಿದುಕೊಂಡು ಗೆಲ್ಲಿಸಿದ್ದೀರಿ. ಬಹುಮತದ ಮೂಲಕ ನನ್ನ ಮೇಲೆ ಹೊಸ ಜವಾಬ್ದಾರಿ ಹೊರಿಸಿದ್ದೀರಿ. ಇಡೀ ವಿಶ್ವಕ್ಕೆ ಪ್ರಜಾಪ್ರಭುತ್ವದ ಈ ಹಬ್ಬ ಮಾದರಿಯಾಗಿದ್ದು, ಇದನ್ನು ಯಶಸ್ವಿ ಮಾಡಿದ ಜನತಾ ಜನಾರ್ದನರಿಗೆ ಧನ್ಯವಾದ, ಇಲ್ಲಿ ಯಾರಾದರೂ ಗೆದ್ದಿದ್ದಾರೆ ಅಂದರೆ ಅದು ಜನತಾ ಜನಾರ್ದನರ ವಿಜಯ, ಇದು ಲೋಕತಂತ್ರದ ಜಯ. ಮುಂದೆಯೂ ಕೂಡ ಜನರ ಹಾಗೂ ದೇಶದ ಅಭಿವೃದ್ಧಿಗಾಗಿ ಶರ್ಮಿಸುತ್ತೇನೆ" ಎಂದು ನರೇಂದ್ರ ಮೋದಿ ತಿಳಿಸಿದರು.

ಈ ದೇಶದಲ್ಲಿ ಎರಡು ಜಾತಿಯ ಜನರಿದ್ದಾರೆ. ಒಂದು ಬಡವರ ಜಾತಿ, ಮತ್ತೊಂದು ಬಡತನ ನಿರ್ಮೂಲನೆ ಮಾಡುವ ಜಾತಿ. ಅವರಿಬ್ಬರೂ ನನಗೆ ಮುಖ್ಯವಾಗುತ್ತಾರೆ. ಅವರಿಬ್ಬರ ಅಭಿವೃದ್ಧಿಗೆ, ಏಳಿಗೆಗೆ ನಾನು ಸದಾ ಸಿದ್ಧನಾಗಿರುತ್ತೇನೆ ಎಂದು ಮೋದಿ ಪ್ರತಿಜ್ಞೆ ಮಾಡಿದರು.

ಕೆಲವು ದಶಕಗಳ ಹಿಂದೆ ನಮ್ಮ ಪಕ್ಷ ಎರಡನೇ ಸ್ಥಾನದಲ್ಲಿತ್ತು. ಆದರೀಗ ಎರಡನೇ ಬಾರಿಯೂ ನಾವು ಅಧಿಕಾರಕ್ಕೆ ಬಂದಿದ್ದೇವೆ. ಹಾಗೆಂದ ಮಾತ್ರಕ್ಕೆ ನಮ್ಮ ಆಶಯ, ನಮ್ರತೆ, ವಿನಯತೆ, ಧೋರಣೆ, ಸಿದ್ಧಾಂತಗಳನ್ನು ಮರೆತಿಲ್ಲ, ಮರೆಯುವುದಿಲ್ಲ. ನಿಷ್ಠೆಯಿಂದ ಸೇವೆ ಮಾಡುತ್ತೇನೆ. ಈಗ ನಮ್ಮ ದೇಶವನ್ನು ಸರ್ವಮತದಿಂದ ಮುನ್ನಡೆಸಬೇಕಾಗಿದೆ. ನಮ್ಮ ವಿರೋಧಿಗಳಿದ್ದರೂ ಜೊತೆಗೆ ಕೊಂಡೊಯ್ಯಬೇಕಾಗಿದೆ ಎಂದು ಹೇಳಿದರು ಎಂದು ಮೋದಿ ಭರವಸೆ ನೀಡಿದರು.

ಸದಿ ಇಡೀ ದೇಶದ ಚಿತ್ತ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸಮಾರಂಭದೆಡೆಗೆ ನೆಟ್ಟಿದ್ದು, ಮುಂದಿನ ವಾರ ನಿಗದಿಯಾಗುವ ಸಾಧ್ಯತೆಯಿದೆ. 

Trending News