ಕೃಷಿ ಕಾಯ್ದೆ ವಿರೋಧಿಸಿ ನಡೆದ ಹೋರಾಟದಲ್ಲಿ ರೈತರು ಸಾವನ್ನಪ್ಪಿಲ್ಲ: ಕೇಂದ್ರ ಸಚಿವ ತೋಮರ್

‘ಅನ್ನದಾತ’ರ ಪ್ರತಿಭಟನೆಗೆ ಕೊನೆಗೂ ಮಣಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 3 ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವುದಾಗಿ ಘೋಷಿಸಿತ್ತು.

Written by - Zee Kannada News Desk | Last Updated : Dec 11, 2021, 08:06 AM IST
  • ಕೃಷಿ ಕಾಯ್ದೆ ವಿರೋಧಿಸಿ ನಡೆದ ಹೋರಾಟದಲ್ಲಿ ಪೊಲೀಸರು ಕೈಗೊಂಡ ಕ್ರಮದಿಂದ ರೈತರು ಸಾವನ್ನಪ್ಪಿಲ್ಲ
  • ಕಾಂಗ್ರೆಸ್ ನಾಯಕ ಧೀರಜ್ ಪ್ರಸಾದ್ ಸಾಹು & ಎಎಪಿ ನಾಯಕ ಸಂಜಯ್ ಸಿಂಗ್ ಜಂಟಿ ಪ್ರಶ್ನೆಗೆ ತೋಮರ್ ಉತ್ತರ
  • ಕೇಂದ್ರ ಸರ್ಕಾರವು ಚಳಿಗಾಲದ ಅಧಿವೇಶನದಲ್ಲಿ (ನ.29) ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಂಡಿದೆ
ಕೃಷಿ ಕಾಯ್ದೆ ವಿರೋಧಿಸಿ ನಡೆದ ಹೋರಾಟದಲ್ಲಿ ರೈತರು ಸಾವನ್ನಪ್ಪಿಲ್ಲ: ಕೇಂದ್ರ ಸಚಿವ ತೋಮರ್ title=
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್

ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸಿದ ಹೋರಾಟದಲ್ಲಿ ಪೊಲೀಸರು ಕೈಗೊಂಡ ಕ್ರಮದಿಂದ ಯಾವುದೇ ರೈತರು ಸಾವನ್ನಪ್ಪಿಲ್ಲವೆಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್(Narendra Singh Tomar) ಹೇಳಿದ್ದಾರೆ. ಚಳಿಗಾಲದ ಅಧಿವೇಶನ(Winter Session)ದಲ್ಲಿ ಕಾಂಗ್ರೆಸ್ ನಾಯಕ ಧೀರಜ್ ಪ್ರಸಾದ್ ಸಾಹು ಮತ್ತು ಎಎಪಿ ನಾಯಕ ಸಂಜಯ್ ಸಿಂಗ್ ಅವರು ಕೇಳಿದ ಜಂಟಿ ಪ್ರಶ್ನೆಗೆ ತೋಮರ್ ಈ ರೀತಿ ಉತ್ತರಿಸಿದ್ದಾರೆ.

ಕೇಂದ್ರ ಸರ್ಕಾರವು ಜಾರಿಗೊಳಿಸಿದ್ದ 3 ಕೃಷಿ ಕಾಯ್ದೆ(Farm Laws)ಗಳನ್ನು ವಿರೋಧಿಸಿ ಕಳೆದೊಂದು ವರ್ಷದಿಂದ ರೈತರು ಪ್ರತಿಭಟನೆ ನಡೆಸಿದ್ದರು. ‘ಅನ್ನದಾತ’ರ ಪ್ರತಿಭಟನೆಗೆ ಕೊನೆಗೂ ಮಣಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 3 ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವುದಾಗಿ ಘೋಷಿಸಿತ್ತು. ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸುಮಾರು 700ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದರು.

