ವಿರೋಧ ಪಕ್ಷದವರಿಗೆ ಭಾರತೀಯ ಸಂಸ್ಕೃತಿಯ ಜ್ಞಾನವಿಲ್ಲ: ಯೋಗಿ ಆದಿತ್ಯನಾಥ್

ಕುಂಭಮೇಳದ ಯಶಸ್ಸನ್ನು ಪ್ರಧಾನಿ ನರೇಂದ್ರ ಮೋದಿಗೆ ಅರ್ಪಿಸಿದ ಯೋಗಿ ಆದಿತ್ಯನಾಥ್, ಅದು "ಸ್ವಚ್ಛ ಮತ್ತು ಸುರಕ್ಷಿತ ಕುಂಭ" ಎಂದಿದ್ದಾರೆ. 

Last Updated : Mar 18, 2019, 07:11 PM IST
ವಿರೋಧ ಪಕ್ಷದವರಿಗೆ ಭಾರತೀಯ ಸಂಸ್ಕೃತಿಯ ಜ್ಞಾನವಿಲ್ಲ: ಯೋಗಿ ಆದಿತ್ಯನಾಥ್ title=

ಲಕ್ನೋ: ಈ ವರ್ಷದ ಅರ್ಧ ಕುಂಭವನ್ನು ಕುಂಭ ಎಂದು ಮರುನಾಮಕರಣ ಮಾಡಿದ ಉತ್ತರಪ್ರದೇಶ ಸರ್ಕಾರವನ್ನು ಟೀಕಿಸಿದ ವಿರೋಧ ಪಕ್ಷಗಳ ವಿರುದ್ಧ ಕಿಡಿ ಕಾರಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ವಿರೋಧ ಪಕ್ಷದವರಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಸ್ವಲ್ಪವೂ ಜ್ಞಾನವಿಲ್ಲ ಎಂದಿದ್ದಾರೆ.

ಅರ್ಧ ಕುಂಭವನ್ನು ಕುಂಭ ಎಂದು ಮರುನಾಮಕರಣ ಮಾಡಿದ್ದ ಉತ್ತರಪ್ರದೇಶ ಸರ್ಕಾರ ಬಳಿಕ 2017ರಲ್ಲಿ ಮಹಾ ಕುಂಭ ಎಂದು ಬದಲಾಯಿಸಿತ್ತು. ಜನವರಿ 15 ರಿಂದ ಮಾರ್ಚ್ 4ರವರೆಗೆ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸೇರುವ ಅಲಹಾಬಾದ್ ನ ಪವಿತ್ರ ಸ್ಥಳವಾದ ಸಂಗಮದಲ್ಲಿ ನಡೆದ ಮಹಾ ಕುಂಭಮೇಳದಲ್ಲಿ 24 ಕೋಟಿಗೂ ಅಧಿಕ ಜನರು ಪಾಲ್ಗೊಂಡಿದ್ದರು.

"ಇತ್ತೀಚೆಗೆ ಪ್ರಯಾಗರಾಜ್ ನಲ್ಲಿ ನಡೆದ ದಿವ್ಯ ಹಾಗೂ ಭವ್ಯವಾದ ಕುಂಭಮೇಳವನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಆದರೆ ವಿರೋಧ ಪಕ್ಷಕ್ಕೆ ಮಾತ್ರ ಅರ್ಧಕುಂಭವನ್ನು ಕುಂಭ ಎಂದು ಮರುನಾಮಕರಣ ಮಾಡಿದ್ದೇಕೆ ಎಂದು ಪ್ರಶ್ನಿಸುತ್ತಿದೆ. ಅಷ್ಟಕ್ಕೂ ಅವರಿಗೆ ಭಾರತೀಯ ಸಂಸ್ಕೃತಿಯ ಕಿಂಚಿತ್ ಜ್ಞಾನವಿದೆಯೇ? ಆದರೆ ಸರಿಯಾದ ಸಮಯದಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂಬುದನ್ನು ವಿರೋಧಪಕ್ಷದವರು ಅರ್ಥಮಾಡಿಕೊಳ್ಳಬೇಕು" ಎಂದು ಪಿಟಿಐ ಗೆ ನೀಡಿದ ಸಂದರ್ಶನದಲ್ಲಿ ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ.

ಇದೇ ಸಂದರ್ಭದಲ್ಲಿ ಕುಂಭಮೇಳದ ಯಶಸ್ಸನ್ನು ಪ್ರಧಾನಿ ನರೇಂದ್ರ ಮೋದಿಗೆ ಅರ್ಪಿಸಿದ ಯೋಗಿ ಆದಿತ್ಯನಾಥ್, ಅದು "ಸ್ವಚ್ಛ ಮತ್ತು ಸುರಕ್ಷಿತ ಕುಂಭ" ಎಂದಿದ್ದಾರೆ. 

ಮುಂದುವರೆದು ಮಾತನಾಡುತ್ತಾ, "ಮತ್ತೊಂದೆಡೆ ಇಡೀ ವಿಶ್ವವೇ ಭಯೋತ್ಪಾದನೆಯಂತಹ ಪಿಡುಗನ್ನು ಎದುರಿಸುತ್ತಿದ್ದು, ಎಲ್ಲೆಡೆ ಭಯದ ವಾತಾವರಣ ಸೃಷ್ಟಿಯಾಗಿದೆ. ಆದಾಗ್ಯೂ, ನಾವು ಸುರಕ್ಷಿತ ಕುಂಭವನ್ನು ಆಯೋಜಿಸಿ, 24 ಕೋಟಿಗೂ ಅಧಿಕ ಜನರು ಇದಕ್ಕೆ ಸಾಕ್ಷಿಯಾದರು" ಎಂದು ಯೋಗಿ ಹೇಳಿದ್ದಾರೆ.

Trending News