ಟೀ ಮಾರುತ್ತಿದ್ದ ಯುವಕ ಈಗ ಶಿಕ್ಷಕ; ಈತನಿಗೆ ಪ್ರಧಾನಿ ಮೋದಿಯೇ ಆದರ್ಶ!

ಟೀ ಮಾರಾಟ ಮಾಡಿ ಮೋದಿ ಅವರು ದೇಶದ ಪ್ರಧಾನಿ ಆಗುತ್ತಾರೆ ಎಂದಾದರೆ ನಾನೇಕೆ ಶಿಕ್ಷಕ ಆಗಲು ಸಾಧ್ಯವಿಲ್ಲ ಎಂದು ಚೇತನ್ ಸಿಂಗ್ ಹೇಳಿದ್ದಾನೆ. 

Last Updated : Jan 4, 2019, 05:05 PM IST
ಟೀ ಮಾರುತ್ತಿದ್ದ ಯುವಕ ಈಗ ಶಿಕ್ಷಕ; ಈತನಿಗೆ ಪ್ರಧಾನಿ ಮೋದಿಯೇ ಆದರ್ಶ! title=

ವರದಿ: ಹನುಮಾನ್ ತನ್ವಾರ್

ನವದೆಹಲಿ: ಒಬ್ಬ ಟೀ ಮಾರುವವ ಪ್ರಧಾನಮಂತ್ರಿ ಆಗಬಹುದು ಎಂದಾದರೆ ಜೀವನದಲ್ಲಿ ಸಾಧಿಸಲಾಗದ ವಿಷಯ ಏನೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗಾಗ್ಗೆ ಹೇಳೋದನ್ನು ನಾವು ಕೇಳಿದ್ದೇವೆ. ಈಗ ಪ್ರಧಾನಿ ಮೋದಿ ಅವರ ಮಾತನ್ನು ರಾಜಸ್ಥಾನದ ನಾಗೌರ್ನ ಪ್ರದೇಶದ ಮಿಂಡಾ ಗ್ರಾಮದ ಓರ್ವ ಯುವಕ ಅದನ್ನು ಸಾಕಾರಗೊಳಿಸಿದ್ದಾನೆ. ಟೀ ಮಾರುತ್ತಲೇ ಕಷ್ಟಪಟ್ಟು ಓದಿ ಇಂದು ಶಿಕ್ಷಕನಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾನೆ.

ನಾಗೌರ ಜಿಲ್ಲೆಯ ಅತೀ ಹಿಂದುಳಿದ ನಾವಾ ತಹಸೀಲ್'ನ ಅತಿ ಪುಟ್ಟ ಗ್ರಾಮವಾದ ಮಿಂಡಾದ ಚೇತನ್ ಸಿಂಗ್ ಎಂಬಾತನೇ ಟೀ ಮಾರಿಕೊಂಡು ಇಂದು ಶಿಕ್ಷಕನಾಗಿ ಸಾಧನೆ ಮಾಡಿದ ಯುವಕ. ಬೆಳಗಿನ ಸಮಯದಲ್ಲಿ ಶಾಲೆಗೇ ಹೋಗುತ್ತಿದ್ದ ಚೇತನ್ ಸಿಂಗ್, ಅಲ್ಲಿಂದ ಬರುತ್ತಿದ್ದಂತೆ ತಂದೆಗೆ ಟೀ ಮಾರಾಟ ಮಾಡುವಲ್ಲಿ ಸಹಾಯ ಮಾಡುತ್ತಿದ್ದ. ಬಳಿಕ ರಾತ್ರಿ ಸಮಯದಲ್ಲಿ ಓದಿನ ಕಡೆ ಗಮನಹರಿಸುತ್ತಿದ್ದ. ಈ ರೀತಿ ಕಷ್ಟಪಟ್ಟು ಓದಿದ ಫಲವಾಗಿ ಇಂದು ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಈ ಮೂಲಕ ಇಡೀ ಯುವಜನಾಂಗಕ್ಕೆ ಸ್ಫೂರ್ತಿಯಾಗಿದ್ದಾನೆ. ಈತನ ಸಾಧನೆಗೆ ಇಡೀ ಗ್ರಾಮವೇ ಶ್ಲಾಘನೆ ವ್ಯಕ್ತಪಡಿಸಿದೆ. 

