ನವದೆಹಲಿ: ಆದಾಯ ತೆರಿಗೆ ಮರು ಪಾವತಿಗಾಗಿ ರಿಟರ್ನ್ಸ್ ಫೈಲ್ ಮಾಡಲು ಪ್ಯಾನ್ಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಮೊದಲು ಆಧಾರ್ ಹೊರತಾಗಿಯೂ ಐಟಿಆರ್ ದಾಖಲಿಸುವ ಅವಕಾಶವಿತ್ತು. ಆದರೆ ಇತ್ತೀಚಿನ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಇನ್ನು ಮುಂದೆ ಆಧಾರ್ ಇಲ್ಲದೇ ಐಟಿಆರ್ ಸಲ್ಲಿಕೆ ಅಸಾಧ್ಯವಾಗಿದೆ.
ವಾಸ್ತವವಾಗಿ, ಆದಾಯ ತೆರಿಗೆ ರಿಟರ್ನ್ಸ್(ಐಟಿಆರ್) ದಾಖಲಿಸಲು ಪ್ಯಾನ್ ಜತೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
2018-19ರಲ್ಲಿ ಆಧಾರ್-ಪ್ಯಾನ್ ಜೋಡಣೆ ಮಾಡದೆಯೇ ಐಟಿಆರ್ ದಾಖಲಿಸಿದ್ದ ಇಬ್ಬರ ಕ್ರಮವನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎ.ಕೆ.ಸಿಕ್ರಿ ಮತ್ತು ಎಸ್.ಅಬ್ದುಲ್ ನಜೀರ್ ನೇತೃತ್ವದ ಪೀಠವು ದೆಹಲಿ ಹೈಕೋರ್ಟ್ ಆದೇಶವನ್ನು ತಳ್ಳಿ ಹಾಕಿದ್ದು, ಆದಾಯ ತೆರಿಗೆ ರಿಟರ್ನ್ಸ್(ಐಟಿಆರ್) ದಾಖಲಿಸಲು ಪ್ಯಾನ್ ಜತೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯ ಎಂದು ತಿಳಿಸಿದೆ.
ಸರಕಾರ ಯೋಜನೆಗಳ ಪ್ರಯೋಜನವನ್ನು ಪಡೆಯಲು ಮತ್ತು ಅದನ್ನು ಲಾಭ ಪಡೆಯಲು ಆಧಾರ್ ಅತ್ಯಗತ್ಯ ಎಂದು ಕಳೆದ ವರ್ಷ ಸೆಪ್ಟಂಬರ್ನಲ್ಲಿ ಸುಪ್ರೀಂಕೋರ್ಟ್ ತಿಳಿಸಿದೆ. ಈ ಸಂದರ್ಭದಲ್ಲಿ ಐಟಿಆರ್ ದಾಖಲಿಸಲು ಪ್ಯಾನ್ ಜತೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯ ಎಂದು ಕೋರ್ಟ್ ಹೇಳಿದೆ.
ಸಿಬಿಡಿಟಿಯ ಮಾಹಿತಿ ಪ್ರಕಾರ, ಇಲ್ಲಿಯವರೆಗೆ 42 ಕೋಟಿ ಪ್ಯಾನ್ ಕಾರ್ಡ್ ನೀಡಲಾಗಿದ್ದು, ಅದರಲ್ಲಿ 23 ಕೋಟಿ ಪ್ಯಾನ್ ಕಾರ್ಡ್ ಗಳು ಮಾತ್ರ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಗೊಂಡಿವೆ. ಪ್ಯಾನ್ ಅನ್ನು ಆಧಾರ್ ಜೊತೆ ಸಂಪರ್ಕಿಸಲು ಮಾರ್ಚ್ 31, 2019 ಕೊನೆಯ ದಿನಾಂಕವಾಗಿದೆ.