ಇದನ್ನೂ ಓದಿ: 'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉದ್ಯೋಗಗಳಲ್ಲಿ ಶೇ 30 ರಷ್ಟು ಮೀಸಲಾತಿ'

ಶುಕ್ರವಾರ(ಡಿ.10) ಈ ಬಗ್ಗೆ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ‘ರೈತ ಚಳವಳಿ(Farmers Protes)ಯಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ನೀಡುವ ವಿಷಯವು ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದೆ. ರೈತರ ಧರಣಿ ವೇಳೆ ಪೊಲೀಸರ ಕ್ರಮದಿಂದ ಯಾವುದೇ ರೈತ ಸಾವನ್ನಪ್ಪಿಲ್ಲ’ ಅಂತಾ ಹೇಳಿದ್ದಾರೆ. ರೈತರ ಪ್ರತಿಭಟನೆ ವೇಳೆ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಜೀವನೋಪಾಯಕ್ಕಾಗಿ ಪರಿಹಾರ ನೀಡಲು ಸರ್ಕಾರ ಯೋಚಿಸುತ್ತಿದೆಯೇ ಅಥವಾ ಒದಗಿಸುತ್ತಿದೆಯೇ ಎಂದು ಕಾಂಗ್ರೆಸ್ ನಾಯಕ ಧೀರಜ್ ಪ್ರಸಾದ್ ಸಾಹು ಮತ್ತು ಎಎಪಿ ನಾಯಕ ಸಂಜಯ್ ಸಿಂಗ್ ಅವರು ಜಂಟಿ ಪ್ರಶ್ನೆ ಕೇಳಿದ್ದರು.   

ಪ್ರತಿಭಟನಾಕಾರರ ವಿರುದ್ಧದ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಸೇರಿದಂತೆ ಅವರ ಪ್ರಮುಖ ಬಾಕಿ ಇರುವ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಅಂಗೀಕರಿಸಿದ ನಂತರ ದೆಹಲಿ ಗಡಿಯಲ್ಲಿ ವರ್ಷವಿಡೀ ನಡೆದ ಪ್ರತಿಭಟನೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ(ಎಸ್‍ಕೆಎಂ) ಕೈಬಿಟ್ಟಿತ್ತು.

ಇದನ್ನೂ ಓದಿ: IRCTCನಲ್ಲಿ ತತ್ಕಾಲ್ ಬುಕಿಂಕ್ ಗೆ ಈ ಟ್ರಿಕ್ ಬಳಸಿ: ಚಿಟಿಕೆಯಲ್ಲಿ ನಿಮ್ಮ ಸೀಟ್ Confirm ಆಗುತ್ತದೆ

1 ವರ್ಷದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತರ ಸಾವಿನ ವಿಷಯವನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಪ್ರಶ್ನೆ ಮಾಡುತ್ತಿವೆ. ಬಾಕಿ ಉಳಿದಿರುವ ತಮ್ಮ ಪ್ರಮುಖ ಬೇಡಿಕೆಗಳನ್ನು ಅಂಗೀಕರಿಸಿ ಕೇಂದ್ರ ಸರ್ಕಾರದಿಂದ ಔಪಚಾರಿಕ ಪತ್ರ ಸ್ವೀಕರಿಸಿದ ನಂತರ ಪ್ರತಿಭಟನೆಯನ್ನು ಎಸ್‍ಕೆಎಂ ಸ್ಥಗಿತಗೊಳಿಸಿದೆ. ರೈತರು ಇಂದು ಅಂದರೆ ಡಿಸೆಂಬರ್ 11 ಅನ್ನು ‘ವಿಜಯ್ ದಿವಸ್’ ಎಂದು ಆಚರಿಸಲಿದ್ದಾರೆ. ವಿಜಯೋತ್ಸವವನ್ನು ಕೈಗೊಂಡ ನಂತರ ಎಲ್ಲಾ ರೈತರು ಮನೆಗೆ ಹೋಗುತ್ತಾರೆ ಎಂದು ರೈತ ಸಂಘಟನೆ ಮುಖಂಡರು ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಚಳಿಗಾಲದ ಅಧಿವೇಶನ(Parliament Winter Session)ದಲ್ಲಿ (ನ.29) ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News