"ಚೇತನ್ ತಂದೆ ಮಹೇಂದ್ರ ಸಿಂಗ್ ಅವರು ತಳ್ಳುಗಾಡಿಯಲ್ಲಿ ಟೀ ಮಾರಾಟ ಮಾಡಿ ಇಡೀ ಕುಟುಂಬವನ್ನು ಪಾಲಿಸುತ್ತಿದ್ದಾರೆ. ಚೇತನ್ ಪ್ರತಿದಿನ ಬೆಳಿಗ್ಗೆ ಶಾಲೆಗೆ ಹೋಗಿ, ಅಲ್ಲಿಂದ ಬಂದ ಕೂಡಲೇ ತಂದೆಯ ಟೀ ಅಂಗಡಿಯನ್ನು ನಿಭಾಯಿಸುತ್ತಿದ್ದ. ಅವರಿಗಿದ್ದ ಕಷ್ಟದಲ್ಲಿಯೂ ಟೀ ಮಾರಿಕೊಂಡು ಓದಿ ಇಂದು ಚೇತನ್ ಶಿಕ್ಷಕನಾಗಿದ್ದಾನೆ ಎಂದರೆ ಅದಕ್ಕೆ ಅವನ ಪರಿಶ್ರಮ ಮತ್ತು ಏಕಾಗ್ರತೆಯೇ ಕಾರಣ. ಅದಕ್ಕೆ ಫಲವಾಗಿ ಇಂದು ಆತ ಎರಡನೇ ದರ್ಜೆಯ ಶಿಕ್ಷನಾಗಿ ಆಯ್ಕೆಯಾಗಿದ್ದಾನೆ. ಆತ ನಮ್ಮೂರ ಶಿಕ್ಷಕ ಎಂದು ಹೇಳಿಕೊಳ್ಳಲು ನಿಜಕ್ಕೂ ಹೆಮ್ಮೆ ಎನಿಸುತ್ತದೆ" ಎಂದು ಗ್ರಾಮಸ್ಥರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ತನ್ನ ಸಾಧನೆ ಬಗ್ಗೆ ಹೇಳುತ್ತಾ, ಪ್ರಧಾನಿ ನರೇಂದ್ರ ಮೋದಿ ಅವರೇ ತನ್ನ ಸಾಧನೆಗೆ ಕಾರಣ. ಅವರೇ ತನ್ನ ಜೀವನದ ಆದರ್ಶ ವ್ಯಕ್ತಿ ಎಂದು ಚೇತನ್ ಸಿಂಗ್ ಹೇಳಿದ್ದಾನೆ. ಟೀ ಮಾರಾಟ ಮಾಡಿ ಮೋದಿ ಅವರು ದೇಶದ ಪ್ರಧಾನಿ ಆಗುತ್ತಾರೆ ಎಂದಾದರೆ ನಾನೇಕೆ ಶಿಕ್ಷಕ ಆಗಲು ಸಾಧ್ಯವಿಲ್ಲ ಎಂಬ ಆಲೋಚನೆ ನನ್ನಲ್ಲಿ ಬಂತು. ಇದೇ ಆಲೋಚನೆಯನ್ನು ಗುರಿಯಾಗಿಟ್ಟುಕೊಂಡು ಛಲಬಿಡದೆ ಓದಿದ್ದಾಗಿಯೂ, ಶಿಕ್ಷಕನಾಗಿ ಆಯ್ಕೆಯಾಗಿದ್ದಾಗಿಯೂ ಚೇತನ್ ಹೇಳುತ್ತಾನೆ. 

Trending News